ರೊಸೇಯೂ (ಡೊಮಿನಿಕಾ): ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಅವರು ನೂತನ ಮೈಲಿಗಲ್ಲೊಂದನ್ನು ನಿರ್ಮಿಸುವ ಸನಿಹದಲ್ಲಿದ್ದಾರೆ. ವೆಸ್ಟ್ ಇಂಡೀಸ್ ದಂತಕಥೆ ಸರ್ ವಿವ್ ರಿಚರ್ಡ್ಸ್(Sir Viv Richards) ಅವರ ದಾಖಲೆಯನ್ನು ಹಿಂದಿಕ್ಕುವ ಸುವರ್ಣ ಅವಕಾಶ ಕೊಹ್ಲಿ ಮುಂದಿದೆ.
ವಿಂಡೀಸ್(IND vs WI) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು 62 ರನ್ ಬಾರಿಸಿದರೆ ವಿವ್ ರಿಚರ್ಡ್ಸ್ ಅವರ ದಾಖಲೆಯೊಂದು ಪತನಗೊಳ್ಳಲಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ರಿಚರ್ಡ್ಸ್ ಅವರ ರನ್ನನ್ನು ಹಿಂದಿಕ್ಕಲಿದ್ದಾರೆ. ರಿಚರ್ಡ್ಸ್ ಟೆಸ್ಟ್ನಲ್ಲಿ 8540 ರನ್ ಗಳಿಸಿದ್ದಾರೆ. ಸದ್ಯ ವಿರಾಟ್ ಅವರು 8479* ರನ್ ಬಾರಿಸಿದ್ದಾರೆ. ಇನ್ನು 62 ರನ್ ಬಾರಿಸಿದರೆ ಕೊಹ್ಲಿ ಈ ರೇಸ್ನಲ್ಲಿ ಮುಂದೆ ಸಾಗಲಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್(Sachin Tendulkar) ಹೆಸರಿನಲ್ಲಿದೆ. ಸಚಿನ್ 15921 ರನ್ ಗಳಿಸಿದ್ದಾರೆ.
16ನೇ ಆವೃತ್ತಿಯ ಐಪಿಎಲ್ ವೇಳೆ ವಿರಾಟ್ ಕೊಹ್ಲಿ ಅವರು ವಿವ್ ರಿಚರ್ಡ್ಸ್ ಅವರ ಹಳೆಯ ಸಂದರ್ಶನವೊಂದನ್ನು ಇನ್ಸ್ಟಾಗ್ರಾಮ್ ಸೋರಿಯಲ್ಲಿ ಹಾಕಿ “ದಿ ರಿಯಲ್ ಬಾಸ್” ಎಂಬ ಶೀರ್ಷಿಕೆ ನೀಡಿದ್ದರು. ಇದೀಗ ಅವರ ರನ್ ದಾಖಲೆಯನ್ನೇ ಮುರಿಯಲು ಸಜ್ಜಾಗಿದ್ದಾರೆ.
ಇದನ್ನೂ ಓದಿ Sachin Tendulkar: ಕೀನ್ಯಾದ ಕಾಡಿನಲ್ಲಿ ಸಚಿನ್ಗೆ ಬಿಲ್ಲು-ಬಾಣಗಳಿಂದ ಗಾರ್ಡ್ ಆಫ್ ಹಾನರ್
ಬುಧವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ ಭಾರತ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಆರ್.ಅಶ್ವಿನ್ (5 ವಿಕೆಟ್) ಹಾಗೂ ರವೀಂದ್ರ ಜಡೇಜಾ (3 ವಿಕೆಟ್) ಮಾರಕ ದಾಳಿಗೆ ಸಿಲುಕಿದ ಕೆರಿಬಿಯನ್ನರು 150 ರನ್‌ಗಳಿಗೆ ಆಲೌಟ್ ಆಗಿದ್ದಾರೆ. ಇನ್ನು ಬ್ಯಾಟಿಂಗ್ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆದಿದೆ. ಮೊದಲ ದಿನದ ಅಂತ್ಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 80 ರನ್ ಗಳಿಸಿದ್ದು, ಬೃಹತ್ ಮುನ್ನಡೆಯ ಮುನ್ಸೂಚನೆ ನೀಡಿದೆ. ರೋಹಿತ್ ಶರ್ಮಾ 30 ಹಾಗೂ ಯಶಸ್ವಿ ಜೈಸ್ವಾಲ್ 40 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ. ಸದ್ಯ ಉಭಯ ಆಟಗಾರರ ಆಟವನ್ನು ಗಮನಿಸುವಾಗ ಶತಕ ಬಾರಿಸುವ ಸೂಚನೆಯೊಂದು ಲಭಿಸಿದೆ.
ಆ್ಯಂಡರ್ಸನ್ ದಾಖಲೆ ಮುರಿದ ಆರ್.ಅಶ್ವಿನ್
ಅಶ್ವಿನ್ ಅವರು ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ಪಡೆಯುತ್ತಿದ್ದಂತೆ ಇಂಗ್ಲೆಂಡ್ ತಂಡದ ಹಿರಿಯ ವೇಗಿ ಜೇಮ್ಸ್ ಆ್ಯಂಡರ್ಸನ್(James Anderson) ದಾಖಲೆಯನ್ನು ಮುರಿದಿದ್ದಾರೆ. ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ 33ನೇ ಬಾರಿಗೆ ಇನಿಂಗ್ಸ್ವೊಂದರಲ್ಲಿ 5 ವಿಕೆಟ್ ಕಿತ್ತ ಸಾಧನೆ ಮಾಡುವ ಮೂಲಕ ಆ್ಯಂಡರ್ಸನ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಆ್ಯಂಡರ್ಸನ್ ಅವರು 32 ಸಲ 5 ವಿಕೆಟ್ ಪಡೆದ ಈ ಸಾಧನೆ ಮಾಡಿದ್ದರು. ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಅಶ್ವಿನ್ 24.3 ಓವರ್ ಎಸೆದು 60 ರನ್ ವೆಚ್ಚದಲ್ಲಿ 5 ವಿಕೆಟ್ ಪಡೆದರು.
ಒಂದೇ ಇನಿಂಗ್ಸ್ನಲ್ಲಿ 5 ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಅಶ್ವಿನ್ 6ನೇ ಸ್ಥಾನಕ್ಕೇರಿದ್ದಾರೆ. 32 ಸಲ ಈ ಸಾಧನೆ ಮಾಡಿರುವ ಇಂಗ್ಲೆಂಡ್ ವೇಗಿ ಆ್ಯಂಡರ್ಸನ್ ಇದೀಗ 7ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಸಾಧನೆ ಮಾಡಿದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಆಟಗರಾನೆಂದರೆ ಶ್ರೀಲಂಕಾದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್. ಅವರು ಒಟ್ಟು 67 ಬಾರಿ 5 ವಿಕೆಟ್ ಗಳ ಗೊಂಚಲು ಪಡೆದಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್(Shane Warne) ಇದ್ದು ಅವರು ಒಟ್ಟು 37 ಬಾರಿ ಈ ಸಾಧನೆ ಮಾಡಿದ್ದಾರೆ. ಮೂರನೇ ಸ್ಥಾನದಲ್ಲಿ ನ್ಯೂಜಿಲೆಂಡ್ನ ರಿಟರ್ಡ್ ಹಡ್ಲೀ(Richard Hadlee) ಇದ್ದು ಅವರು 36 ಬಾರಿ ಈ ಸಾಧನೆ ಮಾಡಿದ್ದಾರೆ. ಭಾರತದ ಅನಿಲ್ ಕುಂಬ್ಳೆ(Anil Kumble) ಅವರು 35 ಬಾರಿ 5 ವಿಕೆಟ್ ಗೊಂಚಲು ಪಡೆದು ನಾಲ್ಕನೇ ಸ್ಥಾನ ಪಡೆದಿದ್ದಾರೆ.