Site icon Vistara News

IND vs WI 2nd T20: ದ್ವಿತೀಯ ಟಿ20ಗೆ ಭಾರತ ತಂಡದಲ್ಲಿ ಒಂದು ಬದಲಾವಣೆ; ಪಿಚ್​ ರಿಪೋರ್ಟ್​ ಹೀಗಿದೆ!

Providence Stadium, Guyana

ಗಯಾನಾ​: ವಿಂಡೀಸ್​ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೋಲು ಕಂಡ ಭಾರತ(IND vs WI 2nd T20) ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಉಭಯ ತಂಡಗಳ ಈ ಮುಖಾಮುಖಿ ಭಾನುವಾರ ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಏರ್ಪಡಲಿದೆ. ಪಂದ್ಯ ಭಾರತೀಯ ಕಾಲಮಾನ ರಾತ್ರಿ 8ಕ್ಕೆ ಆರಂಭಗೊಳ್ಳಲಿದೆ. ಈ ಪಂದ್ಯಕ್ಕೆ ಭಾರತ ತನ್ನ ತಂಡದಲ್ಲಿ ಒಂದು ಬದಲಾವಣೆ ಮಾಡುವ ಸಾಧ್ಯತೆ ಅಧಿಕ. ಪಂದ್ಯದ ಪಿಚ್​ ರಿಪೋರ್ಟ್​,ಹವಾಮಾನ ವರದಿ ಮತ್ತು ಸಂಭಾವ್ಯ ತಂಡಗಳ ಮಾಹಿತಿ ಇಂತಿದೆ.

ಹವಾಮಾನ ವರದಿ

ಮೊದಲ ಪಂದ್ಯಕ್ಕೆ ಇಲ್ಲಿ ಶೇ.40 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ(weather forecast) ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಮಳೆಯ ಯಾವುದೇ ಕಾಟ ಇರದೆ ಪಂದ್ಯ ಪೂರ್ಣಗೊಂಡಿತ್ತು. ಶನಿವಾರ ಇಲ್ಲಿ ಉತ್ತಮ ಬಿಸಿ ವಾತಾವರಣ ಕಂಡು ಬಂದಿದ್ದು ಭಾನುವಾರವೂ ಯಾವುದೇ ಮಳೆ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಪಂದ್ಯಕ್ಕೆ ಯಾವುದೇ ಅಡಚಣೆ ಉಂಟಾಗದು. ಆದರೆ ಗಾಳಿಯ ಪ್ರಮಾಣ ಕೊಂಚ ಅಧಿಕವಾಗಿ ಕಂಡು ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಿಚ್​ ರಿಪೋರ್ಟ್​

ಗಯಾನದ ಪ್ರಾವಿಡೆನ್ಸ್ ಪಿಚ್​ ಹೆಚ್ಚು ವೇಗಿಗಳಿಗೆ ನೆರವು ನೀಡುತ್ತದೆ. ಭಾರತ ಇಲ್ಲಿ 2019ರಲ್ಲಿ ಕೊನೆಯ ಬಾರಿ ಪಂದ್ಯವನ್ನಾಡಿತ್ತು. ಈ ಪಂದ್ಯದಲ್ಲಿ ಭಾರತ 7 ವಿಕೆಟ್​ಗಳ ಗೆಲುವು ಸಾಧಿಸಿತ್ತು. ಇದುವರೆ ಈ ಸ್ಟೇಡಿಯಂನಲ್ಲಿ ಭಾರತ 2 ಪಂದ್ಯಗಳನ್ನು ಗೆದ್ದಿದೆ. ವಿಂಡೀಸ್​ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್​ ನಡೆಸುವ ತಂಡಕ್ಕೆ ಇಲ್ಲಿ ಹೆಚ್ಚಿನ ರನ್​ ಗಳಿಸಿಸಲು ಕಷ್ಟಕರ. ಪಂದ್ಯ ಸಾಗಿದಂತೇ ಇಲ್ಲಿನ ಪಿಚ್​ ವರ್ತನೆಯೂ ಬದಲಾಗುತ್ತಾ ಹೋಗುತ್ತದೆ. ಚೇಸಿಂಗ್​ ನಡೆಸುವ ತಂಡಕ್ಕೆ ಹೆಚ್ಚಿನ ಲಾಭ ಗಳಿಸಬಹುದು. ಹೀಗಾಗಿ ಟಾಸ್​ ನಿರ್ಣಾಯಕ ಪಾತ್ರವಹಿಸಲಿದೆ.

ಒಂದು ಬದಲಾವಣೆ ಸಾಧ್ಯತೆ

ಭಾರತ ತಂಡ ಈ ಪಂದ್ಯದಲ್ಲಿ ಕೇವಲ 2 ಸ್ಪಿನ್​ ಬೌಲಿಂಗ್​ಗೆ ಅವಕಾಶ ನೀಡುವ ಸಾಧ್ಯತೆ ಕಂಡುಬಂದಿದೆ. ಕಳೆದ ಪಂದ್ಯದಲ್ಲಿ ಮೂವರು ಸ್ಪಿನ್ನರ್​ಗಳನ್ನು ಕಣಕ್ಕಿಳಿಸಿದರೂ ಇದರಿಂದ ಯಾವುದೇ ಪ್ರಯೋಜನ ಉಂಟಾಗಿರಲಿಲ್ಲ. ಹೀಗಾಗಿ ಹೆಚ್ಚುವರಿ ಬ್ಯಾಟರ್​ ಆಯ್ಕೆ ಮಾಡುವ ಸಾಧ್ಯತೆ ಇದೆ. ಅಕ್ಷರ್​ ಅವರನ್ನು ಕೈ ಬಿಟ್ಟು ಯಶಸ್ವಿ ಜೈಸ್ವಾಲ್​ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ಕಳೆದ ಪಂದ್ಯದ ಸೋಲಿಗೂ ಬ್ಯಾಟಿಂಗ್​ ಕೊರತೆಯೇ ಪ್ರಮುಖ ಕಾರಣವಾಗಿತ್ತು.

ಇದನ್ನೂ ಓದಿ ind vs wi : ಗೆಲುವಿನ ಸಂಭ್ರಮದ ನಡುವೆ ವಿಂಡೀಸ್ ತಂಡಕ್ಕೆ ಫೈನ್​ ಹಾಕಿದ ಐಸಿಸಿ!

ಸಂಭಾವ್ಯ ತಂಡ

ವೆಸ್ಟ್​ ಇಂಡೀಸ್​: ರೋವ್ಮನ್ ಪೊವೆಲ್‌ (ನಾಯಕ), ಕೈಲ್ ಮೇಯರ್ಸ್ (ಉಪ ನಾಯಕ), ರೋಸ್ಟನ್ ಚೇಸ್, ಶಿಮ್ರೋನ್ ಹೆಟ್​ಮೇರ್​, ಜೇಸನ್ ಹೋಲ್ಡರ್, ಶೈಯ್​ ಹೋಪ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ನಿಕೋಲಸ್ ಪೂರನ್, ರೊಮಾರಿಯೋ ಶೆಫರ್ಡ್​, ಒಶಾನೆ ಥಾಮಸ್.

ಭಾರತ: ಇಶಾನ್​ ಕಿಶನ್​, ಶುಭಮನ್​ ಗಿಲ್​, ಯಶಸ್ವಿ ಜೈಸ್ವಾಲ್​, ಸೂರ್ಯಕುಮಾರ್​ ಯಾದವ್​, ಹಾರ್ದಿಕ್​​ ಪಾಂಡ್ಯ(ನಾಯಕ),ಸಂಜು ಸ್ಯಾಮ್ಸನ್, ತಿಲಕ್​ ವರ್ಮ ಯಜುವೇಂದ್ರ ಚಹಲ್​, ಕುಲ್​ದೀಪ್​ ಯಾದವ್​, ಆರ್ಶ್​ದೀಪ್​ ಸಿಂಗ್​, ​, ಮುಖೇಶ್​ ಕುಮಾರ್​.

Exit mobile version