ಪೋರ್ಟ್ ಆಫ್ ಸ್ಪೈನ್: ವೆಸ್ಟ್ ಇಂಡೀಸ್(IND vs WI) ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯ ಭಾರತೀಯ ಅಭಿಮಾನಿಗಳಿಗೆ ವಿಶೇಷವಾಗಿದೆ. ವಿಂಡೀಸ್ ವಿರುದ್ಧದ ನೂರನೇ ಟೆಸ್ಟ್ ಪಂದ್ಯದ ಸಂಭ್ರಮ ಮತ್ತು ವಿರಾಟ್ ಕೊಹ್ಲಿಯ(virat kohli) 500ನೇ ಅಂತಾರಾಷ್ಟ್ರೀಯ ಪಂದ್ಯ ಇದಾಗಿದೆ. ಈ ಎರಡು ವಿಚಾರದಲ್ಲಿ ಈ ಪಂದ್ಯದಲ್ಲಿ ಭಾರತೀಯರಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ.
ವಿರಾಟ್ ಕೊಹ್ಲಿ ಅವರು ಈ ಪಂದ್ಯದಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆ ಇತಿಹಾಸ ಬರೆಯಲಿದ್ದಾರೆ ತಮ್ಮ ಕ್ರಿಕೆಟ್ ವೃತ್ತಿಜೀವನದ 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿದ ಆಟಗಾರರ ಎಲೈಟ್ ಪಟ್ಟಿಗೆ ಸೇರ್ಪಡೆಗೊಳ್ಳಲಿದ್ದಾರೆ. ಅಂಡರ್-19 ವಿಶ್ವಕಪ್ ಗೆಲ್ಲುವ ಮೂಲಕ ಛಾಪು ಮೂಡಿಸಿದ್ದ ಕೊಹ್ಲಿ ಇಂದು ವಿಶ್ವ ಕ್ರಿಕೆಟ್ನ ದಿಗ್ಗಜ ಆಟಗಾರನಾಗಿ ಬೆಳೆದು ನಿಂತಿದ್ದಾರೆ.
2008ರಲ್ಲಿ ಭಾರತ ಕ್ರಿಕೆಟ್‌ಗೆ ಪದಾರ್ಪಪಣೆ ಮಾಡಿದ ವಿರಾಟ್ ಆಟಗಾರನಾಗಿ ಮತ್ತು ನಾಯಕನಾಗಿ ಹಲವು ದಾಖಲೆ ಬರೆದಿದ್ದಾರೆ. ಸದ್ಯ 110 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಅವರು, 48.88 ಸರಾಸರಿಯಲ್ಲಿ 8,555 ರನ್ ಗಳಿಸಿದ್ದಾರೆ. ಇದರಲ್ಲಿ 28 ಶತಕ ಮತ್ತು 29 ಅರ್ಧ ಶತಕಗಳು, 7 ದ್ವಿಶತಕಗಳು ಒಳಗೊಂಡಿದೆ. ಅಜೇಯ 254 ರನ್ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಇದಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ನಲ್ಲಿ ಭಾರತ ಪರ ಏಳು ದ್ವಿಶತಕಗಳನ್ನು ಸಿಡಿಸಿದ ಏಕೈಕ ಆಟಗಾರ ಎಂಬ ಸಾಧನೆಯೂ ಅವರ ಹೆಸರಿನಲ್ಲಿದೆ. ವಿರಾಟ್ ನಾಯಕತ್ವದಲ್ಲೇ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಐತಿಹಾಸಿಕ ದಾಖಲೆ ಬರೆದಿತ್ತು.
ಇದನ್ನೂ ಓದಿ ind vs wi : ಬ್ಯಾಟಿಂಗ್ ಸಲಹೆಗಳನ್ನು ಹಂಚಿಕೊಂಡ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ
ಏಕದಿನ ಕ್ರಿಕೆಟ್‌ನಲ್ಲಿ 274 ಪಂದ್ಯಗಳನ್ನು ಆಡಿರುವ ಕೊಹ್ಲಿ, 57.32 ಸರಾಸರಿಯಲ್ಲಿ 12,898 ರನ್ ಕಲೆ ಹಾಕಿದ್ದಾರೆ. 46 ಶತಕ ಮತ್ತು 65 ಅರ್ಧಶತಕಗಳನ್ನು ಸಿಡಿಸಿದ್ದಾರೆ. 115 ಟಿ20 ಪಂದ್ಯಗಳಿಂದ 52.73 ಸರಾಸರಿಯಲ್ಲಿ 4,008 ರನ್ ಸಿಡಿಸಿದ್ದಾರೆ. ಇದರಲ್ಲಿ 1 ಶತಕ, 36 ಅರ್ಧಶತಕಗಳಿವೆ. ವಿಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 32 ರನ್ ಬಾರಿಸಿದರೆ ವಿರೇಂದ್ರ ಸೆಹವಾಗ್(8586 ರನ್) ದಾಖಲೆ ಪತನಗೊಳ್ಳಲಿದೆ. ಸದ್ಯ ವಿರಾಟ್ 8555* ರನ್ ಬಾರಿಸಿದ್ದಾರೆ.