ಟ್ರಿನಿಡಾಡ್: ತವರಿನಲ್ಲಿ ಸರಣಿ ಸೋಲಿನ ಮುಖಭಂಗ ತಪ್ಪಿಸುವ ಪಣ ತೊಟ್ಟಿರುವ ವೆಸ್ಟ್ ಇಂಡೀಸ್(IND vs WI) ತಂಡ ಗುರುವಾರ ಭಾರತ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಪಂದ್ಯ ಉಭಯ ತಂಡಗಳಿಗೂ ವಿಶೇಷವಾಗಿದೆ. ಇದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ನೂರನೇ ಟೆಸ್ಟ್ ಪಂದ್ಯವಾಗಿದೆ. ಈ ಪಂದ್ಯದ ಪಿಚ್ ರಿಪೋರ್ಟ್ ಮತ್ತು ಸಂಭಾವ್ಯ ತಂಡಗಳ ಮಾಹಿತಿ ಇಂತಿದೆ.
ಪಿಚ್ ರಿಪೋರ್ಟ್
ಕ್ವೀನ್ಸ್ ಪಾರ್ಕ್‌ನ ಪಿಚ್ನಲ್ಲಿ ಗೆಚ್ಚಿನ ಮೊತ್ತ ದಾಖಲಿಸುವುದು ಬಲು ಕಷ್ಟ. ಮೊದಲ ಇನಿಂಗ್ಸ್ನಲ್ಲಿ 300 ರನ್ ಗಳಿಸಿದರೆ ಇದುವೇ ಇಲ್ಲಿ ದೊಡ್ಡ ಮೊತ್ತವಾಗಲಿದೆ. ಅಂತಿಮ ಎರಡು ದಿನದಾಟದಲ್ಲಿ ಇಲ್ಲಿ 150ರ ಗಡಿ ದಾಟುವುದು ಅಸಾಧ್ಯ ಎನ್ನುವಂತೆ ಈ ಪಿಚ್ ವರ್ತಿಸುತ್ತದೆ. ಸ್ಪಿನ್ನರ್ಗಳಿಗೆ ಇದು ನೆಚ್ಚಿನ ತಾಣ. ಹೀಗಾಗಿ ಉಭಯ ತಂಡಗಳು ಸ್ಪಿನ್ಗೆ ಹೆಚ್ಚಿನ ಮಹತ್ವ ನೀಡಬಹುದು. ಭಾರತ ಮೂರು ಸ್ಪಿನ್ನರ್ಗಳನ್ನು ಕಣಕ್ಕಿಳಿಸಿದರೂ ಅಚ್ಚರಿ ಇಲ್ಲ. ಈ ಪಿಚ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳೇ ಹೆಚ್ಚಿನ ಬಾರಿ ಮೇಲುಗೈ ಸಾಧಿಸಿದೆ. ಹೀಗಾಗಿ ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವ ಸಾಧ್ಯತೆ ಅಧಿಕವಾಗಿದೆ.
ವೆಸ್ಟ್ ಇಂಡೀಸ್ ಮತ್ತು ಭಾರತ ತಂಡ ಈ ಮೈದಾನದಲ್ಲಿ ಇದುವರೆಗೆ ಒಟ್ಟು 13 ಪಂದ್ಯಗಳನ್ನು ಆಡಿದೆ. ಇತ್ತಂಡಗಳು ತಲಾ 3 ಪಂದ್ಯಗಳನ್ನು ಗೆದ್ದಿದ್ದು, 7 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ. 2016 ರಲ್ಲಿ ಉಭಯ ತಂಡಗಳು ಇಲ್ಲಿ ಕೊನೆಯದಾಗಿ ಟೆಸ್ಟ್ ಪಂದ್ಯ ಆಡಿದ್ದವು. ಈ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು.
ಮಂಗಳವಾರ ಭಾರತ ತಂಡದ ಆಟಗಾರರು ಬ್ಯಾಟಿಂಗ್ ಅಭ್ಯಾಸಕ್ಕೆ ಮಾತ್ರ ಒತ್ತುಕೊಟ್ಟಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಜೈಸ್ವಾಲ್,ರೋಹಿತ್, ಕೊಹ್ಲಿ ಸೇರಿ ಎಲ್ಲ ಆಟಗಾರರು ಹೆಚ್ಚುವರಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದರು.
ಇದನ್ನೂ ಓದಿ IND vs WI: ಐತಿಹಾಸಿಕ ಟೆಸ್ಟ್ ಪಂದ್ಯ ಆಡಲು ಸಜ್ಜಾದ ಭಾರತ-ವಿಂಡೀಸ್
ಸಂಭಾವ್ಯ ತಂಡ
ವೆಸ್ಟ್ ಇಂಡೀಸ್: ಕ್ರೇಗ್ ಬ್ರಾತ್‌ವೇಟ್ (ನಾಯಕ), ಜರ್ಮೈನ್ ಬ್ಲ್ಯಾಕ್‌ವುಡ್ (ಉಪನಾಯಕ), ಅಲಿಕ್ ಅಥನೇಜ್, ತೇಜನಾರಾಯಣ ಚಂದ್ರಪಾಲ್, ರಖೀಂ ಕಾರ್ನ್ವಾಲ್, ಜೋಶುವ ಡಿ ಸಿಲ್ವಾ, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕಿರ್ಕ್ ಮೆಕೆಂಜಿ, ಕೇಮರ್ ರೋಚ್, ಕೆವಿನ್ ಸಿಂಕ್ಲೇರ್.
ಭಾರತ: ರೋಹಿತ್ ಶರ್ಮ(ನಾಯಕ), ಯಶಸ್ವಿ ಜೈಸ್ವಾಲ್,ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ (ಉಪ ನಾಯಕ),ಇಶಾನ್ ಕಿಶನ್ (ವಿ.ಕೀ), ಆರ್ ಅಶ್ವಿನ್, ಆರ್ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯದೇವ್ ಉನದ್ಕತ್.