Site icon Vistara News

IND vs WI Odi: ಭಾರತ ವಿರುದ್ಧದ ಏಕದಿನ ಸರಣಿಗೆ ವಿಂಡೀಸ್​ ತಂಡ ಪ್ರಕಟ; ಹಲವು ಸ್ಟಾರ್​ ಆಟಗಾರರ ಆಗಮನ

Shimron Hetmyer has returned as West Indies announced squad for India ODI series

ಬಾರ್ಬಡೋಸ್: ಭಾರತ ವಿರುದ್ಧದ ಟೆಸ್ಟ್​ ಸರಣಿ ಕಳೆದುಕೊಂಡ ವೆಸ್ಟ್​ ಇಂಡೀಸ್​ ಇದೀಗ ಏಕದಿನ ಸರಣಿ(IND vs WI Odi) ಆಡಲು ಮುಂದಾಗಿದೆ. ಈ ಸರಣಿಯಲ್ಲಿ ಗೆದ್ದು ಟೆಸ್ಟ್​ ಸೋಲಿಗೆ ಸೇಡು ತೀರಿಸುವ ಇರಾದೆ. ಇದಕ್ಕಾಗಿ ಬಲಿಷ್ಠ 15 ಸದಸ್ಯರ ತಂಡವನ್ನು(West Indies squad for India ODI) ಮಂಗಳವಾರ ಪ್ರಕಟಿಸಿದೆ. ಆದರೆ ತಂಡದಲ್ಲಿ ಕೆಲ ಅಚ್ಚರಿಯ ಆಯ್ಕೆ ಕಂಡುಬಂದಿದೆ.

ಭಾರತ ಮತ್ತು ವಿಂಡೀಸ್​ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಜುಲೈ 27ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿದೆ. ಎಲ್ಲ ಪಂದ್ಯಗಳು ಸಂಜೆ 7ಕ್ಕೆ (ಭಾರತೀಯ ಕಾಲಮಾನ) ಆರಂಭವಾಗಲಿದೆ. 48 ವರ್ಷಗಳ ಇತಿಹಾಸವುಳ್ಳ ಏಕದಿನ ವಿಶ್ವಕಪ್​ ಟೂರ್ನಿಗೆ ಮೊದಲ ಬಾರಿಗೆ ಅರ್ಹತೆ ಪಡೆದುಕೊಳ್ಳಲು ವಿಫಲಗೊಂಡ ಬಳಿಕ ವಿಂಡೀಸ್ ಆಡುತ್ತಿರುವ ಮೊದಲ ಏಕದಿನ ಸರಣಿ ಇದಾಗಿದೆ.

ತಂಡಕ್ಕೆ ಮರಳಿದ ಹೆಟ್‌ಮೇರ್‌

ಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾದ ಎಡಗೈ ದಾಂಡಿಗ ಶಿಮ್ರಾನ್‌ ಹೆಟ್‌ಮೇರ್‌(Shimron Hetmyer) ಅವರು ಸರಿ ಸುಮಾರು ಒಂದು ವರ್ಷದ ಬಳಿಕ ವೆಸ್ಟ್​ ಇಂಡೀಸ್​ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. ಹೆಟ್‌ಮೇರ್‌ 2022ರ ಆಗಸ್ಟ್​ನಲ್ಲಿ ವೆಸ್ಟ್ ಇಂಡೀಸ್ ಪರ ಕೊನೆಯದಾಗಿ ಕ್ರಿಕೆಟ್ ಆಡಿದ್ದರು. ಇದಾದ ಬಳಿಕ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಈ ಆವೃತ್ತಿಯ ಐಪಿಎಲ್​ನಲ್ಲಿ ಹೆಟ್‌ಮೇರ್‌ ರಾಜಸ್ಥಾನ್​ ರಾಯಲ್ಸ್​ ಪರ ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶಿಸಿ ತಮಡಕ್ಕೆ ಹಲವು ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. ಇದೇ ಪ್ರದರ್ಶನ ಕಂಡು ಅವರಿಗೆ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಥಾನ ನೀಡಲಾಗಿದೆ. ಇವರ ಜತೆ ಗಾಯದಿಂದ ಚೇತರಿಕೆ ಕಂಡಿರುವ ವೇಗದ ಬೌಲರ್ ಜೇಡನ್ ಸೀಲ್ಸ್, ಲೆಗ್ ಸ್ಪಿನ್ನರ್ ಯಾನಿಕ್ ಕ್ಯಾರಿಯಾ ಮತ್ತು ಗುಡಾಕೇಶ್ ಮೋಟಿ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ಇದನ್ನೂ ಓದಿ IND vs WI: ಸರಣಿ ಗೆದ್ದು ದಾಖಲೆ ನಿರ್ಮಿಸಿದರೂ ಪಾಕ್​ಗೆ ಅಗ್ರ ಸ್ಥಾನ ಬಿಟ್ಟುಕೊಟ್ಟ ಭಾರತ

ಅಚ್ಚರಿ ಎಂದರೆ ಸ್ಟಾರ್​ ಬ್ಯಾಟರ್​ ನಿಕೋಲಸ್​ ಪೂರನ್(Nicholas Pooran)​ ಮತ್ತು ಅನುಭವಿ ಜೇಸನ್​ ಹೋಲ್ಡರ್​ ಅವರನ್ನು ಈ ಸರಣಿಯಿಂದ ಕೈಬಿಡಲಾಗಿದೆ. ಹೋಲ್ಡರ್​ಗೆ ವಿಶ್ರಾಂತಿ ನೀಡಿದರೆ, ಪೂರನ್​ ಅವರು ಯುಎಸ್‌ನಲ್ಲಿ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿದ್ದಾರೆ.

ವೆಸ್ಟ್​ ಇಂಡೀಸ್​ ಏಕದಿನ ತಂಡ

ಶೈ ಹೋಪ್‌ (ನಾಯಕ), ರೋವ್‌ಮನ್ ಪೊವೆಲ್ (ಉಪನಾಯಕ), ಅಲಿಕ್ ಅಥಾನಾಜೆ, ಯಾನಿಕ್ ಕರಿಯಾ, ಕೀಸಿ ಕಾರ್ಟಿ, ಡೊಮಿನಿಕ್ ಡ್ರೇಕ್ಸ್, ಶಿಮ್ರಾನ್‌ ಹೆಟ್‌ಮೇರ್‌, ಅಲ್ಜಾರಿ ಜೋಸೆಫ್, ಬ್ರ್ಯಾಂಡನ್ ಕಿಂಗ್, ಕೈಲ್ ಮೇಯರ್ಸ್, ಗುಡಕೇಶ್ ಮೋಟಿ, ಜೇಡನ್ ಸಿನ್‌ಸ್, ರೊಮಾರಿಯೋ ಶೆಫರ್ಡ್, ಕೆವಿನ್​ ಸಿಂಕ್ಲರ್​, ಒಶಾನೆ ಥೋಮಸ್.

Exit mobile version