Site icon Vistara News

IND vs WI: ಭಾರತ-ವಿಂಡೀಸ್​ ಪಂದ್ಯ ಡ್ರಾ; ಸರಣಿ ಗೆದ್ದ ರೋಹಿತ್​ ಪಡೆ, ಸತತ 9 ಸರಣಿ ಗೆದ್ದ ದಾಖಲೆ

West Indies vs India, 2nd Test Match drawn

ಪೋರ್ಟ್‌ ಆಫ್ ಸ್ಪೇನ್‌: ವೆಸ್ಟ್‌ ಇಂಡೀಸ್‌(IND vs WI) ಎದುರಿನ ಟೆಸ್ಟ್‌ ಸರಣಿಯನ್ನು ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಳ್ಳಲು ಹೊರಟಿದ್ದ ಭಾರತ ತಂಡಕ್ಕೆ ಮಳೆ ಅಡ್ಡಿಪಡಿಸಿದೆ. ಸೋಮವಾರದ ಅಂತಿಮ ದಿನದಾಟ ಮಳೆಯಿಂದ ರದ್ದಾದ ಕಾರಣ ಪಂದ್ಯ ಡ್ರಾಗೊಂಡಿದೆ.(West Indies vs India, 2nd Test Match drawn) ಆದರೆ ಮೊದಲ ಪಂದ್ಯ ಗೆದ್ದ ಭಾರತ 1-0 ಅಂತರದಿಂದ ಸರಣಿ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ ಟೆಸ್ಟ್‌ನಲ್ಲಿ ನಿರಂತರ 9 ಸರಣಿ ಗೆದ್ದ ದಾಖಲೆ ನಿರ್ಮಿಸಿದೆ.

ಅಂತಿಮ ದಿನದಾಟದಲ್ಲಿ ಗೆಲುವಿಗೆ 365 ರನ್ನುಗಳ ಗುರಿ ಪಡೆದಿದ್ದ ವೆಸ್ಟ್‌ ಇಂಡೀಸ್‌, 4ನೇ ದಿನದಾಟದ ಮುಕ್ತಾಯಕ್ಕೆ 2 ವಿಕೆಟ್‌ ಕಳೆದುಕೊಂಡು 76 ರನ್‌ ಮಾಡಿತ್ತು. ತೇಜ್‌ನಾರಾಯಣ್‌ ಚಂದರ್‌ಪಾಲ್‌ 24 ಮತ್ತು ಜರ್ಮೈನ್‌ ಬ್ಲ್ಯಾಕ್‌ವುಡ್‌ 20 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದು ಕೊಂಡಿದ್ದರು. ಆದರೆ ಅಂತಿಮ ದಿನ ಮಳೆಯದ್ದೇ ಆಟ ನಡೆದ ಕಾರಣ ಅಂತಿಮವಾಗಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.

4ನೇ ದಿನದಾಟದಲ್ಲಿ ನಾಯಕ ಕ್ರೆಗ್‌ ಬ್ರಾತ್‌ವೇಟ್‌ (28) ಮತ್ತು ಕರ್ಕ್‌ ಮೆಕೆಂಜಿ (0) ಆರ್‌. ಅಶ್ವಿ‌ನ್‌ಗೆ ವಿಕೆಟ್​ ಒಪ್ಪಿಸಿದ್ದರು. ಹೀಗಾಗಿ ಅಂತಿಮ ದಿನ ವಿಂಡೀಸ್​ ಸ್ಪಿನ್‌ ಭೀತಿಗೆ ಸಿಲುಕಬಹುದು ಎಂದು ರೋಹಿತ್​ ಪಡೆ ನಿರೀಕ್ಷೆ ಮಾಡಿತ್ತು. ಆದರೆ ಈ ಎಲ್ಲ ಯೋಜನೆಗೆ ಮಳೆ ತಣ್ಣೀರೆರಚಿತು. ಸೋಲುವು ಭೀತಿಯಲ್ಲಿದ್ದ ವಿಂಡೀಸ್​ಗೆ ಮಳೆ ವರದಾನವಾಯಿತು.

ಮೊದಲ ಇನಿಂಗ್ಸ್​ನ 183 ರನ್ನುಗಳ ಮುನ್ನಡೆಯ ಪಡೆದ ಭಾರತ ದ್ವಿತೀಯ ಇನಿಂಗ್ಸ್​ನಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿ ಕೇವಲ 24 ಓವರ್‌ಗಳಲ್ಲಿ 2 ವಿಕೆಟಿಗೆ 181 ರನ್‌ ಬಾರಿಸಿ ಡಿಕ್ಲೇರ್‌ ಮಾಡಿತ್ತು. ರೋಹಿತ್‌ ಶರ್ಮ ಮತ್ತು ಇಶಾನ್‌ ಕಿಶನ್‌ ಅರ್ಧ ಶತಕ ಬಾರಿಸಿ ಮಿಂಚಿದರು. ರೋಹಿತ್‌ 44 ಎಸೆತಗಳಿಂದ 57 ರನ್‌ ಹೊಡೆದರೆ (5 ಬೌಂಡರಿ, 3 ಸಿಕ್ಸರ್‌), ಇಶಾನ್‌ ಕಿಶನ್‌ 34 ಎಸೆತಗಳಿಂದ ಅಜೇಯ 52 ರನ್‌ ಬಾರಿಸಿದರು. ಈ ಮೂಲಕ ಇಶಾನ್​ ಕಿಶನ್​ ಮೊದಲ ಟೆಸ್ಟ್​ ಪಂದ್ಯದಲ್ಲಿ ಕಂಡ ಬ್ಯಾಟಿಂಗ್​ ವೈಫಲ್ಯವನ್ನು ಇಲ್ಲಿ ಸರಿಪಡಿಸಿಕೊಂಡರು. ಶುಭಮನ್‌ ಗಿಲ್‌ ಔಟಾಗದೆ 29 ರನ್‌ ಬಾರಿಸಿದರು.

ಇದನ್ನೂ ಓದಿ ind vs wi : ಇಶಾನ್​ ಕಿಶನ್​ ಚೊಚ್ಚಲ ಟೆಸ್ಟ್​ ಅರ್ಧ ಶತಕ ಬಾರಿಸಿದ್ದು ತಮ್ಮ ಬ್ಯಾಟಲ್ಲಿ ಅಲ್ಲ; ಮತ್ಯಾರದ್ದು?

ಸಂಕ್ಷಿಪ್ತ ಸ್ಕೋರ್​

ಭಾರತ: ಮೊದಲ ಇನಿಂಗ್ಸ್​ 438, ದ್ವಿತೀಯ ಇನಿಂಗ್ಸ್​ 2 ವಿಕೆಟಿಗೆ 181 ಡಿಕ್ಲೇರ್‌: (ರೋಹಿತ್‌ ಶರ್ಮ 57, ಇಶಾನ್‌ ಕಿಶನ್‌ ಔಟಾಗದೆ 52, ಯಶಸ್ವಿ ಜೈಸ್ವಾಲ್‌ 38, ಶುಭಮನ್‌ ಗಿಲ್‌ ಔಟಾಗದೆ 29, ಶಾನನ್‌ ಗ್ಯಾಬ್ರಿಯಲ್‌ 33ಕ್ಕೆ 1, ವ್ಯಾರಿಕ್ಯಾನ್‌ 36ಕ್ಕೆ 1).
ವೆಸ್ಟ್‌ ಇಂಡೀಸ್‌: ಮೊದಲ ಇನಿಂಗ್ಸ್​ 255, ದ್ವಿತೀಯ ಇನಿಂಗ್ಸ್​ 2 ವಿಕೆಟಿಗೆ 76, ಪಂದ್ಯ ಡ್ರಾ (ಬ್ರಾತ್‌ವೇಟ್‌ 28, ತೇಜ್‌ನಾರಾಯಣ್‌ ಅಜೇಯ 24, ಬ್ಲ್ಯಾಕ್‌ವುಡ್‌ ಅಜೇಯ 20, ಅಶ್ವಿ‌ನ್‌ 33ಕ್ಕೆ 2). ಪಂದ್ಯ ಶ್ರೇಷ್ಠ: ಮೊಹಮ್ಮದ್​ ಸಿರಾಜ್​.

Exit mobile version