ರೊಸೇಯೂ (ಡೊಮಿನಿಕಾ): ರೆಸೇಯೂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ (IND vs WI) ವಿಂಡೀಸ್‌ನ ಅಲ್ಜರಿ ಜೋಸೆಫ್ ವಿಕೆಟ್ ಪಡೆಯುವ ಮೂಲಕ ಭಾರತದ ಅಗ್ರ ಸ್ಪಿನ್ ಬೌಲರ್ ಆರ್. ಅಶ್ವಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್ ಮೈಲುಗಲ್ಲು ತಲುಪುವ ಜತೆಗೆ ಮತ್ತೊಂದು ಅಪರೂಪದ ಸಾಧನೆ ಮಾಡಿದ್ದಾರೆ. ವಿಂಡೀಸ್‌ನ ತಗೆನರೈನ್ ಚಂದ್ರಪಾಲ್ ಅವರ ವಿಕೆಟ್ ಪಡೆಯುವ ಮೂಲಕ ಆರ್.ಅಶ್ವಿನ್ ಅವರು ತಂದೆ ಹಾಗೂ ಮಗನ ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎನಿಸಿದರು. ತಗೆನರೈನ್ ಚಂದ್ರಪಾಲ್ ಅವರ ತಂದೆ ಶಿವನರೈನ್ ಚಂದ್ರಪಾಲ್ ವಿಕೆಟ್‌ಅನ್ನು ಅಶ್ವಿನ್ 2011ರಲ್ಲಿ ಪಡೆದಿದ್ದರು.
2011ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆರ್.ಅಶ್ವಿನ್ ಅವರು ಶಿವನರೈನ್ ಚಂದ್ರಪಾಲ್ ಅವರ ವಿಕೆಟ್ ಪಡೆದಿದ್ದರು. ಕ್ರಿಕೆಟ್ ವೃತ್ತಿಜೀವನದಲ್ಲಿ ಶಿವನರೈನ್ ಅವರನ್ನು ಅಶ್ವಿನ್ ನಾಲ್ಕು ಬಾರಿ ಔಟ್ ಮಾಡಿದ್ದರು. ಈಗ ಬುಧವಾರ ಆರಂಭವಾದ ಮೊದಲ ಟೆಸ್ಟ್‌ನಲ್ಲಿ ತಗೆನರೈನ್ ಚಂದ್ರಪಾಲ್ 12 ರನ್ ಗಳಿಸಿ ಆಡುತ್ತಿದ್ದಾಗ ಅವರನ್ನು ಬೌಲ್ಡ್ ಮಾಡುವ ಮೂಲಕ ಅಶ್ವಿನ್, ವಿಶಿಷ್ಟ ಸಾಧನೆ ಮಾಡಿದರು. ಇದುವರೆಗೆ ಭಾರತದ ಯಾವ ಬೌಲರ್ ಕೂಡ ತಂದೆ-ಮಗನ ವಿಕೆಟ್ ಪಡೆದಿರಲಿಲ್ಲ.
The moment Ravi Ashwin created history!
— Mufaddal Vohra (@mufaddal_vohra) July 12, 2023
The first Indian to pick the wicket of father (Shivnarine) and son (Tagenarine) in Tests. pic.twitter.com/nvqXhLz0ze
ಇಂತಹ ಸಾಧನೆ ಮಾಡಿದ ವಿಶ್ವದ ಬೌಲರ್‌ಗಳು
ಅಶ್ವಿನ್‌ಗೂ ಮೊದಲು ಜಾಗತಿಕ ಕ್ರಿಕೆಟ್‌ನಲ್ಲಿ ಹಲವು ಬೌಲರ್‌ಗಳು ತಂದೆ-ಮಗನ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್‌ನ ಇಯಾನ್ ಬಾಥಂ ಅವರು ನ್ಯೂಜಿಲ್ಯಾಂಡ್‌ನ ಲಾನ್ಸ್ ಮತ್ತು ಕ್ರಿಸ್ ಕೈರ್ನ್ಸ್ ಅವರ ವಿಕೆಟ್ ಪಡೆದಿದ್ದಾರೆ. ಹಾಗೆಯೇ, ಪಾಕಿಸ್ತಾನದ ವಾಸಿಂ ಅಕ್ರಂ ಅವರು ಕೂಡ ನ್ಯೂಜಿಲ್ಯಾಂಡ್‌ನ ಲಾನ್ಸ್ ಮತ್ತು ಕ್ರಿಸ್ ಕೈರ್ನ್ಸ್ ವಿಕೆಟ್ ಪಡೆದಿದ್ದಾರೆ. ಇನ್ನು, ಆಸ್ಟ್ರೇಲಿಯಾದ ಮೈಕೆಲ್ ಸ್ಟಾರ್ಕ್ ಹಾಗೂ ದಕ್ಷಿಣ ಆಫ್ರಿಕಾದ ಸೈಮನ್ ಹಾರ್ಮರ್ ಅವರು ಕೂಡ ತಗೆನರೈನ್ ಚಂದ್ರಪಾಲ್ ಮತ್ತು ಶಿವನರೈನ್ ಚಂದ್ರಪಾಲ್ ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: IND vs WI: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್ ಸಾಧನೆ ಮಾಡಿದ ಅಶ್ವಿನ್, ಮತ್ತೊಂದು ಮೈಲುಗಲ್ಲಿಗೂ ಸನಿಹ
ಮೊದಲ ದಿನವೇ ಭಾರತ ಬಿಗಿಹಿಡಿತ
ವೆಸ್ಟ್ ಇಂಡೀಸ್ ವಿರುದ್ಧ ಬುಧವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ ಭಾರತ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಆರ್.ಅಶ್ವಿನ್ (5 ವಿಕೆಟ್) ಹಾಗೂ ರವೀಂದ್ರ ಜಡೇಜಾ (3 ವಿಕೆಟ್) ಮಾರಕ ದಾಳಿಗೆ ಸಿಲುಕಿದ ಕೆರಿಬಿಯನ್ನರು 150 ರನ್‌ಗಳಿಗೆ ಆಲೌಟ್ ಆಗಿದ್ದಾರೆ. ಇನ್ನು ಬ್ಯಾಟಿಂಗ್ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆದಿದೆ. ಮೊದಲ ದಿನದ ಅಂತ್ಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 80 ರನ್ ಗಳಿಸಿದ್ದು, ಬೃಹತ್ ಮುನ್ನಡೆಯ ಮುನ್ಸೂಚನೆ ನೀಡಿದೆ. ರೋಹಿತ್ ಶರ್ಮಾ 30 ಹಾಗೂ ಯಶಸ್ವಿ ಜೈಸ್ವಾಲ್ 40 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ.