ಫ್ಲೋರಿಡಾ: ವೆಸ್ಟ್ ಇಂಡೀಸ್(IND vs WI) ಪ್ರವಾಸದ ಎರಡು ಹೆಚ್ಚುವರಿ ಟಿ20 ಪಂದ್ಯಗಳನ್ನು(
West Indies vs India, 4th T20I) ಆಡಲು ಭಾರತ ತಂಡ ಅಮೆರಿಕಕ್ಕೆ ಕಾಲಿಟ್ಟಿದೆ. ಶನಿವಾರ ಯುಎಸ್‌ಎಯ ಫ್ಲೋರಿಡಾದ ಲೌಡರ್‌ಹಿಲ್‌ನಲ್ಲಿ ಕಣಕ್ಕಿಳಿಯಲಿದೆ. ಇದು ಭಾರತದ ಪಾಲಿಗೆ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. 2-1 ಹಿನ್ನಡೆಯಲ್ಲಿರುವ ಪಾಂಡ್ಯ ಪಡೆ ಇಲ್ಲಿ ಸೋತರೆ ಸರಣಿ ಸೋಲಿನ ಅವಮಾನಕ್ಕೆ ಸಿಲುಕಲಿದೆ. ಇದನ್ನು ತಪ್ಪಿಸಬೇಕಿದ್ದರೆ ಗೆಲ್ಲಲೇ ಬೇಕಾದ ಒತ್ತಡವಿದೆ.
ಇಲ್ಲಿ ನಡೆಯುವ ಎರಡು ಪಂದ್ಯಗಳು ಭಾರತಕ್ಕೆ ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ ದೃಷ್ಟಿಯಲ್ಲಿಯೂ ಮಹತ್ವದ್ದಾಗಿದೆ. ಏಕೆಂದರೆ ಅಮೆರಿಕ ಕೂಡ ಟೂರ್ನಿಯ ಆತಿಥ್ಯ ವಹಿಸಿಕೊಂಡಿರುವ ಕಾರಣ ಇಲ್ಲಿ ಪಂದ್ಯಗಳು ನಡೆಯಲಿವೆ. ಹೀಗಾಗಿ ಇಲ್ಲಿನ ಪಿಚ್ ಮತ್ತು ವಾತಾವರಣಕ್ಕೆ ಹೊಂದಿಕೊಳ್ಳಲು ಇದು ಭಾರತಕ್ಕೆ ಉತ್ತಮ ಅವಕಾಶವಾಗಿದೆ.
ತಿಲಕ್ ವರ್ಮಾ ಮೇಲೆ ನಿರೀಕ್ಷೆ
ಬಹಳ ಅನುಭವಿಯಂತೆ ಬ್ಯಾಟಿಂಗ್ ನಡೆಸುತ್ತಿರುವ ಭರವಸೆಯ ಆಟಗಾರ ತಿಲಕ್ ವರ್ಮಾ ಪ್ರದರ್ಶನದ ಮೇಲೆ ಈ ಪಂದ್ಯದಲ್ಲಿಯೂ ತಂಡ ಬಹಳಷ್ಟು ನಿರೀಕ್ಷೆ ಇರಿಸಲಾಗಿದೆ. ಈಗಾಗಲೇ ಆಡಿರುವ ಮೂರು ಪಂದ್ಯಗಳಲ್ಲಿ ಕ್ರಮವಾಗಿ 39, 51, ಮತ್ತು 49* ರನ್ ಗಳಿಸಿ ಒಟ್ಟು 139ರನ್ ಗಳಿಸಿದ್ದಾರೆ. ಒಂದೊಮ್ಮೆ ಅವರು ಈ ಪಂದ್ಯದಲ್ಲಿ 93 ರನ್ ಬಾರಿಸಿದರೆ ಕೊಹ್ಲಿಯ ದ್ವಿಪಕ್ಷೀಯ ಸರಣಿಯ ಅತ್ಯಧಿಕ ಮೊತ್ತ ಗಳಿಕೆಯ ದಾಖಲೆ ಪತನಗೊಳ್ಳಲಿದೆ. ಕೊಹ್ಲಿ 2021ರಲ್ಲಿ ಇಂಗ್ಲೆಂಡ್ ವಿರುದ್ಧ ತವರಿನ 5 ಪಂದ್ಯಗಳ ಟಿ20 ಸರಣಿಯಲ್ಲಿ ಮೂರು ಅಜೇಯ ಅರ್ಧಶತಕದ ನೆರವಿನಿಂದ 231 ರನ್ ಗಳಿಸಿದ್ದರು.
ಶ್ರೇಯಸ್ ಅಯ್ಯರ್ ಅವರು ಗಾಯಾಳಾಗಿ ತಂಡಕ್ಕೆ ಮರಳುವ ಕುರಿತು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ ಹೀಗಾಗಿ ಏಷ್ಯಾ ಕಪ್ ಮತ್ತು ವಿಶ್ವಕಪ್ಗೆ ನಾಲ್ಕನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಅವರನ್ನು ಆಡಿಸಲು ಕೋಚ್ ದ್ರಾವಿಡ್ ಮತ್ತು ನಾಯಕ ರೋಹಿತ್ ಒಲವು ತೋರಿದ್ದಾರೆ. ಇದೇ ಕಾರಣಕ್ಕೆ ಅವರನ್ನು ವಿಂಡೀಸ್ ವಿರುದ್ಧವೂ ನಾಲ್ಕನೇ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ.
ಇದನ್ನೂ ಓದಿ ind vs wi : ಕೆಲವೇ ದಿನಗಳ ಅಂತರದಲ್ಲಿ ಮೂರು ಮಾದರಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಭಾರತದ ವೇಗದ ಬೌಲರ್!
ಫಾರ್ಮ್ಗೆ ಮರಳಿದ ಸೂರ್ಯ
ಏಕದಿನ ಸರಣಿಯಲ್ಲಿ ಮತ್ತು ಮೊದಲೆರಡು ಟಿ20 ಪಂದ್ಯಗಳಲ್ಲಿ ಘೋರ ಬ್ಯಾಟಿಂಗ್ ವೈಫಲ್ಯ ಕಂಡ ಹಾರ್ಡ್ ಹಿಟ್ಟರ್ ಸೂರ್ಯ ಕುಮಾರ್ ಯಾದವ್ ಕಳೆದ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಬಾರಿಸುವ ಮಿಂಚಿದ್ದರು. ಈ ಮೂಲಕ ತಮ್ಮ ಹಳೆಯ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡಿದ್ದರು. ಈ ಪಂದ್ಯದಲ್ಲಿಯೂ ಸಿಡಿದರೆ ಭಾರತಕ್ಕೆ ಗೆಲುವು ಖವಿತ ಎನ್ನಲಡ್ಡಿಯಿಲ್ಲ. ಪದಾರ್ಪಣ ಟೆಸ್ಟ್ನಲ್ಲಿ ಶತಕ ಬಾರಿಸಿ ಮಿಂಚಿದ್ದ ಯಶಸ್ವಿ ಜೈಸ್ವಾಲ್ ಟಿ20ಯಲ್ಲಿ ಎಡವಿದ್ದಾರೆ. ಚೊಚ್ಚಲ ಪಂದ್ಯದಲ್ಲೇ ಒಂದಂಕಿಗೆ ಸೀಮಿತರಾಗಿದ್ದರು. ಸಿಕ್ಕ ಅವಕಾಶವನ್ನು ಉಳಿಸಿಕೊಳ್ಳಬೇಕಿದ್ದರೆ ಅವರು ಈ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರಲೇ ಬೇಕಿದೆ. ಇನ್ನೊಂದಡೆ ಶುಭಮನ್ ಗಿಲ್ ಬ್ಯಾಟ್ ಕೂಡ ಸದ್ದು ಮಾಡಬೇಕಿದೆ.
ವಿಂಡೀಸ್ ಕೂಡ ಬಲಿಷ್ಠ
ಕಳೆದ ಪಂದ್ಯದಲ್ಲಿ ಸೋಲು ಕಂಡ ಕಾರಣ ವಿಂಡೀಸ್ ದುರ್ಬಲಗೊಂಡಿದೆ ಎನ್ನುವುದು ಮೂರ್ಕತನ. ಇದೇ ಮೈದಾನಲ್ಲಿ ನಿಕೋಲಸ್ ಪೂರನ್ ಅವರು ವಿಸ್ಫೋಟಕ ಶತಕ ಸಿಡಿಸಿ ಎಂಐ ನ್ಯೂಯಾರ್ಕ್ ತಂಡವನ್ನು ಕಳೆದ ತಿಂಗಷ್ಟೇ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಹೀಗಾಗಿ ಅವರಿಗೆ ಈ ಪಿಚ್ನಲ್ಲಿ ಹಿಡಿತ ಸಾಧಿಸುವ ಅವಕಾಶವಿದೆ. ಇದರ ಜತೆಗೆ ಕೈಲ್ ಮೇಯರ್ಸ್ ಸೇರಿ ಹಲವು ಆಟಗಾರರು ತಂಡದ ನೆರವಿಗೆ ದಾವಿಸಬಲ್ಲರು.