ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್(IND vs WI) ವಿರುದ್ಧದ ಮೊದಲ ಟೆಸ್ಟ್ನಲ್ಲಿ ಬೌಲಿಂಗ್ ಮೂಲಕ ದಾಖಲೆ ಬರೆದಿದ್ದ ಆರ್. ಅಶ್ವಿನ್(Ravichandran Ashwin) ಅವರು ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಈ ಮೂಲಕ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್(vvs laxman) ಅವರ ದೀರ್ಘ ಕಾಲದ ದಾಖಲೆಯೊಂದನ್ನು ಮುರಿದಿದ್ದಾರೆ.
ದ್ವಿತೀಯ ದಿನದಾಟದಲ್ಲಿ ಅಶ್ವಿನ್ ಅವರು 78 ಎಸೆತ ಎದುರಿಸಿ 56 ರನ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು. ಇದೇ ವೇಳೆ ಅವರು ಭಾರತ ತಂಡದ ಪರ 6 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾದರು. ಈ ಮೂಲಕ ವಿವಿಎಸ್ ಲಕ್ಷ್ಮಣ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಲಕ್ಷ್ಮಣ್ ಅವರು ಕೆಳ ಕ್ರಮಾಂಕದಲ್ಲಿ (3,108) ರನ್ ಬಾರಿಸಿದ್ದರು. ಇದೀಗ ಅಶ್ವಿನ್(3,185*) ರನ್ ಗಳಿಸಿ ಲಕ್ಷ್ಮಣ್ ಅವರನ್ನು ಹಿಂದಿಕ್ಕಿದ್ದಾರೆ. 3 ರನ್ ಗಳಿಸುತ್ತಿದ್ದಂತೆ ಅಶ್ವಿನ್ ಈ ದಾಖಲೆ ಬರೆದರು.
ಮೊದಲ ಪಂದ್ಯದಲ್ಲಿ ಅಶ್ವಿನ್ ನಿರ್ಮಿಸಿದ ದಾಖಲೆಗಳು
1. ವೆಸ್ಟ್ ಇಂಡೀಸ್‌ನಲ್ಲಿ ಒಂದೇ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ 5 ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹಿರಿಮೆಗೆ ಅಶ್ವಿನ್ ಪಾತ್ರರಾಗಿದ್ದಾರೆ.
2.ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಬಾರಿ ಅಂತಿಮ ವಿಕೆಟ್ ಉರುಳಿಸಿದ್ದ ಶೇನ್ ವಾರ್ನ್ ದಾಖಲೆಯನ್ನು ಅಶ್ವಿನ್ ಮುರಿದರು. ವಾರ್ನ್ ಅವರು 23ಬಾರಿ ಈ ಸಾಧನೆ ಮಾಡಿದ್ದರು.
3. ವೆಸ್ಟ್ ಇಂಡೀಸ್ ವಿರುದ್ಧ ಗರಿಷ್ಠ 6 ಬಾರಿ ಐದು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳುವ ಮೂಲಕ ಹರ್ಭಜನ್ ಸಿಂಗ್ ಅವರನ್ನು ಹಿಂದಿಕ್ಕಿದರು.
4. 12 ವಿಕೆಟ್ ಪಡೆದ ಅಶ್ವಿನ್ 8ನೇ ಬಾರಿ ಟೆಸ್ಟ್ ಪಂದ್ಯವೊಂದರಲ್ಲಿ 10ಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಮೂಲಕ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಸರಿಗಟ್ಟಿದರು. ಒಂದೊಮ್ಮೆ ಅಂತಿಮ ಟೆಸ್ಟ್ ಪಂದ್ಯದಲ್ಲಿಯೂ ಸ್ಪಿನ್ ಕಮಾಲ್ ಮಾಡಿ 10ಕ್ಕಿಂತ ಅಧಿಕ ವಿಕೆಟ್ ಪಡೆದರೆ ಈ ಸಾಧನೆ ಮಾಡಿದ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.
ಇದನ್ನೂ ಓದಿ IND vs WI: ಗಿಲ್ ಅವರ ಶೈಲಿಯಲ್ಲಿ ಶತಕ ಸಂಭ್ರಮಿಸಿದ ಕಿಂಗ್ ಕೊಹ್ಲಿ
ಹಿಡಿತ ಸಾಧಿಸಿದ ಭಾರತ
ವಿರಾಟ್ ಕೊಹ್ಲಿಯ ಶತಕ ಮತ್ತು ಆರಂಭಿಕ ಆಟಗಾರರಾದ ರೋಹಿತ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡವು ವೆಸ್ಟ್‌ಇಂಡೀಸ್ ಎದುರಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಸುಭದ್ರ ಸ್ಥಿತಿಯಲ್ಲಿದೆ. ಮೊದಲ ಇನಿಂಗ್ಸ್ನಲ್ಲಿ 438 ರನ್ ಗಳಿಸಿದೆ. ಜವಾಬು ನೀಡುತ್ತಿರುವ ವಿಂಡೀಸ್ ಒಂದು ವಿಕೆಟ್ಗೆ 86 ರನ್ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.