Site icon Vistara News

Ind vs Wi ODI | ಕ್ಲೀನ್‌ ಸ್ವೀಪ್‌ ಗುರಿಯೊಂದಿಗೆ ಕಣಕ್ಕಿಳಿಯಲಿದೆ ಧವನ್ ಬಳಗ

ind vs wi ODI

ಪೋರ್ಟ್‌ ಅಫ್‌ ಸ್ಪೇನ್‌: ಭಾರತ ಹಾಗೂ ಆತಿಥೇಯ ವೆಸ್ಟ್ ಇಂಡೀಸ್‌ (IND vs WI ODI) ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಗುರುವಾರ ರಾತ್ರಿ 7 ಗಂಟೆಗೆ (ಭಾರತೀಯ ಕಾಲಮಾನ) ನಡೆಯಲಿದ್ದು, ಈ ಹಣಾಹಣಿಯಲ್ಲೂ ಗೆಲುವು ಸಾಧಿಸಿ ಕ್ಲೀನ್‌ ಸ್ವೀಪ್‌ ಸಾಧನೆ ಮಾಡುವ ಇರಾದೆಯಲ್ಲಿದೆ ಶಿಖರ್ ಧವನ್‌ ಬಳಗ. ಈ ಪಂದ್ಯವೂ ಪೋರ್ಟ್‌ ಆಫ್‌ ಸ್ಪೇನ್‌ ಕ್ವೀನ್ಸ್‌ ಪಾರ್ಕ್‌ ಸ್ಟೇಡಿಯಮ್‌ನಲ್ಲಿ ಆಯೋಜನೆಗೊಂಡಿದೆ.

ಕಳೆದೆರಡು ಪಂದ್ಯಗಳಲ್ಲಿ ಭಾರತ ತಂಡ ಬ್ಯಾಟಿಂಗ್‌ ವಿಭಾಗ ಪ್ರಭಾವಶಾಲಿ ಪ್ರದರ್ಶನ ನೀಡಿತ್ತು. ಹೀಗಾಗಿ ಬ್ಯಾಟಿಂಗ್‌ ವಿಭಾಗದಲ್ಲಿ ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆಗಳು ಇಲ್ಲ. ಅಲ್ಲದೆ, ಭಾರತದ ಬ್ಯಾಟರ್‌ಗಳು ಹಿಂದಿನೆರಡು ಪಂದ್ಯಗಳಂತೆ ಈ ಪಂದ್ಯದಲ್ಲೂ ವಿಂಡೀಸ್‌ ಬೌಲರ್‌ಗಳ ವಿರುದ್ಧ ಪರಾಕ್ರಮ ಮೆರೆಯಲಿದ್ದಾರೆ.

ಆರಂಭಿಕ ಬ್ಯಾಟರ್‌ ಶುಬ್ಮನ್‌ ಗಿಲ್‌ ಎರಡೂ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಹೀಗಾಗಿ ಅವರನ್ನು ಬೆಂಚು ಕಾಯಿಸಿ ಋತುರಾಜ್‌ ಗಾಯಕ್ವಾಡ್‌ಗೆ ಅವಕಾಶ ನೀಡುವ ಸಾಧ್ಯತೆಗಳೂ ಕಡಿಮೆಯಿದೆ. ಶ್ರೇಯಸ್ ಅಯ್ಯರ್‌ ಬಾರಿಸಿರುವ ಸತತ ಎರಡು ಅರ್ಧ ಶತಕಗಳು ಅವರ ಸ್ಥಾನ ಗಟ್ಟಿಗೊಳಿಸಿದೆ. ಇಶಾನ್ ಕಿಶನ್ ಇನ್ನೊಂದು ಬ್ಯಾಟಿಂಗ್‌ ಆಯ್ಕೆಯಾಗಿದ್ದರೂ, ಮಧ್ಯಮ ಕ್ರಮಾಂಕದಲ್ಲಿ ಸಂಜು ಸಾಮರ್ಥ್ಯ ಹೆಚ್ಚಿರುವ ಕಾರಣ ಅವರನ್ನೇ ರಾಹುಲ್‌ ದ್ರಾವಿಡ್ ಪರಿಗಣಿಸಬಹುದು. ಸೂರ್ಯಕುಮಾರ್‌ ಎರಡೂ ಪಂದ್ಯದಲ್ಲಿ ಮಿಂಚಿಲ್ಲ. ಆದಾಗ್ಯೂ ಅವರ ಮೇಲೆ ಭರವಸೆ ಇಡಬಹುದು. ಅಂತೆಯೇ ಎಡಗೈ ಸ್ಪಿನ್ನರ್‌ ಅಕ್ಷರ್‌ ಪಟೇಲ್‌ ಎರಡನೇ ಪಂದ್ಯದಲ್ಲಿ ಬಾರಿಸಿರುವ ವಿಜಯದ ಅರ್ಧ ಶತಕವೇ ಅವರಿಗೆ ತಂಡದಲ್ಲಿ ಮತ್ತೊಮ್ಮೆ ಸ್ಥಾನ ಕಲ್ಪಿಸಲಿದೆ.

ಅರ್ಶ್‌ದೀಪ್‌ಗೆ ಚಾನ್ಸ್‌?

ವೇಗದ ಬೌಲರ್‌ ಅರ್ಶ್‌ದೀಪ್‌ ಸಿಂಗ್‌ ವೆಸ್ಟ್‌ ಇಂಡೀಸ್‌ ಸರಣಿಯಲ್ಲಿ ಆಡುವ ಅವಕಾಶ ಪಡೆದಿಲ್ಲ. ಅವರು ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಆಡುವಾಗ ಗಾಯಗೊಂಡಿದ್ದರು. ಅವರೀಗ ಸುಧಾರಿಸಿಕೊಂಡಿರುವ ಸಾಧ್ಯತೆಗಳಿದ್ದು ಆಡುವ ಹನ್ನೊಂದರ ಬಳಗ್ಗೆ ಎಂಟ್ರಿ ಪಡೆಯಲು ಸಜ್ಜಾಗಿದ್ದಾರೆ. ಮೊದಲ ಪಂದ್ಯದಲ್ಲಿ ಹೆಚ್ಚು ರನ್‌ ಬಿಟ್ಟುಕೊಟ್ಟ ಅಥವಾ ಎರಡನೇ ಪಂದ್ಯದಲ್ಲಿ ದುಬಾರಿ ಎನಿಸಿದ್ದ ಆವೇಶ್ ಖಾನ್ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ.

ಅತ್ತ ವೆಸ್ಟ್‌ ಇಂಡೀಸ್‌ ತಂಡ ಒತ್ತಡದಲ್ಲಿದೆ. ಕೊನೇ ಪಂದ್ಯವನ್ನಾದರೂ ಗೆದ್ದು ಮರ್ಯಾದೆ ಉಳಿಸಿಕೊಳ್ಳುವ ಅನಿವಾರ್ಯತೆ ನಿಕೋಲಸ್‌ ಪೂರನ್‌ ಬಳಗದ ಮುಂದಿದೆ. ವಿಂಡೀಸ್‌ ಬಳಗದ ಬ್ಯಾಟಿಂಗ್‌ ಬಲಿಷ್ಠವಾಗಿದೆ. ಆದಾಗ್ಯೂ ಬೌಲಿಂಗ್‌ ವಿಭಾಗ ನಿಖರತೆಯೇ ತಂಡದ ಸಮಸ್ಯೆ. ಎರಡನೇ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡಕ್ಕೆ ಕೊನೇ ಹತ್ತು ಓವರ್‌ಗಳಲ್ಲಿ ಬೇಕಾಗಿರುವ ನೂರು ರನ್‌ ಬಿಟ್ಟುಕೊಡುವ ಮೂಲಕ ಸೋಲಿಗೆ ಕಾರಣರಾಗಿದ್ದರು ಕೆರಿಬಿಯನ್‌ ಬೌಲರ್‌ಗಳು. ಹೀಗಾಗಿ ಎಲ್ಲ ವಿಭಾಗಗಳನ್ನು ಬಲಿಷ್ಠಗೊಳಿಸುವ ಮೂಲಕ ಗೆಲುವಿಗಾಗಿ ಪ್ರಯತ್ನಿಸಲಿದೆ ಆತಿಥೇಯ ತಂಡ.

ಭಾರತ ತಂಡ: ಶಿಖರ್‌ ಧವನ್‌ (ನಾಯಕ), ಶುಬ್ಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌, ದೀಪಕ್‌ ಹೂಡ, ಅಕ್ಷರ್‌ ಪಟೇಲ್‌, ಶಾರ್ದುಲ್‌ ಠಾಕೂರ್‌, ಮೊಹಮ್ಮದ್‌ ಸಿರಾಜ್‌, ಯಜ್ವೇಂದ್ರ ಚಹಲ್‌ , ಪ್ರಸಿದ್ಧ್‌ ಕೃಷ್ಣ.

ವೆಸ್ಟ್‌ ಇಂಡೀಸ್‌: ಶಾಯ್‌ ಹೋಪ್‌, ಬ್ರೆಂಡನ್‌ ಕಿಂಗ್‌, ಶಮ್ರಾ ಬ್ರೂಕ್ಸ್‌, ಕೈಲ್‌ ಮೇಯರ್ಸ್‌, ನಿಕೋಲಸ್‌ ಪೂರನ್‌, ರೋವ್ಮನ್‌ ಪೊವೆಲ್‌, ರೊಮಾರಿಯೊ ಶೆಫರ್ಡ್‌, ಅಕೆಲ್‌ ಹೊಸೇನ್‌, ಗುಡ್ಕೇಶ್ ಮೋತಿ, ಅಲ್ಜಾರಿ ಜೋಸೆಫ್‌, ಜೇಡೆನ್‌ ಸೀಲ್ಸ್.

ಪಂದ್ಯದ ತಾಣ : ಕ್ವೀನ್ಸ್‌ ಪಾರ್ಕ್‌ ಓವಲ್‌, ಪೋರ್ಟ್‌ ಆಫ್‌ ಸ್ಪೇನ್‌
ಸಮಯ : ರಾತ್ರಿ ೭ರಿಂದ
ನೇರ ಪ್ರಸಾರ: Fancode.com ಹಾಗೂ FanCode ಆಪ್‌ನಲ್ಲಿ ಪಂದ್ಯ ನೇರ ಪ್ರಸಾರವಾಗಲಿದೆ.

ಇದನ್ನೂ ಓದಿ | India vs West Indies 2nd ODI| ಅಕ್ಷರ್ ಪಟೇಲ್‌ ಅಬ್ಬರ, ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತಕ್ಕೆ ಜಯ

Exit mobile version