ಗಯಾನಾ: ವೆಸ್ಟ್ ಇಂಡೀಸ್(IND vs WI) ವಿರುದ್ಧ ಈಗಾಗಲೇ ಮೊದಲೆರಡು ಟಿ20 ಪಂದ್ಯಗಳನ್ನು ಸೋತಿರುವ ಭಾರತ ತಂಡಕ್ಕೆ ಮತ್ತೊಂದು ಸವಾಲು ಎದುರಾಗಿದೆ. ಮಂಗಳವಾರ ನಡೆಯುವ ಮೂರನೇ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಸ್ಥಿತಿಯಲ್ಲಿ ಕಣಕ್ಕಿಳಿಯಬೇಕಿದೆ. ಸೋತರೆ ಸರಣಿ ಸೋಲಿನ ಮುಖಭಂಗ ಅನುಭವಿಸಲಿದೆ. ಈ ಪಂದ್ಯಕ್ಕೆ ಭಾರತ ತನ್ನ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ ನಡೆಸಲಿದೆ.
ಮೂರು ಬದಲಾವಣೆ ಸಾಧ್ಯತೆ
ಕಳೆದ ಪಂದ್ಯದಿಂದ ಹೊರಗುಳಿದಿದ್ದ ಕುಲ್ದೀಪ್ ಯಾದವ್ ಅವರು ಮತ್ತೆ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಅವರ ಬದಲಾಗಿ ದ್ವಿತೀಯ ಪಂದ್ಯದಲ್ಲಿ ಆಡಿದ ರವಿ ಬಿಷ್ಣೋಯಿ ಹೊರಗುಳಿಯುವುದು ಖಚಿತ. ಹಿಂದಿನ ಪಂದ್ಯದಲ್ಲಿ ಅವರು ದುಬಾರಿಯಾಗಿ ಪರಿಣಮಿಸಿದ್ದರು. ಮುಖೇಶ್ ಕುಮಾರ್ ಬದಲು ಅವೇಶ್ ಖಾನ್ ಆಡುವ ಸಾಧ್ಯತೆ ಇದೆ. ಬ್ಯಾಟಿಂಗ್ ವಿಭಾಗದಲ್ಲಿ ಸಂಜು ಸ್ಯಾಮ್ಸನ್ ಕೈ ಬಿಟ್ಟು ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸುವ ಸೂಚನೆ ಇದೆ. ಏಕೆಂದರೆ ಸಂಜು ಆಡಿದ ಎರಡೂ ಪಂದ್ಯಗಳಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಜತೆಗೆ ತಂಡದ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಪ್ರಮುಖ ಕಾರಣವಾಗಿದೆ. ಹೀಗಾಗಿ ಬ್ಯಾಟಿಂಗ್ ವಿಭಾಗದಲ್ಲಿಯೂ ಬದಲಾವಣೆ ನಿರೀಕ್ಷಿತ ಎನ್ನಲಡ್ಡಿಯಿಲ್ಲ.
ಏಳನೇ ಸರಣಿ ವಶಪಡಿಸುವ ಹಾದಿ ಕಠಿಣ
ಭಾರತ-ವಿಂಡೀಸ್ ಈವರೆಗೆ 8 ಟಿ20 ಸರಣಿಗಳನ್ನಾಡಿವೆ. ಈ ಪೈಕಿ ಭಾರತ 6ರಲ್ಲಿ ಗೆದ್ದಿದ್ದು, 2 ಸರಣಿಯನ್ನು ವಿಂಡೀಸ್ ಕೈವಶಪಡಿಸಿಕೊಂಡಿತ್ತು. ಉಭಯ ತಂಡಗಳ ಕೊನೆ 5 ಸರಣಿಗಳಲ್ಲೂ ಭಾರತ ಗೆದ್ದಿದೆ. 2017ರಲ್ಲಿ ಕೊನೆ ಬಾರಿ ವಿಂಡೀಸ್ ಸರಣಿ ಜಯಿಸಿದೆ. 7ನೇ ಸರಣಿ ಜಯದ ಯೋಜನೆಯಲ್ಲಿದ್ದ ಭಾರತದ ಹಾದಿ ಸದ್ಯ ಸಂಕಷ್ಟಕ್ಕೆ ಸಿಲುಕಿದೆ. ಆಡಿದ ಮೊದಲೆರಡು ಪಂದ್ಯಗಳನ್ನು ಸೋತಿರುವುದು ಇದಕ್ಕೆ ಕಾರಣ. ಸದ್ಯ ಹಾರ್ದಿಕ್(hardik pandya) ಪಡೆಯ ಪ್ರದರ್ಶನ ನೋಡುವಾಗ ಸರಣಿ ಗೆಲ್ಲುವುದು ಕಷ್ಟಕರ ಎನ್ನುವಂತಿದೆ. ಐಪಿಎಲ್ನಲ್ಲಿ ತೋರಿದ ಪ್ರತಾಪ ಇಲ್ಲಿ ಕಾಣಿಸುತ್ತಿಲ್ಲ. ಒಂದೆರಡು ಆಟಗಾರರು ಬಿಟ್ಟರೆ ಉಳಿದೆಲ್ಲರು ಒಂದಕಿಗೆ ಸೀಮಿತರಾಗುತ್ತಿದ್ದಾರೆ.
ಇದನ್ನೂ ಓದಿ ind vs wi : ಭಾರತ- ವೆಸ್ಟ್ ಇಂಡೀಸ್ ಮೂರನೇ ಟಿ20 ಪಂದ್ಯ ನಡೆಯುವ ಪಿಚ್ ಹೇಗಿದೆ?
ಹವಾಮಾನ ವರದಿ
ಕಳೆದ ಪಂದ್ಯವೂ ಇದೇ ಮೈದಾನದಲ್ಲಿ ನಡೆದಿತ್ತು. ಪಂದ್ಯಕ್ಕೆ ಯಾವುದೇ ಮಳೆಯ ಸಮಸ್ಯೆ ಎದುರಾಗಿರಲಿಲ್ಲ. ಈ ಪಂದ್ಯಕ್ಕೂ ಮಳೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಿಸಿ ವಾತಾವರಣ ಕಂಡುಬರಲಿದೆ ಎಂದು ತಿಳಿಸಿದೆ. ಹೀಗಾಗಿ ಪಂದ್ಯ ಸರಾಗವಾಗಿ ಸಾಗಲಿದೆ.
ತಿಲಕ್ ವರ್ಮ ಮೇಲೆ ನಂಬಿಕೆ
ಸದ್ಯ ಭಾರತ ಪರ ಯುವ ಆಟಗಾರ ತಿಲಕ್ ವರ್ಮಾ(tilak varma) ಅವರು ಮಾತ್ರ ಏಕಾಂಗಿ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಐಪಿಎಲ್ನಲ್ಲಿಯೂ ಅವರು ಹಲವು ಪಂದ್ಯಗಳಲ್ಲಿ ಏಕಾಂಗಿ ಹೋರಾಟ ನಡೆಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. ಮೊದಲ ಪಂದ್ಯದಲ್ಲಿ 39 ರನ್ ಗಳಿಸಿದ್ದ ಅವರು ದ್ವಿತೀಯ ಪಂದ್ಯದಲ್ಲಿ 51 ರನ್ ಬಾರಿಸಿ ಭಾರತ ತಂಡದ ನೆರವಿಗೆ ನಿಂತಿದ್ದರು. ಒಂದೊಮ್ಮೆ ಅವರು ಕೂಡ ಅಗ್ಗಕ್ಕೆ ಔಟಾಗುತ್ತಿದ್ದರೆ ತಂಡದ ಮೊತ್ತ 100ಗಡಿ ದಾಡುವುದು ಕೂಡ ಅನುಮಾನ ಎನ್ನುವಂತಿತ್ತು. ಇದೀಗ ಸರಣಿ ನಿರ್ಣಾಯಕ ಪಂದ್ಯದಲ್ಲಿಯೂ ಅವರ ಬ್ಯಾಟಿಂಗ್ ಮೇಲೆ ತಂಡ ಹೆಚ್ಚು ವಿಶ್ವಾಸವಿರಿಸಿದೆ.
ಸಂಭಾವ್ಯ ತಂಡ
ವೆಸ್ಟ್ ಇಂಡೀಸ್: ರೋವ್ಮನ್ ಪೊವೆಲ್ (ನಾಯಕ), ಕೈಲ್ ಮೇಯರ್ಸ್ (ಉಪ ನಾಯಕ), ರೋಸ್ಟನ್ ಚೇಸ್, ಶಿಮ್ರೋನ್ ಹೆಟ್ಮೇರ್, ಜೇಸನ್ ಹೋಲ್ಡರ್, ಶೈಯ್ ಹೋಪ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ನಿಕೋಲಸ್ ಪೂರನ್, ರೊಮಾರಿಯೋ ಶೆಫರ್ಡ್, ಒಶಾನೆ ಥಾಮಸ್.
ಭಾರತ: ಇಶಾನ್ ಕಿಶನ್, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ),ಅಕ್ಷರ್ ಪಟೇಲ್, ತಿಲಕ್ ವರ್ಮ ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಆರ್ಶ್ದೀಪ್ ಸಿಂಗ್, ಅವೇಶ್ ಖಾನ್.