ರೊಸೇಯೂ (ಡೊಮಿನಿಕಾ): ವೆಸ್ಟ್ ಇಂಡೀಸ್(IND vs WI) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸಿದ ರೋಹಿತ್ ಶರ್ಮ(Rohit Sharma) ಮತ್ತು ಯಶಸ್ವಿ ಜೈಸ್ವಾಲ್(Yashasvi Jaiswal) ಬೃಹತ್ ಜತೆಯಾಟ ನಡೆಸುವ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ. 229 ರನ್‌ಗಳ ಜತೆಯಾಟ ನಡೆಸುವ ಮೂಲಕ ಏಷ್ಯಾದ ಹೊರಗೆ ಭಾರತದ ಜೋಡಿ ಬಾರಿಸಿದ ಅತಿದೊಡ್ಡ ಆರಂಭಿಕ ಪಾಲುದಾರಿಕೆ ಎಂಬ ಹೊಸ ದಾಖಲೆ ಬರೆದರು. ಉಭಯ ಆಟಗಾರರ ಈ ಶತಕ ಸಾಹಸದಿಂದ ಭಾರತ ಮೊದಲ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ.
ಸದ್ಯ 143 ರನ್ ಗಳಿಸಿರುವ ಜೈಸ್ವಾಲ್ ಬ್ಯಾಟಿಂಗ್ ಕಾಯ್ದುಕೊಂಡಿದ್ದು. ಮೂರನೇ ದಿನ ತಮ್ಮ ಶತಕವನ್ನು ದ್ವೀಶತಕವಾನ್ನಾಗಿ ಪರಿವರ್ತಿಸುವ ಇರಾದೆಯಲ್ಲಿದ್ದಾರೆ. ಚೊಚ್ಚಲ ಅವಕಾಶದಲ್ಲೇ ಶತಕ ಬಾರಿಸಿದ ಅವರು ಟೀಮ್ ಇಂಡಿಯಾದ ಭವಿಷ್ಯದ ತಾರೆಯಾಗಿ ಗುರುತಿಸಿಕೊಂಡಿದ್ದಾರೆ. ನೀಡಿದೆ. ಜೈಸ್ವಾಲ್ ಅವರು ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ 17ನೇ ಆಟಗಾರ ಎನಿಸಿಕೊಂಡರು. ಹಾಗೆಯೇ ವಿದೇಶಿ ನೆಲದಲ್ಲಿ ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಏಳನೇ ಭಾರತೀಯ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು.
ಮೊದಲ ದಿನದ ಅಂತ್ಯಕ್ಕೆ 80 ರನ್ ಗಳಿಸಿದ್ದಲ್ಲಿಂದ ದ್ವಿತೀಯ ದಿನದ ಆಟ ಮುಂದುವರಿಸಿದ ಭಾರತ ಉತ್ತಮ ಪ್ರದರ್ಶನವನ್ನೇ ತೋರಿತು. ಸದ್ಯ ಭಾರತ 312 ರನ್ ಗಳಿಸಿ 162 ರನ್‌ಗಳ ಮುನ್ನಡೆ ಪಡೆದುಕೊಂಡಿದೆ. ವಿರಾಟ್ ಕೊಹ್ಲಿ (36*) ಮತ್ತು ಜೈಸ್ವಾಲ್(143*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕಳೆದ ಹಲವು ಸರಣಿಗಳಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡ ರೋಹಿತ್ ವಿಂಡೀಸ್ ವಿರುದ್ಧ 103 ರನ್ ಬಾರಿಸಿ ಗಮನ ಸೆಳೆದರು. ಏಕದಿನ ವಿಶ್ವಕಪ್ಗೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಇರುವಾಗಲೇ ರೋಹಿತ್ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡದ್ದು ಟೀಮ್ ಇಂಡಿಯಾದ ಆತ್ಮವಿಶ್ವಾಸ ಹೆಚ್ಚಿಸಿದೆ.
ಇದನ್ನೂ ಓದಿ IND vs WI: ಜೈಸ್ವಾಲ್ ಚೊಚ್ಚಲ ಶತಕ; ಬೃಹತ್ ಮುನ್ನಡೆಯತ್ತ ಭಾರತ
ಹಲವು ದಾಖಲೆ ಬರೆದ ಜೈಸ್ವಾಲ್
ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಜೈಸ್ವಾಲ್ ಭಾರತ ಪರ ದಾಖಲೆಯೊಂದನ್ನು ಬರೆದರು. ಪದಾರ್ಪಣ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿ 17ನೇ ಆಟಗಾರ ಎನಿಸಿಕೊಂಡರು. ಲಾಲಾ ಅಮರ್ನಾಥ್ ಅವರು ಭಾರತ ಪರ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಆಟಗಾರನಾಗಿದ್ದಾರೆ. ಅವರು 1933ರಲ್ಲಿ ಇಂಗ್ಲೆಂಡ್ ವಿರುದ್ಧ 118 ರನ್ ಬಾರಿಸಿದ್ದರು. ರೋಹಿತ್ ಶರ್ಮ(177) ಮತ್ತು ಪೃಥ್ವಿ ಶಾ(134) ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ವಿಂಡೀಸ್ ವಿರುದ್ಧ ಶತಕ ಬಾರಿಸಿದ್ದರು. ಇದೀಗ ಜೈಸ್ವಾಲ್ ಕೂಡ ವಿಂಡೀಸ್ ವಿರುದ್ಧವೇ ಈ ಸಾಧನೆ ಮಾಡಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎಂಬ ಹಿರಿಮೆಗೂ ಜೈಸ್ವಾಲ್(21 ವರ್ಷ 196ದಿನ) ಪಾತ್ರರಾದರು. ಪೃಥ್ವಿ ಶಾ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು 18 ವರ್ಷ 329 ದಿನ ದಲ್ಲಿ ಶತಕ ಬಾರಿಸಿದ್ದರು.