ರೊಸೇಯೂ (ಡೊಮಿನಿಕಾ): ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್(Yashasvi Jaiswal) ಅವರು ತಮ್ಮ ಶತಕದ ಬಳಿಕ ಭಾವುಕರಾಗಿದ್ದಾರೆ. ತಮ್ಮ ಕಷ್ಟದ ಸಮಯದಲ್ಲಿ ಜತೆಯಾಗಿ ನಿಂತು ಸಹಕರಿಸಿದ ತಂದೆ ತಾಯಿ ಮತ್ತು ಸ್ನೇಹಿತರಿಗೆ ಈ ಶತಕವನ್ನು ಅರ್ಪಿಸಿಸಿದ್ದಾರೆ. ಜೈಸ್ವಾಲ್ ಅವರು ಭಾವನಾತ್ಮಕವಾಗಿ ಮಾತನಾಡಿದ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
“ಕ್ರಿಕೆಟ್ ಲೋಕಕ್ಕೆ ಎಂಟ್ರಿಕೊಡುವ ಸಲುವಾಗಿ ತಮ್ಮ ತವರು ಬಿಟ್ಟು ಮುಂಬೈಗೆ ಬಂದೆ, ಇಲ್ಲಿ ಸಾಕಷ್ಟು ಕಷ್ಟಪಡಬೇಕಾಯಿತು. ಈ ಕ್ಷಣ ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಾ ಭಾವನಾತ್ಮಕವಾಗಿದೆ. ನನ್ನ ಕಷ್ಟದ ಸಮಯದಲ್ಲಿ ಯಾವುದೇ ರೀತಿಯಲ್ಲಿ ಸಹಾಯ ಮಾಡಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಈ ಶತಕ ಅವರಿಗೆ ಸಮರ್ಪಿತವಾಗಿದೆ” ಎಂದರು. ಮೂಲತಃ ಜೈಸ್ವಾಲ್ ಉತ್ತರ ಪ್ರದೇಶದವರಾಗಿದ್ದಾರೆ.
ಇದು ಕೇವಲ ಆರಂಭ
ಪದಾರ್ಪಣ ಪಂದ್ಯದಲ್ಲೇ ಶತಕ ಬಾರಿಸಿ ಜೂನಿಯರ್ ಗಂಗೂಲಿ ಎಂಬ ಬಿರಿದು ಪಡೆದ ಜೈಸ್ವಾಲ್ ಅವರು ಪಂದ್ಯದ ಬಳಿಕ ಇದು ಕೇವಲ ಆರಂಭವಷ್ಟೇ ಇನ್ನೂ ಹಲವು ಸಾಧನೆ ಮಾಡಲು ಬಾಕಿ ಇದೆ ಎಂದರು. ತನ್ನ ಈ ಪ್ರದರ್ಶನಕ್ಕೆ ನಾಯಕ ರೋಹಿತ್ ಶರ್ಮ ಕೂಡ ಕಾರಣವಾಗಿದ್ದಾರೆ. ಬ್ಯಾಟಿಂಗ್ ನಡೆಸುತ್ತಿದ್ದ ಪ್ರತಿ ಕ್ಷಣವೂ ಅವರು ಬಂದು ಸಲಹೆಯನ್ನು ನೀಡುತ್ತಲೇ ಇದ್ದರು. ಕೊಹ್ಲಿಯೂ ಹಲವು ಬ್ಯಾಟಿಂಗ್ ತಂತ್ರಗಳನ್ನು ಹೇಳಿಕೊಟ್ಟಿದ್ದಾರೆ ಎಂದು ಜೈಸ್ವಾಲ್ ಹೇಳಿದರು.
ಇದನ್ನೂ ಓದಿ IPL 2023: 15 ವರ್ಷಗಳ ಹಿಂದಿನ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್
A special dedication after a special start in international cricket! 😊#TeamIndia | #WIvIND | @ybj_19 pic.twitter.com/Dsiwln3rwt
— BCCI (@BCCI) July 14, 2023
ಸದ್ಯ 143 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿರುವ ಜೈಸ್ವಾಲ್ ತಮ್ಮ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸುವ ಇರಾದೆಯಲ್ಲಿದ್ದಾರೆ. ಒಂದೊಮ್ಮೆ ಅವರು ದ್ವಿಶತಕ ಬಾರಿಸಿದರೆ ಚೊಚ್ಚಲ ಪಂದ್ಯದಲ್ಲೇ ಭಾರತ ಪರ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಹಲವು ದಾಖಲೆ ಬರೆದ ಜೈಸ್ವಾಲ್
ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಜೈಸ್ವಾಲ್ ಭಾರತ ಪರ ದಾಖಲೆಯೊಂದನ್ನು ಬರೆದರು. ಪದಾರ್ಪಣ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿ 17ನೇ ಆಟಗಾರ ಎನಿಸಿಕೊಂಡರು. ಲಾಲಾ ಅಮರ್ನಾಥ್ ಅವರು ಭಾರತ ಪರ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಆಟಗಾರನಾಗಿದ್ದಾರೆ. ಅವರು 1933ರಲ್ಲಿ ಇಂಗ್ಲೆಂಡ್ ವಿರುದ್ಧ 118 ರನ್ ಬಾರಿಸಿದ್ದರು. ರೋಹಿತ್ ಶರ್ಮ(177) ಮತ್ತು ಪೃಥ್ವಿ ಶಾ(134) ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ವಿಂಡೀಸ್ ವಿರುದ್ಧ ಶತಕ ಬಾರಿಸಿದ್ದರು. ಇದೀಗ ಜೈಸ್ವಾಲ್ ಕೂಡ ವಿಂಡೀಸ್ ವಿರುದ್ಧವೇ ಈ ಸಾಧನೆ ಮಾಡಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎಂಬ ಹಿರಿಮೆಗೂ ಜೈಸ್ವಾಲ್(21 ವರ್ಷ 196ದಿನ) ಪಾತ್ರರಾದರು. ಪೃಥ್ವಿ ಶಾ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು 18 ವರ್ಷ 329 ದಿನ ದಲ್ಲಿ ಶತಕ ಬಾರಿಸಿದ್ದರು.