ಬೆಂಗಳೂರು: ವಿಂಡೀಸ್(IND vs WI) ವಿರುದ್ಧದ ಟಿ20 ಸರಣಿಗೆ ಪ್ರಕಟಿಸಿದ ತಂಡವನ್ನು ಗಮನಿಸುವಾಗ 2024ರ ವಿಶ್ವಕಪ್‌ಗೆ ತಂಡವೊಂದು ಸಜ್ಜುಗೊಂಡಂತೆ ತೋರುತ್ತಿದೆ. ಕಳೆದ ವರ್ಷ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್‌ನಲ್ಲಿ ಭಾರತ ತಂಡ ಹೀನಾಯವಾಗಿ ಸೋತು ಹೊರಬಿದ್ದ ಬಳಿಕ ಭಾರತದ ಅಭಿಮಾನಿಗಳು ಚುಟುಕು ಮಾದರಿಯ ಕ್ರಿಕೆಟ್‌ನಿಂದ ಸೀನಿಯರ್‌ಗಳನ್ನೆಲ್ಲ ಕೈಬಿಟ್ಟು ಯುವ ಪಡೆಯೊಂದನ್ನು ರೂಪಿಸಿ ಇವರನ್ನು 2024ರ ವಿಶ್ವಕಪ್‌ಗೆ ಸಜ್ಜುಗೊಳಿಸಬೇಕು ಒಂದು ಒತ್ತಾಯಿಸಿದ್ದರು. ಇದಕ್ಕೆ ಕಾಲ ಸನ್ನಿಹಿತವಾದಂತೆ ತೋರುತ್ತಿದೆ. ವಿಂಡೀಸ್ ಪ್ರವಾಸಕ್ಕೆ ಅಣಿಯಾಗಿರುವ ತಂಡವೇ ಇದಕ್ಕೆ ಉತ್ತಮ ನಿದರ್ಶನ.
ಈ ಸರಣಿಗೆ ರೋಹಿತ್ ಶರ್ಮ(rohit sharma), ವಿರಾಟ್ ಕೊಹ್ಲಿ(virat kohli), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಸೇರಿ ಮೊದಲಾದ ಸೀನಿಯರ್‌ಗಳನ್ನು ಆಯ್ಕೆ ಪರಿಗಣನೆ ಮಾಡಿಲ್ಲ. ಕಳೆದ ನಾಲ್ಕು ಟಿ20 ಸರಣಿಯಿಂದಲೂ ಈ ಆಟಗಾರರನ್ನು ಕೈ ಬಿಡಲಾಗಿತ್ತು. ಇದೆಲ್ಲವನ್ನು ಗಮನಿಸುವಾಗ ಈ ಆಟಗಾರರು ಇನ್ನು ಮುಂದೆ ಟಿ20 ಸರಣಿಯಿಂದ ಖಾಯಂ ಆಗಿ ಹೊರಗುಳಿಯುವುದರಲ್ಲಿ ಅನುಮಾನವಿಲ್ಲ. ಹಂಗಾಮಿಯಾಗಿ ತಂಡವನ್ನು ಮುನ್ನಡೆಸುತ್ತಿದ್ದ ಹಾರ್ದಿಕ್ ಪಾಂಡ್ಯ(hardik pandya) ಅವರೇ ಮುಂದಿನ ಖಾಯಂ ನಾಯಕನಾಗಿ ಮುಂದುವರಿಯುವುದು ಖಚಿತವಾದಂತಿದೆ. ಪಾಂಡ್ಯ ಮತ್ತು ಯುವ ತಂಡವನ್ನೇ ಮುಂದುವರಿಸುವುದು ಭಾರತದ ಮುಂದಿನ ಯೋಜನೆ ಆಗಿದ್ದರೆ ಅಚ್ಚರಿಯೇನಿಲ್ಲ.
ವಿಂಡೀಸ್ ಪ್ರವಾಸದಲ್ಲಿ ಭಾರತ 5 ಟಿ20 ಪಂದ್ಯಗಳನ್ನು ಆಡಲಿದೆ. ಐಪಿಎಲ್ನಲ್ಲಿ ಮಿಂಚಿದ ತಿಲಕ್ ವರ್ಮಾ, ಯಶಸ್ವಿ ಜೈಸ್ವಾಲ್, ಮುಖೇಶ್ ಕುಮಾರ್ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಪರ ಆಡುವ ನಿರೀಕ್ಷೆಯಲ್ಲಿದ್ದಾರೆ. ಇಲ್ಲಿ ಪಾಂಡ್ಯ ಪಡೆ ಮೇಲುಗೈ ಸಾಧಿಸಿದರೆ ಹಿರಿಯ ಆಟಗಾರರೆಲ್ಲ ಖಾಯಂ ಆಗಿ ಹೊರಗುಳಿಯುವುದರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ IND vs WI: ಐಪಿಎಲ್ನಲ್ಲಿ ಮಿಂಚಿದರೂ ವಿಂಡೀಸ್ ಟಿ20 ಸರಣಿಗೆ ರಿಂಕು,ಗಾಯಕ್ವಾಡ್ ಇಲ್ಲ
ಈಗಾಗಲೇ ಅನೇಕ ಮಾಜಿ ಟೀಮ್ ಇಂಡಿಯಾದ ಮಾಜಿ ಆಟಗಾರರು ಕೂಡ “ಸ್ಪ್ಲಿಟ್ ಟೀಮ್ ” ಬಗ್ಗೆ ಆಸಕ್ತಿ ತೋರಿದ್ದಾರೆ. ಇಂಗ್ಲೆಂಡ್, ಆಸ್ಟ್ರೇಲಿಯದಂತೆ ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯಗಳಿಗೆ ಪ್ರತ್ಯೇಕ ತಂಡಗಳನ್ನು ರಚಿಸುವ ಕುರಿತು ಸಲಹೆಯನ್ನೂ ನೀಡಿದ್ದಾರೆ. ಈ ಎಲ್ಲ ಸಲಹೆಯನ್ನು ಇದೀಗ ಅಜಿತ್ ಅಗರ್ಕರ್ ಸಾರಥ್ಯದ ನೂತನ ಆಯ್ಕೆ ಸಮಿತಿ ಗಂಭೀರವಾಗಿ ಪರಿಗಣಿಸಿದಂತೆ ತೋರುತ್ತಿದೆ.
ಭಾರತ ಟಿ20 ತಂಡ
ಇಶಾನ್ ಕಿಶನ್, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ಅಕ್ಷರ್ ಪಟೇಲ್, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ರವಿ ಬಿಷ್ಟೋಯಿ, ಆರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಆವೇಶ್ ಖಾನ್, ಮುಖೇಶ್ ಕುಮಾರ್
ವೇಳಾಪಟ್ಟಿ
ಮೊದಲ ಟಿ20 ಪಂದ್ಯ ಆಗಸ್ಟ್ 3, ಸ್ಥಳ: ಟ್ರಿನಿಡಾಡ್
ದ್ವಿತೀಯ ಟಿ20 ಪಂದ್ಯ ಆಗಸ್ಟ್ 6, ಸ್ಥಳ: ಗಯಾನಾ
ಮೂರನೇ ಟಿ20 ಪಂದ್ಯ ಆಗಸ್ಟ್ 8, ಸ್ಥಳ: ಗಯಾನಾ
ನಾಲ್ಕನೇ ಟಿ20 ಪಂದ್ಯ ಆಗಸ್ಟ್ 12, ಸ್ಥಳ: ಫ್ಲೋರಿಡಾ
5ನೇ ಟಿ20 ಪಂದ್ಯ ಆಗಸ್ಟ್ 13, ಸ್ಥಳ: ಫ್ಲೋರಿಡಾ