ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ(IND vs WI) ಅಂತಿಮ ಪಂದ್ಯ ಮಳೆಯಿಂದಾಗಿ ಡ್ರಾದಲ್ಲಿ ಅಂತ್ಯ ಕಂಡಿದೆ. ಮೊದಲ ಪಂದ್ಯ ಗೆದಿದ್ದ ಭಾರತ ತಂಡ 1-0 ಅಂತರದಿಂದ ಸರಣಿ ಗೆಲುವು ಕಂಡಿದೆ. ಈ ಮೂಲಕ ವಿಂಡೀಸ್ ವಿರುದ್ಧ ಸತತ 9ನೇ ಸರಣಿ ಗೆಲುವು ದಾಖಲಿಸಿದ ಸಾಧನೆ ಮಾಡಿದೆ. ಆದರೆ ಮೂರನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್(icc world test championship) ಅಂಕಪಟ್ಟಿಯಲ್ಲಿ ಭಾರತ ತಂಡ ಪಾಕ್ಗೆ ಅಗ್ರ ಸ್ಥಾನ ಬಿಟ್ಟುಕೊಟ್ಟಿದೆ.
21 ವರ್ಷಗಳಲ್ಲಿ ಭಾರತ ಅಜೇಯ
ಭಾರತ ತಂಡ ಕಳೆದ 21 ವರ್ಷಗಳಲ್ಲಿ ವಿಂಡೀಸ್ ವಿರುದ್ಧ 9 ಟೆಸ್ಟ್ ಸರಣಿ(India in West Indies Test Series) ಆಡಿದ್ದು ಎಲ್ಲ ಸರಣಿಗಳಲ್ಲಿಯೂ ಗೆದ್ದು ಬೀಗಿದೆ. ಭಾರತ ಗೆಲುವಿನ ಓಟ 2002ರಿಂದ ಮೊದಲ್ಗೊಂಡಿತು. 21 ವರ್ಷಗಳಿಂದ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಯಾವುದೇ ಟೆಸ್ಟ್ ಪಂದ್ಯ ಸೋತಿಲ್ಲ ಎಂಬುದು ಗಮನಾರ್ಹ ಸಂಗತಿ.
ಕೈ ತಪ್ಪಿದ ಅಗ್ರ ಸ್ಥಾನ
ಅಂತಿಮ ಪಂದ್ಯ ಡ್ರಾಗೊಂಡ ಕಾರಣ ಭಾರತಕ್ಕೆ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವೊಂದು ಕೈತಪ್ಪಿತು. ಈ ಲಾಭ ಪಾಕಿಸ್ತಾನಕ್ಕೆ ದೊರೆತಿದೆ. ಸದ್ಯ ಭಾರತ ತಂಡ 16 ಅಂಕಗಳನ್ನು ಪಡೆದಿದೆ. ಅಂತಿಮ ಪಂದ್ಯ ಗೆದ್ದಿದ್ದರೆ 24 ಅಂಕ ಪಡೆಯಬಹುದಾಗಿತ್ತು. ಪಾಕ್ ತಂಡ 12 ಅಂಕ ಪಡೆದಿದ್ದರೂ ಗೆಲುವಿನ ಶೇಕಡಾವಾರು 100ರಷ್ಟಿದೆ. ಹೀಹಾಗಿ ಪಾಕಿಸ್ತಾನ ಅಗ್ರಸ್ಥಾನದಲ್ಲಿದೆ. ಭಾರತದ ಗೆಲುವಿನ ಶೇಕಡಾವಾರು 66.67, ಪಾಕಿಸ್ತಾನ ಅಗ್ರಸ್ಥಾನದಲ್ಲೇ ಮುಂದುವರೆಯಬೇಕಾದರೆ ಲಂಕಾ ವಿರುದ್ಧದ ಎರಡನೇ ಪಂದ್ಯವನ್ನು ಗೆಲ್ಲಲೇಬೇಕಿದೆ. ಸೋತರೆ ಭಾರತ ಅಗ್ರಸ್ಥಾನ ಪಡೆಯಲಿದೆ.
ಅಂತಿಮ ದಿನದಾಟವಾದ ಸೋಮವಾರ ಗೆಲುವಿಗೆ 365 ರನ್ನುಗಳ ಗುರಿ ಪಡೆದಿದ್ದ ವೆಸ್ಟ್ ಇಂಡೀಸ್, 4ನೇ ದಿನದಾಟದ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 76 ರನ್ ಮಾಡಿತ್ತು. ತೇಜ್‌ನಾರಾಯಣ್ ಚಂದರ್‌ಪಾಲ್ 24 ಮತ್ತು ಜರ್ಮೈನ್ ಬ್ಲ್ಯಾಕ್‌ವುಡ್ 20 ರನ್ ಮಾಡಿ ಬ್ಯಾಟಿಂಗ್ ಕಾಯ್ದು ಕೊಂಡಿದ್ದರು. ಆದರೆ ಅಂತಿಮ ದಿನ ಮಳೆಯದ್ದೇ ಆಟ ನಡೆದ ಕಾರಣ ಅಂತಿಮವಾಗಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಇದನ್ನೂ ಓದಿ IND vs WI: ಭಾರತ-ವಿಂಡೀಸ್ ಪಂದ್ಯ ಡ್ರಾ; ಸರಣಿ ಗೆದ್ದ ರೋಹಿತ್ ಪಡೆ, ಸತತ 9 ಸರಣಿ ಗೆದ್ದ ದಾಖಲೆ
ಸಂಕ್ಷಿಪ್ತ ಸ್ಕೋರ್
ಭಾರತ: ಮೊದಲ ಇನಿಂಗ್ಸ್ 438, ದ್ವಿತೀಯ ಇನಿಂಗ್ಸ್ 2 ವಿಕೆಟಿಗೆ 181 ಡಿಕ್ಲೇರ್: (ರೋಹಿತ್ ಶರ್ಮ 57, ಇಶಾನ್ ಕಿಶನ್ ಔಟಾಗದೆ 52, ಯಶಸ್ವಿ ಜೈಸ್ವಾಲ್ 38, ಶುಭಮನ್ ಗಿಲ್ ಔಟಾಗದೆ 29, ಶಾನನ್ ಗ್ಯಾಬ್ರಿಯಲ್ 33ಕ್ಕೆ 1, ವ್ಯಾರಿಕ್ಯಾನ್ 36ಕ್ಕೆ 1).
ವೆಸ್ಟ್ ಇಂಡೀಸ್: ಮೊದಲ ಇನಿಂಗ್ಸ್ 255, ದ್ವಿತೀಯ ಇನಿಂಗ್ಸ್ 2 ವಿಕೆಟಿಗೆ 76, ಪಂದ್ಯ ಡ್ರಾ (ಬ್ರಾತ್‌ವೇಟ್ 28, ತೇಜ್‌ನಾರಾಯಣ್ ಅಜೇಯ 24, ಬ್ಲ್ಯಾಕ್‌ವುಡ್ ಅಜೇಯ 20, ಅಶ್ವಿನ್ 33ಕ್ಕೆ 2). ಪಂದ್ಯ ಶ್ರೇಷ್ಠ: ಮೊಹಮ್ಮದ್ ಸಿರಾಜ್.