ಟ್ರಿನಿಡಾಡ್: ಪ್ರವಾಸಿ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 141 ರನ್ ಅಂತರದ ಸೋಲು ಕಂಡಿರುವ ಆತಿಥೇಯ ವೆಸ್ಟ್ ಇಂಡೀಸ್, ದ್ವಿತೀಯ ಟೆಸ್ಟ್ (IND vs WI 2nd Test)ಪಂದ್ಯಕ್ಕೆ 13 ಸದಸ್ಯರ ಬಲಿಷ್ಠ ತಂಡವನ್ನು ಮಂಗಳವಾರ ಪ್ರಕಟಿಸಿದೆ. ಆಫ್ ಸ್ಪಿನ್ನರ್ ಕೆವಿನ್ ಸಿಂಕ್ಲೇರ್(Kevin Sinclair) ಅವರು ಮೊದಲ ಬಾರಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಸರಣಿನ್ನು ಡ್ರಾ ಮಾಡಿಕೊಳ್ಳುವ ನಿಟ್ಟಿನಲ್ಲಿ ವಿಂಡೀಸ್ ದ್ವಿತೀಯ ಪಂದ್ಯಕ್ಕೆ ತಂಡದಲ್ಲಿ ಕೆಲ ಬದಲಾವಣೆಯನ್ನು ಮಾಡಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದ ಆಲ್ರೌಂಡರ್ ರೇಮನ್ ರೈಪರ್)Raymon Reifer)(4 ಹಾಗೂ 11) ಅವರನ್ನು ಕೈಬಿಟ್ಟು ಅವರ ಸ್ಥಾನಕ್ಕೆ ಕೆವಿನ್ ಸಿಂಕ್ಲೇರ್ ಆಯ್ಕೆ ಮಾಡಲಾಗಿದೆ. ಸಿಂಕ್ಲೇರ್ ಅವರಿಗೆ ಇದು ಚೊಚ್ಚಲ ಟೆಸ್ಟ್ ಕರೆಯಾಗಿದೆ. ಈಗಾಗಲೇ ಅವರು ವಿಂಡೀಸ್ ಪರ 7 ಏಕದಿನ ಹಾಗೂ 6 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 11 ವಿಕೆಟ್ ಮತ್ತು ಟಿ20ಯಲ್ಲಿ 4 ವಿಕೆಟ್ ಪಡೆದಿದ್ದಾರೆ.
ಮೊದಲ ಪಂದ್ಯದಲ್ಲಿ ಉಸಿರಾಟದ ತೊಂದರೆಯಿಂದ ಬಳಲಿದ ಆಲ್ ರೌಂಡರ್ ರಖೀಂ ಕಾರ್ನ್ವಾಲ್ ಅವರನ್ನು ದ್ವಿತೀಯ ಪಂದ್ಯಕ್ಕೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನ ಕಾರ್ನ್ವಾಲ್ ಬೌಲಿಂಗ್ ನಡೆಸುತ್ತಿದ್ದ ವೇಳೆ ಉಸಿರಾಟದ ಸಮಸ್ಯೆಗೆ ಸಿಲುಕಿ ಬಳಿಕ ಕೆಲಕಾಲ ಮೈದಾನದಿಂದ ಹೊರಗುಳಿದಿದ್ದರು.
ಇದನ್ನೂ ಓದಿ IND vs WI: ದ್ವಿತೀಯ ಟೆಸ್ಟ್ಗೆ ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ
ಟ್ರಿನಿಡಾಡ್ ತಲುಪಿದ ಭಾರತ
ಭಾರತ ತಂಡದ ಆಟಗಾರರು ಟ್ರಿನಿಡಾಡ್ ತಲುಪಿದ್ದು ಅಭ್ಯಾಸ ಕೂಡ ಆರಂಭಿಸಿದ್ದಾರೆ. ಟೀಮ್ ಇಂಡಿಯಾ ಆಟಗಾರರು ಟ್ರಿನಿಡಾಡ್ ತಲುಪಿರುವ ವಿಡಿಯೊವನ್ನು ಬಿಸಿಸಿಐ(BCCI) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದೆ. ಮೊದಲ ದಿನ ಎಲ್ಲ ಆಟಗಾರರು ಕೋಚ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಭಾರತ ಮತ್ತು ವಿಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಜುಲೈ 20 ಗುರುವಾರ ಆರಂಭವಾಗಲಿದೆ.
ದ್ವಿತೀಯ ಟೆಸ್ಟ್ಗೆ ವಿಂಡೀಸ್ ತಂಡ
ಕ್ರೇಗ್ ಬ್ರಾತ್‌ವೇಟ್ (ನಾಯಕ), ಜರ್ಮೈನ್ ಬ್ಲ್ಯಾಕ್‌ವುಡ್ (ಉಪನಾಯಕ), ಅಲಿಕ್ ಅಥನೇಜ್, ತೇಜನಾರಾಯಣ ಚಂದ್ರಪಾಲ್, ರಖೀಂ ಕಾರ್ನ್ವಾಲ್, ಜೋಶುವ ಡಿ ಸಿಲ್ವಾ, ಶಾನನ್ ಗೇಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕಿರ್ಕ್ ಮೆಕೆಂಜಿ, ಕೇಮರ್ ರೂಚ್, ಜೊಮೆಲ್ ವ್ಯಾರಿಕನ್ ಮತ್ತು ಕೆವಿನ್ ಸಿಂಕ್ಲೇರ್.