ನ್ಯೂಯಾರ್ಕ್: ಸೂಪರ್-8 ಪ್ರವೇಶದ ಇರಾದೆಯೊಂದಿಗೆ ಭಾರತ(IND vs USA) ಮತ್ತು ಅಮೆರಿಕ ಇಂದು ನಡೆಯುವ ಟಿ20 ವಿಶ್ವಕಪ್ನ(T20 World Cup 2024) 25ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಯಾರೇ ಗೆದ್ದರೂ ‘ಎ’ ವಿಭಾಗದಿಂದ ಮೊದಲ ತಂಡವಾಗಿ ಸೂಪರ್-8 ಟಿಕೆಟ್ ಗಿಟ್ಟಿಸಿಕೊಳ್ಳಲಿದ್ದಾರೆ. ಪಂದ್ಯಕ್ಕೆ ಮಳೆ ಭೀತಿ ಕೂಡ ಎದುರಾಗಿದೆ. ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳು ಕೂಡ ಸೂಪರ್-8ಗೆ ಪ್ರವೇಶಪಡೆಯಲಿದೆ. ಆಗ ಪಾಕಿಸ್ತಾನ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.
ಹವಾಮಾನ ವರದಿ
ಅಕ್ಯುವೆದರ್‌ನ ಮುನ್ಸೂಚನೆಯ ಪ್ರಕಾರ ಅಮೆರಿಕದ ಕಾಲಮಾನದ ಪ್ರಕಾರ ಮಧ್ಯಾಹ್ನದ ವೇಳೆ ಶೇ. 40 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಭಾರತದಲ್ಲಿ ಈ ಪಂದ್ಯ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತದೆ.
ಪಿಚ್ ರಿಪೋರ್ಟ್
ಸಂಪೂರ್ಣ ಬೌಲಿಂಗ್ ಟ್ರ್ಯಾಕ್ ಆಗಿರುವ ನಸ್ಸೌ ಪಿಚ್ನಲ್ಲಿ ಬ್ಯಾಟಿಂಗ್ ನಡೆಸುವುದು ಅಷ್ಟು ಸುಲಭವಲ್ಲ. 100 ರನ್ ಬಾರಿಸಿದರೂ ಇದನ್ನು ತಡೆದು ನಿಲ್ಲಿಸುವ ಸಾಮರ್ಥ್ಯ ಬೌಲರ್ಗಳಿಗಿದೆ. ಪಿಚ್ನಲ್ಲಿ ಬಿರುಕು ಇರುವ ಕಾರಣ ಚೆಂಡಿನ ಚಲನೆ ಯಾವ ರೀತಿ ಇರುತ್ತದೆ ಎನ್ನುವುದನ್ನು ಅರಿತುಕೊಳ್ಳುವಲ್ಲಿ ಬ್ಯಾಟರ್ಗಳು ವಿಫಲರಾಗುತ್ತಿದ್ದಾರೆ. ಇದುವರೆಗೂ ಇಲ್ಲಿ ನಡೆದ ಪಂದ್ಯದಲ್ಲಿ 120 ರನ್ಗಳ ಗಡಿ ದಾಟಿಲ್ಲ.
ಅಮೆರಿಕ ತಂಡ ಕ್ರಿಕೆಟ್ ಶಿಶು ಆಗಿದ್ದರೂ ಕೂಡ ತಂಡದಲ್ಲಿ ಆಡುವ ಆಟಗಾರರಿಗೆ ಕ್ರಿಕೆಟ್ ಹೊಸದಲ್ಲ. ಎಲ್ಲರು ಅನುಭವಿ ಆಟಗಾರರು. ಈ ತಂಡದ ವಿಶೇಷವೆಂದರೆ ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್, ಕೆನಡಾ ಸೇರಿ ಹಲವು ದೇಶಗಳ ಕ್ರಿಕೆಟಿಗರು ಈ ತಂಡದಲ್ಲಿ ಕಾಣಿಸಿಕೊಂಡಿರುವುದು. ಬಹುಪಾಲು ಭಾರತೀಯ ಆಟಗಾರರೇ ನೆಚ್ಚಿಕೊಂಡಿದ್ದಾರೆ. ಕನ್ನಡಿಗ ನಾಸ್ತುಷ್ ಕೆಂಜಿಗೆ, 2010ರಲ್ಲಿ ಭಾರತ ಪರ 19 ವಿಶ್ವಕಪ್ ಆಡಿದ್ದ ಎಡಗೈ ವೇಗದ ಬೌಲರ್ ಸೌರಭ್ ನೇತ್ರವಲ್ಕರ್, ನಾಯಕ ಮೊನಾಂಕ್ ಪಟೇಲ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ.
ಇದನ್ನೂ ಓದಿ T20 World Cup : ಕೊನೆಗೂ ದುರ್ಬಲ ಕೆನಾಡ ತಂಡದ ವಿರುದ್ಧ ಜಯ ಗಳಿಸಿದ ಪಾಕಿಸ್ತಾನ
ವಿಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾದ ಆರನ್ ಜೋನ್ಸ್ ಕೂಡ ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಭಾರತ ಯಾವುದೇ ಕಾರಣಕ್ಕೂ ಎದುರಾಳಿಗಳನ್ನು ಕಡೆಗಣಿಸುವಂತಿಲ್ಲ. ಈಗಾಗಲೇ ಪಾಕಿಸ್ತಾನಕ್ಕೂ ಅಮೆರಿಕ ನೀರು ಕುಡಿಸಿದೆ. ಹೀಗಾಗಿ ಅತಿಯಾದ ಆತ್ಮವಿಶ್ವಾಸದಿಂದ ಈ ಸವಾಲನ್ನು ಹಗುರವಾಗಿ ಕಂಡೆರೆ ಭಾರತಕ್ಕೂ ಸೋಲು ಕಟ್ಟಿಟ್ಟ ಬುತ್ತಿ! ಎನ್ನಲಡ್ಡಿಯಿಲ್ಲ.
ಸಂಭಾವ್ಯ ತಂಡ
ಅಮೆರಿಕ: ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಜಸ್ದೀಪ್ ಸಿಂಗ್, ನಾಸ್ತುಷ್ ಕೆಂಜಿಗೆ, ಸೌರಭ್ ನೇತ್ರವಲ್ಕರ್, ಅಲಿ ಖಾನ್.
ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.