ಗಯಾನಾ: ಮುಂದಿನ ವರ್ಷದ ಟಿ20 ವಿಶ್ವಕಪ್ (T20 World Cup 2024) ಪಂದ್ಯಾವಳಿಗೆ ಎಳೆಯರ ಸಮರ್ಥ ತಂಡವೊಂದನ್ನು ರೂಪುಗೊಳಿಸುವ ಉದ್ದೇಶದಿಂದ ವಿಂಡೀಸ್ ವಿರುದ್ಧ ಕಣಕ್ಕಿಳಿದ ಭಾರತ ತಂಡಕ್ಕೆ ಮೊದಲ ಟಿ20 ಪಂದ್ಯದಲ್ಲಿ ಸೋಲಿನ ಆಘಾತ ಎದುರಾಗಿತ್ತು. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದ ಈ ಯಂಗ್ ಟೀಮ್ ಇಂಡಿಯಾ ದ್ವಿತೀಯ(IND vs WI 2nd T20) ಪಂದ್ಯದಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ. ಇತ್ತಂಡಗಳ ಈ ಪಂದ್ಯ ಭಾನುವಾರ ನಡೆಯಲಿದೆ.
ಮೂರು ಸ್ಪಿನ್ನರ್ಗಳನ್ನು ಆಡಿಸಿ ಬ್ಯಾಟಿಂಗ್ ಕೊರತೆ ಎದುರಿಸಿದ ಹಾರ್ದಿಕ್ ಪಡೆ ಈ ಪಂದ್ಯದಲ್ಲಿ ಒಬ್ಬ ಸ್ಪಿನ್ ಆಟಗಾರನನ್ನು ಕೈ ಬಿಡುವುದು ಪಕ್ಕಾ ಆಗಿದೆ. ಯಜುವೇಂದ್ರ ಚಹಲ್ ಅವರನ್ನು ಈ ಪಂದ್ಯದಿಂದ ಕೈ ಬಿಟ್ಟು ಅವರ ಬದಲಿಗೆ ಹೆಚ್ಚುವರಿ ಬ್ಯಾಟರ್ ಆಗಿ ಯಶಸ್ವಿ ಜೈಸ್ವಾಲ್ ಅವಕಾಶ ಪಡೆಯುವ ಸಾಧ್ಯತೆ ಅಧಿಕ. ಈಗಾಗಲೇ ಜೈಸ್ವಾಲ್ ಚೊಚ್ಚಲ ಟೆಸ್ಟ್ನಲ್ಲಿಯೇ ಶತಕ ಬಾರಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಜತೆಗೆ ಐಪಿಎಲ್ನಲ್ಲಿಯೂ ಉತ್ತಮ ಪ್ರದರ್ಶನ ತೋರಿದ್ದಾರೆ. ಹೊಡಿ-ಬಡಿ ಆಟಕ್ಕೆ ಹೆಸರುವಾಸಿಯಾಗಿರುವ ಕಾರಣ ಅವರು ದ್ವಿತೀಯ ಪಂದ್ಯದಲ್ಲಿ ಆಡುವುದು ಖಚಿತವಾದಂತಿದೆ.
ಯುವ ಎಡಗೈ ಆಟಗಾರ ತಿಲಕ್ ವರ್ಮ ಕೂಡ ಕಳೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ನಡೆಸಿ ಗಮನಸೆಳೆದಿದ್ದರು. ಈ ಪಂದ್ಯದಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಿದರೆ ಮಧ್ಯಮ ಕ್ರಮಾಂಕದಲ್ಲಿ ಓರ್ವ ಬಲಿಷ್ಠ ಎಡಗೈ ಆಟಗಾರನ ಕೊರತೆಯೊಂದು ನೀಗಿದಂತಾಗುತ್ತದೆ. ಆದರೆ ಟಿ20ಯಲ್ಲಿ ಮಿಂಚುತ್ತಿದ್ದ 360 ಡಿಗ್ರಿ ಬ್ಯಾಟರ್ ಸೂರ್ಯಕುಮಾರ್ ಯಾದವ್ ಬ್ಯಾಟ್ ಸದ್ದು ಮಾಡುತ್ತಿಲ್ಲ. ಈ ಬಾರಿಯ ಐಪಿಎಲ್ನಲ್ಲಿಯೂ ಹೇಳಿಕೊಳ್ಳುವ ಪ್ರದರ್ಶನ ಕಂಡು ಬಂದಿಲ್ಲ. ವಿಂಡೀಸ್ ಎದುರಿನ ಏಕದಿನದಲ್ಲಿಯೂ ಅವರು ಘೋರ ವೈಫಲ್ಯ ಕಂಡಿದ್ದರು. ಈ ಪಂದ್ಯದಲ್ಲಾದರೂ ಸಿಡಿದಾರೆ ಎಂದು ಕಾದು ನೋಡಬೇಕಿದೆ. ವಿಶ್ವಕಪ್ಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿರುವುದು ಸೂರ್ಯಗೆ ಹಿನ್ನಡೆಯಾಗಿ ಪರಿಣಮಿಸಿದೆ. ಹೀಗಾಗಿ ಈ ಪಂದ್ಯದಲಿಂದಲೇ ಅವರು ಜವಾಬ್ದಾರಿಯುತ ಆಟ ತೋರ್ಪಡಿಸುವ ಅಗತ್ಯವಿದೆ.
ಇದನ್ನೂ ಓದಿ IND vs WI 2nd T20: ದ್ವಿತೀಯ ಟಿ20ಗೆ ಭಾರತ ತಂಡದಲ್ಲಿ ಒಂದು ಬದಲಾವಣೆ; ಪಿಚ್ ರಿಪೋರ್ಟ್ ಹೀಗಿದೆ!
ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ತಂಡಕ್ಕೆ ಮೇಜರ್ ಲೀಗ್ ಚಾಂಪಿಯನ್‌ಶಿಪ್ ಕಿರೀಟ ತೊಡಿಸಿದ ನಿಕೋಲಸ್ ಪೂರಣ್ ಭರ್ಜರಿ ಫಾರ್ಮ್ನಲ್ಲಿರುವುದು ವಿಂಡೀಸ್ಗೆ ಆನೆ ಬಲ ಬಂದಂತಾಗಿದೆ. ಇವರ ಜತೆ ಶಿಮ್ರಾನ್ ಹೆಟ್ಮೇರ್ ಕೂಡ ಸಿಡಿದು ನಿಂತರೆ ಭಾರತೀಯ ಬೌಲರ್ಗಳು ದಂಡಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನ ಬೇಡ. ಹೀಗಾಗಿ ಈ ಅಪಾಯಕಾರಿ ಆಟಗಾರರನ್ನು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಇರದಂತೆ ಭಾರತೀಯ ಬೌಲರ್ಗಳು ನೋಡಿಕೊಳ್ಳಬೇಕಿದೆ. ಜತೆಗೆ ಬ್ಯಾಟಿಂಗ್ನಲ್ಲಿಯೂ ತಪ್ಪುಗಳನ್ನು ತಿದ್ದಿಕೊಳ್ಳಬೇಕಿದೆ. ಕಳೆದ ಪಂದ್ಯದ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಕಾರಣ ಎಂದು ಸ್ವತಃ ನಾಯಕ ಹಾರ್ದಿಕ್ ದೂರಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.