ಪೋರ್ಟ್ ಆಫ್ ಸ್ಪೇನ್: ಭಾರತ ಹಾಗೂ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯು (IND vs WI) ಕೊನೆಯ ಹಾಗೂ ಕುತೂಹಲ ಘಟ್ಟ ತಲುಪಿದೆ. ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯುತ್ತಿರುವ ಕೊನೆಯ ಹಾಗೂ ಎರಡನೇ ಟೆಸ್ಟ್ ಸರಣಿಯ ಐದನೇ ದಿನವು ವೆಸ್ಟ್ ಇಂಡೀಸ್ 289 ರನ್ ಗಳಿಸಿ ಸರಣಿ ಸಮಬಲ ಮಾಡಿಕೊಳ್ಳಲು ಹವಣಿಸುತ್ತಿದ್ದರೆ, ಉಳಿದ 8 ವಿಕೆಟ್‌ಗಳನ್ನು ಕಬಳಿಸಿ ಪಂದ್ಯ ಹಾಗೂ ಸರಣಿಯನ್ನು ಕೈವಶ ಮಾಡಿಕೊಳ್ಳಲು ರೋಹಿತ್ ಶರ್ಮಾ ಪಡೆ ಸಜ್ಜಾಗಿದೆ.
ಪಂದ್ಯದ ನಾಲ್ಕನೇ ದಿನ ಭಾರತ ಮಳೆ ಅಡಚಣೆಯ ಮಧ್ಯೆಯೇ ಉತ್ತಮ ಪ್ರದರ್ಶನ ತೋರಿತು. ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ 255 ರನ್ಗಳಿಗೆ ಕಟ್ಟಿ ಹಾಕಿದ್ದಲ್ಲದೆ, ಟಿ-20 ಮಾದರಿಯಲ್ಲಿ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 24 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 181 ರನ್ ಆಗಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್ ಮುನ್ನಡೆ ಸೇರಿ ವಿಂಡೀಸ್ ಗೆಲುವಿಗೆ 365 ರನ್‌ಗಳ ಗುರಿ ನೀಡಿತು.
ಭಾರತದ ಪರ ಬಿರುಸಿನ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್, ಕೇವಲ 34 ಎಸೆತಗಳಲ್ಲಿ 52 ರನ್ ಸಿಡಿಸಿದರು. ಆ ಮೂಲಕ ವಿರಾಟ್ ಕೊಹ್ಲಿ ಬದಲಾಗಿ ಅವರ ಕ್ರಮಾಂಕದಲ್ಲಿ ಕಣಕ್ಕಿಳಿದೂ ಸೈ ಎನಿಸಿಕೊಂಡರು. ಟೆಸ್ಟ್‌ನಲ್ಲಿ ಮೊದಲ ಅರ್ಧಶತಕ ಸಿಡಿಸಿದ ಸಂಭ್ರಮವೂ ಇಶಾನ್ ಕಿಶನ್ ಅವರದ್ದಾಗಿತ್ತು.
ಇದನ್ನೂ ಓದಿ: Women’s Asia Cup 2023: ಭಾರತದ ವನಿತೆಯರ ತಂಡ ‘ಎ’ ಒನ್; ಬಾಂಗ್ಲಾ ಮಣಿಸಿ ಏಷ್ಯಾ ಕಪ್ ಚಾಂಪಿಯನ್ಸ್
365 ರನ್‌ಗಳ ಬೃಹತ್ ಗುರಿ ಬೆನ್ನತ್ತಿರುವ ವೆಸ್ಟ್ ಇಂಡೀಸ್ ತಂಡವು ನಾಲ್ಕನೇ ದಿನದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 76 ರನ್ ಗಳಿಸಿದ್ದು, ಕೊನೆಯ ದಿನ 289 ರನ್ ಪೇರಿಸಬೇಕಿದೆ. ಆದರೆ, ಕೊನೆಯ ದಿನ 289 ರನ್ ಗಳಿಸುವುದು ಕಷ್ಟವಾಗಿದೆ. ಈಗಾಗಲೇ ಪಿಚ್ ಸ್ಪಿನ್ನರ್‌ಗಳ ಪರವಾಗಿದ್ದು, ಅಶ್ವಿನ್, ಜಡೇಜಾ ಮೋಡಿಗೆ ವಿಂಡೀಸ್ ನಲುಗುವ ಸಾಧ್ಯತೆ ಇದೆ. ಕೊನೆಯ ಪಂದ್ಯವನ್ನು ಡ್ರಾ ಮಾಡಿಕೊಂಡರೆ ಅಥವಾ ಮಳೆಯಿಂದ ಪಂದ್ಯ ರದ್ದಾದರೂ ಸರಣಿ ಭಾರತ ತಂಡದ ಪಾಲಾಗಲಿದೆ.