ಬ್ರಿಜ್‌ಟೌನ್ (ಬಾರ್ಬಡಾಸ್): ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮರೆತವರಂತೆ ಆಡಿ ಹೀನಾಯ ಸೋಲು ಕಂಡ ವೆಸ್ಟ್ ಇಂಡೀಸ್ ತಂಡ ಭಾರತ ವಿರುದ್ಧ ದ್ವಿತೀಯ(IND vs WI 2nd ODI) ಪಂದ್ಯವನ್ನು ಆಡಲು ಸಜ್ಜಾಗಿದೆ. ಸರಣಿಯನ್ನು ಜೀವಂತವಿರಿಸಬೇಕಿದ್ದರೆ ವಿಂಡೀಸ್ಗೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಸದ್ಯದ ಪರಿಸ್ಥಿತಿ ನೋಡುವಾಗ ದಿಕ್ಕು ತಪ್ಪಿದ ವಿಂಡೀಸ್ ಈ ಪಂದ್ಯದಲ್ಲಿಯೂ ಗೆಲ್ಲುವುದು ಅನುಮಾನ ಎನ್ನುವಂತಿದೆ.
ಇಂದು(ಶನಿವಾರ) ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆಯುವ ಉಭಯ ತಂಡಗಳ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಯಾವುದೇ ಸಾಧ್ಯತೆ ಇಲ್ಲ, ಆದರೆ ಗಾಳಿಯ ವೇಗ ಗಂಟೆಗೆ 26 ಕಿ.ಮೀ. ಮತ್ತು ತಾಪಮಾನವು ಸುಮಾರು 28 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ(Weather Forecast) ನೀಡಿದೆ. ಹೀಗಾಗಿ ಪಂದ್ಯ ಸರಾಗವಾಗಿ ಸಾಗಲಿದೆ. ಮೊದಲ ಪಂದ್ಯಕ್ಕೆ ಇಲ್ಲಿ ಶೇ.7ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತಾದರೂ ಮಳೆ ಬಂದಿರಲಿಲ್ಲ.
ಭಾರತ ತಂಡದಲ್ಲಿ ಈ ಪಂದ್ಯಕ್ಕೆ ಬದಲಾವಣೆ ಕಷ್ಟಸಾಧ್ಯ. ಮೊದಲ ಪಂದ್ಯದಲ್ಲಿ ಕಣಕ್ಕಿಳಿದ ತಂಡವನ್ನೇ ಈ ಪಂದ್ಯದಲ್ಲಿಯೂ ಮುಂದುವರಿಸಬಹುದು. ಆದರೆ ಶುಭಮನ್ ಗಿಲ್(shubman gill) ಮತ್ತು ಸೂರ್ಯಕುಮಾರ್(suryakumar yadav) ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಪ್ರದರ್ಶನ ತೋರಬೇಕಾದ ಅನಿವಾರ್ಯತೆ ಇದೆ. ಗಿಲ್ ಅವರು ಐಪಿಎಲ್ನಲ್ಲಿ ತೋರಿದ ಬ್ಯಾಟಿಂಗ್ ಚಾರ್ಮ್ ಆ ಬಳಿಕ ಆಡಿದ ಸರಣಿಗಳಲ್ಲಿ ತೋರಿಲ್ಲ. ಭವಿಷ್ಯದ ಆಟಗಾರ ಎಂದು ಗುರುತಿಸಲ್ಪಟ್ಟಿದ ಅವರು ಇದೀಗ ಕಳಪೆ ಪ್ರದರ್ಶನ ತೋರುವ ಮೂಲಕ ಅವರ ಮೇಲಿಟ್ಟಿದ್ದ ನಿರೀಕ್ಷೆಗಳನ್ನು ಹುಸಿಯಾಗಿಸುತ್ತಿದ್ದಾರೆ. ಪ್ರತಿಷ್ಠಿತ ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಇದಕ್ಕೂ ಮುನ್ನ ಗಿಲ್ ಅವರು ತಮ್ಮ ಹಳೆಯ ಬ್ಯಾಟಿಂಗ್ ಪಾರ್ಮ್ ಕಂಡುಕೊಳ್ಳಬೇಕಿದೆ. ಇವರ ಜತೆ ಟಿ20 ನಂ.1 ಬ್ಯಾಟರ್ ಆಗಿರುವ ಸೂರ್ಯಕುಮಾರ್ ಕೂಡ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಬೇಕಿದೆ.
ಇದನ್ನೂ ಓದಿ Rohit Sharma: ಕೇವಲ ಇಷ್ಟು ರನ್ ಬಾರಿಸಿದರೆ ನೂತನ ದಾಖಲೆ ಬರೆಯಲಿದ್ದಾರೆ ಹಿಟ್ಮ್ಯಾನ್ ರೋಹಿತ್
ಮೊದಲ ಪಂದ್ಯದಲ್ಲಿ ನಡೆಸಿದ ಬ್ಯಾಟಿಂಗ್ ಕ್ರಮಾಂಕದ ಬದಲಾವಣೆ ಈ ಪಂದ್ಯದಲ್ಲಿಯೂ ಮುಂದುವರಿಯುವುದು ಅನುಮಾನ. ಈ ಮಾತನ್ನು ನಾಯಕ ರೋಹಿತ್ ಕೂಡ ಮೊದಲ ಪಂದ್ಯದ ಗೆಲುವಿನ ಬಳಿಕ ಹೇಳಿದ್ದರು. ಆದರೆ ವಿಂಡೀಸ್ ಮೊದಲು ಬ್ಯಾಟಿಂಗ್ ನಡೆಸಿ 100ರ ಒಳಗಡೆ ಆಲೌಟ್ ಆದರೆ ಆಗ ಯುವ ಆಟಗಾರರಿಗೆ ಮತ್ತೆ ಬ್ಯಾಟಿಂಗ್ ಬಡ್ತಿ ನೀಡುವ ಸಾಧ್ಯತೆ ಇದೆ.
ಸಂಭ್ಯಾವ್ಯ ತಂಡ
ಭಾರತ: ರೋಹಿತ್ ಶರ್ಮ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜ, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ಮುಕೇಶ್ ಕುಮಾರ್.
ವೆಸ್ಟ್ ಇಂಡೀಸ್: ಶೈ ಹೋಪ್ (ನಾಯಕ), ರೋವ್‌ಮನ್ ಪೊವೆಲ್ (ಉಪನಾಯಕ), ಅಲಿಕ್ ಅಥಾನಾಜೆ, ಯಾನಿಕ್ ಕರಿಯಾ, ಕೈಲ್ ಮೇಯರ್ಸ್, ಶಿಮ್ರಾನ್ ಹೆಟ್‌ಮೇರ್, ಜೇಡನ್ ಸಿನ್‌ಸ್, ರೊಮಾರಿಯೋ ಶೆಫರ್ಡ್, ಕೆವಿನ್ ಸಿಂಕ್ಲರ್, ಡಕೇಶ್ ಮೋಟಿ, ಡೊಮಿನಿಕ್ ಡ್ರೇಕ್ಸ್.