Site icon Vistara News

IND vs WI 1st ODI: ನಿದ್ದೆ ಇಲ್ಲದೆ ಬೆಳಗಿನ ಜಾವ 3ರ ತನಕ ಏರ್‌ಪೋರ್ಟ್‌ನಲ್ಲೇ ಉಳಿದ ಟೀಮ್​ ಇಂಡಿಯಾ ಆಟಗಾರರು!

team india cricket players

ಬಾರ್ಬಡಾಸ್​: ಭಾರತ ಮತ್ತು ವಿಂಡೀಸ್​ ನಡುವಿನ ಏಕದಿನ ಸರಣಿಯ(IND vs WI 1st ODI) ಮೊದಲ ಪಂದ್ಯ ಗುರುವಾರ ನಡೆಯಲಿದೆ. ಆದರೆ ಈ ಪಂದ್ಯಕ್ಕಾಗಿ ಪೋರ್ಟ್​ ಆಫ್ ಸ್ಪೇನ್​ನಿಂದ ಬಾರ್ಬಡಾಸ್​ಗೆ ತೆರಳುವ ವೇಳೆ ಭಾರತ ತಂಡದ ಆಟಗಾರರು ವಿಮಾನ ವಿಳಂಬದಿಂದ ಸಂಕಷ್ಟ ಎದುರಿಸಿದ್ದಾರೆ. ಸರಿಯಾದ ಸಮಯಕ್ಕೆ ವಿಮಾನ ಬಾರದ ಕಾರಣ ಟೀಮ್​ ಇಂಡಿಯಾ ಆಟಗಾರರು ಬೆಳಗಿನ ಜಾವ 3ರ ತನಕ ಏರ್‌ಪೋರ್ಟ್‌ನಲ್ಲೇ ಉಳಿದ ಘಟನೆ ನಡೆದಿದೆ.

ವೆಸ್ಟ್ ಇಂಡೀಸ್‌ ವಿರುದ್ಧ ಅಂತಿಮ ಟೆಸ್ಟ್​ ಪಂದ್ಯ ಆಡಿದ ಬಳಿಕ ಭಾರತೀಯ ಆಟಗಾರರು ಟ್ರಿನಿಡಾಡ್‌ನಿಂದ ರಾತ್ರಿ 11 ಗಂಟೆಗೆ ನಿರ್ಗಮಿಸಬೇಕಾಗಿತ್ತು, ಆದರೆ ಹವಾಮಾನ ವೈಪರೀತ್ಯದಿಂದ ವಿಮಾನ ತಡವಾಗಿ ಬಂದಿದೆ. ಹೀಗಾಗಿ ಟೆಸ್ಟ್​ ಆಡಿದ ಭಾರತೀಯ ಆಟಗಾರರು ಬೆಳಗಿನ ಜಾವದ ವರೆಗೆ ಏರ್‌ಪೋರ್ಟ್‌ನಲ್ಲೇ ಉಳಿದಿದ್ದಾರೆ. ಸರಿಯಾಗಿ ನಿದ್ರೆ ಮಾಡಲಾಗದೆ ಕಿರಿಕಿರಿ ಅನುಭವಿಸಿದ್ದಾರೆ. ಇದೇ ವಿಚಾರವಾಗಿ ಬಿಸಿಸಿಐ ವಿರುದ್ಧ ಹಿರಿಯ ಆಟಗಾರರು ಬೇಸರವನ್ನು ವ್ಯಕ್ತಪಡಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ವಿಮಾನ ನಾಲ್ಕು ಗಂಟೆಗಳ ಕಾಲ ವಿಳಂಬವಾಗಿದ್ದರಿಂದ ಆಟಗಾರರ ನಿದ್ರೆಗೆ ತೊಂದರೆ ಉಂಟಾಗಿದೆ. ಇದರಿಂದ ಹಿರಿಯ ಆಟಗಾರರಾದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ ಬೇಸರಗೊಂಡಿದ್ದು ಇನ್ನು ಮುಂದೆ ತಡರಾತ್ರಿ ವಿಮಾನಗಳ ಪ್ರಯಾಣವನ್ನು ಕೈ ಬಿಡಬೇಕೆಂದು ಬಿಸಿಸಿಐ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆಂದು ವರದಿಯಲ್ಲಿ ತಿಳಿಸಿದೆ.

ಮುಂದಿನ ಎರಡು ಏಕದಿನ ಮತ್ತು ಟಿ20 ಸರಣಿಯ ವೇಳೆ ತಡರಾತ್ರಿಯ ವಿಮಾನಗಳ ಬದಲಿಗೆ ಬೆಳಗಿನ ವಿಮಾನಗಳನ್ನು ಕಾಯ್ದಿರಿಸುವಂತೆ ಟೀಮ್‌ ಮ್ಯಾನೇಜ್‌ಮೆಂಟ್‌ ಬಿಸಿಸಿಐಗೆ ಮನವಿ ಮಾಡಿದ್ದು ಇದಕ್ಕೆ ಬಿಸಿಸಿಐ ಒಪ್ಪಿಗೆ ಸೂಚಿಸಿದೆ. ಜತೆಗೆ ನಿಗದಿಯಾದ ಎಲ್ಲ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಇದನ್ನೂ ಓದಿ IND vs WI: ಭಾರತ-ವಿಂಡೀಸ್​ ನಡುವಣ ಮೊದಲ ಏಕದಿನ ಪಂದ್ಯಕ್ಕೆ ಮಳೆಯ ಕಾಟ?

ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್​ ಸ್ಟೇಡಿಯಂನಲ್ಲಿ(Kensington Oval, Bridgetown, Barbados) ನಡೆಯುವ ಮೊದಲ ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ. ವಿಂಡೀಸ್​ನಲ್ಲಿ ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗುತ್ತದೆ. ಹವಾಮಾನ ಇಲಾಖೆ ಬುಧವಾರ ನೀಡಿದ ಮಾಹಿತಿ ಪ್ರಕಾರ ಪಂದ್ಯದ ವೇಳೆ ಶೇ.7 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿತ್ತು. ಆದರೆ ಗುರುವಾರ ನೀಡಿದ ಹೊಸ ಮುನ್ಸೂಚನೆಯಲ್ಲಿ ವಿಂಡೀಸ್​ ಕಾಲಮಾನದ ಪ್ರಕಾರ ರಾತ್ರಿ ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ. ಹೀಗಾಗಿ ದ್ವಿತೀಯ ಇನಿಂಗ್ಸ್​ ಆಟ ನಡೆಯುವುದು ಅನುಮಾನ ಎನ್ನಲಾಗಿದೆ.

Exit mobile version