ರೊಸೇಯೂ (ಡೊಮಿನಿಕಾ): ವೆಸ್ಟ್ ಇಂಡೀಸ್(IND vs WI) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರತ ಹಿಡಿತ ಸಾಧಿಸಿದೆ. ವಿಂಡೀಸ್ ತಂಡವನ್ನು 150ರನ್ಗೆ ಕಟ್ಟಿಹಾಕಿ ಭಾರತ ವಿಕೆಟ್ ನಷ್ಟವಿಲ್ಲದೆ 80 ರನ್ ಗಳಿಸಿದೆ. ಮೊದಲ ದಿನವೇ ಸ್ಪಿನ್ ಮಾಜಿಕ್ ಮಾಡಿ 5 ವಿಕೆಟ್ ಉರುಳಿಸಿದ ಆರ್.ಅಶ್ವಿನ್(Ravichandran Ashwin) ಅವರು ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.
ಅಶ್ವಿನ್ ಅವರು 5 ವಿಕೆಟ್ ಪಡೆಯುತ್ತಿದ್ದಂತೆ ಇಂಗ್ಲೆಂಡ್ ತಂಡದ ಹಿರಿಯ ವೇಗಿ ಜೇಮ್ಸ್ ಆ್ಯಂಡರ್ಸನ್(James Anderson) ದಾಖಲೆಯನ್ನು ಮುರಿದಿದ್ದಾರೆ. ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ 33ನೇ ಬಾರಿಗೆ ಇನಿಂಗ್ಸ್ವೊಂದರಲ್ಲಿ 5 ವಿಕೆಟ್ ಕಿತ್ತ ಸಾಧನೆ ಮಾಡುವ ಮೂಲಕ ಆ್ಯಂಡರ್ಸನ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಆ್ಯಂಡರ್ಸನ್ ಅವರು 32 ಸಲ 5 ವಿಕೆಟ್ ಪಡೆದ ಈ ಸಾಧನೆ ಮಾಡಿದ್ದರು. ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಅಶ್ವಿನ್ 24.3 ಓವರ್ ಎಸೆದು 60 ರನ್ ವೆಚ್ಚದಲ್ಲಿ 5 ವಿಕೆಟ್ ಪಡೆದರು.
ಒಂದೇ ಇನಿಂಗ್ಸ್ನಲ್ಲಿ 5 ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಅಶ್ವಿನ್ 6ನೇ ಸ್ಥಾನಕ್ಕೇರಿದ್ದಾರೆ. 32 ಸಲ ಈ ಸಾಧನೆ ಮಾಡಿರುವ ಇಂಗ್ಲೆಂಡ್ ವೇಗಿ ಆ್ಯಂಡರ್ಸನ್ ಇದೀಗ 7ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಸಾಧನೆ ಮಾಡಿದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಆಟಗರಾನೆಂದರೆ ಶ್ರೀಲಂಕಾದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್. ಅವರು ಒಟ್ಟು 67 ಬಾರಿ 5 ವಿಕೆಟ್ ಗಳ ಗೊಂಚಲು ಪಡೆದಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್(Shane Warne) ಇದ್ದು ಅವರು ಒಟ್ಟು 37 ಬಾರಿ ಈ ಸಾಧನೆ ಮಾಡಿದ್ದಾರೆ. ಮೂರನೇ ಸ್ಥಾನದಲ್ಲಿ ನ್ಯೂಜಿಲೆಂಡ್ನ ರಿಟರ್ಡ್ ಹಡ್ಲೀ(Richard Hadlee) ಇದ್ದು ಅವರು 36 ಬಾರಿ ಈ ಸಾಧನೆ ಮಾಡಿದ್ದಾರೆ. ಭಾರತದ ಅನಿಲ್ ಕುಂಬ್ಳೆ(Anil Kumble) ಅವರು 35 ಬಾರಿ 5 ವಿಕೆಟ್ ಗೊಂಚಲು ಪಡೆದು ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ IND vs WI: 12 ವರ್ಷದಲ್ಲಿ ತಂದೆ-ಮಗನ ವಿಕೆಟ್ ಪಡೆದು ಅಪರೂಪದ ಸಾಧನೆ ಮಾಡಿದ ಅಶ್ವಿನ್
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್
ಆರ್. ಅಶ್ವಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೂರನೇ ಬೌಲರ್ ಎನಿಸಿದರು. ಈಗಾಗಲೇ ಅನಿಲ್ ಕುಂಬ್ಳೆ ಹಾಗೂ ಹರ್ಭಜನ್ ಸಿಂಗ್ ಈ ಸಾಧನೆ ಮಾಡಿದ್ದಾರೆ. ಅಲ್ಲದೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹರ್ಭಜನ್ ಸಿಂಗ್ 711 ವಿಕೆಟ್ ಪಡೆದಿದ್ದು, ಆರ್.ಅಶ್ವಿನ್ ಇನ್ನೂ 11 ವಿಕೆಟ್ ಪಡೆದರೆ ಭಜ್ಜಿ ದಾಖಲೆ ಮುರಿಯಲಿದ್ದಾರೆ. ಸದ್ಯ, ಜಾಗತಿಕ ಕ್ರಿಕೆಟ್‌ನಲ್ಲಿ ಆರ್.ಅಶ್ವಿನ್ 701 ವಿಕೆಟ್ ಪಡೆದಿದ್ದಾರೆ.
ಆರ್.ಅಶ್ವಿನ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅವರು ಟೆಸ್ಟ್‌ನಲ್ಲಿ 477 ವಿಕೆಟ್, ಏಕದಿನದಲ್ಲಿ 151 ಹಾಗೂ ಟಿ-20 ಪಂದ್ಯಗಳಲ್ಲಿ 72 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಅಶ್ವಿನ್ ಆಡಿರಲಿಲ್ಲ. ಆದರೆ, ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್‌ನಲ್ಲಿ ಐದು ವಿಕೆಟ್ ಪಡೆಯುವ ಮೂಲಕ ಅವರು ಒಳ್ಳೆಯ ಕಮ್‌ಬ್ಯಾಕ್ ಮಾಡಿದ್ದಾರೆ.