ಫ್ಲೋರಿಡಾ: 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್(IND vs WI) 2-2 ಅಂತರದಿಂದ ಸಮಬಲ ಸಾಧಿಸಿದೆ. ಸರಣಿ ನಿರ್ಣಾಯಕ ಪಂದ್ಯ(West Indies vs India, 5th T20) ಇಂದು ಫ್ಲೋರಿಡಾದ(Florida) ಲೌಡರ್‌ಹಿಲ್(Lauderhill Cricket Stadium)ಮೈದಾನದಲ್ಲಿ ನಡೆಯಲಿದೆ. ಪಂದ್ಯ ಭಾರತೀಯ ಕಾಲಮಾನ ರಾತ್ರಿ 8ಕ್ಕೆ ಆರಂಭಗೊಳ್ಳಲಿದೆ.
ಗೆದ್ದರೆ 7ನೇ ಸರಣಿ ಸಾಧನೆ
ಭಾರತ-ವಿಂಡೀಸ್ ಈವರೆಗೆ 8 ಟಿ20 ಸರಣಿಗಳನ್ನಾಡಿವೆ. ಈ ಪೈಕಿ ಭಾರತ 6ರಲ್ಲಿ ಗೆದ್ದಿದ್ದು, 2 ಸರಣಿಯನ್ನು ವಿಂಡೀಸ್ ಕೈವಶಪಡಿಸಿಕೊಂಡಿತ್ತು. ಉಭಯ ತಂಡಗಳ ಕೊನೆ 5 ಸರಣಿಗಳಲ್ಲೂ ಭಾರತ ಗೆದ್ದಿದೆ. 2017ರಲ್ಲಿ ಕೊನೆ ಬಾರಿ ವಿಂಡೀಸ್ ಸರಣಿ ಜಯಿಸಿದೆ. ಸದ್ಯ 2-2 ಸಮಬಲ ಸಾಧಿಸಿದ ಭಾರತ ಭಾನುವಾರ ಗೆದ್ದರೆ 7ನೇ ಸರಣಿ ಜಯ ಸಾಧಿಸಿದ ದಾಖಲೆ ಬರೆಯಲಿದೆ. ಮೊದಲೆರಡು ಪಂದ್ಯ ಸೋತ ಬಳಿಕ ಗೆಲುವಿನ ಹಳಿ ಏರಿದ ಹಾರ್ದಿಕ್ ಪಡೆಯ ಸದ್ಯದ ಪ್ರದರ್ಶನವನ್ನು ನೋಡುವಾಗ ಈ ಪಂದ್ಯದಲ್ಲಿಯೂ ಗೆಲುವಿನ ನಿರೀಕ್ಷೆಯೊಂದನ್ನು ಮಾಡಬಹುದು.
ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ
ಸರಣಿ ನಿರ್ಣಾಯಕ ಪಂದ್ಯವಾದ ಕಾರಣ ಭಾರತ ತಂಡ ಈ ಪಂದ್ಯದಲ್ಲಿ ಒಂದು ಬದಲಾವಣೆ ಮಾಡುವುದು ಖಚಿತ. ಪ್ರತಿ ಪಂದ್ಯದಲ್ಲಿಯೂ ದುಬಾರಿಯಾಗಿ ಪರಿಣಮಿಸಿದ ಅಕ್ಷರ್ ಪಟೇಲ್ ಅವರನ್ನು ಕೈ ಬಿಟ್ಟು ಅವರ ಬದಲಿಗೆ ಹೆಚ್ಚುವರಿ ಬ್ಯಾಟರ್ ಆಗಿ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಜತೆಗೆ ಫ್ಲೋರಿಡಾದ ಲೌಡರ್‌ಹಿಲ್ ಪಿಚ್ ಸ್ಪಿನ್ಗೆ ಹೆಚ್ಚಿನ ನೆರವು ನೀಡುತ್ತಿಲ್ಲ ಮತ್ತು ಬ್ಯಾಟಿಂಗ್ಗೆ ಯೋಗ್ಯವಾಗಿದೆ. ಹೀಗಾಗಿ ಬದಲಾವಣೆ ಖಚಿತ ಎನ್ನಲಡ್ಡಿಯಿಲ್ಲ.
ಫಾರ್ಮ್ಗೆ ಮರಳಿದ ಶುಭಮನ್ ಗಿಲ್
ವಿಂಡೀಸ್ ಏಕದಿನ ಮತ್ತು ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಭರವಸೆಯ ಆಟಗಾರ ಶುಭಮನ್ ಗಿಲ್ ಮತ್ತೆ ತಮ್ಮ ಪ್ರಚಂಡ ಬ್ಯಾಟಿಂಗ್ ಪಾರ್ಮ್ಗೆ ಮರಳಿದಂತೆ ತೋರುತ್ತಿದೆ. ಶನಿವಾರದ ಪಂದ್ಯದಲ್ಲಿ ಭರ್ಜರಿ 5 ಸಿಕ್ಸರ್ ಮತ್ತು ಮೂರು ಬೌಂಡರಿ ನೆರವಿನಿಂದ ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೇ ಬ್ಯಾಟಿಂಗ್ ಪ್ರತಾಪ ಅಂತಿಮ ಪಂದ್ಯದಲ್ಲಿಯೂ ಕಂಡುಬಂದರೆ ಭಾರತಕ್ಕೆ ಸರಣಿ ಖಚಿತ. ಇವರ ಜತೆಗೆ ಜೈಸ್ವಾಲ್ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ.
ಇದನ್ನೂ ಓದಿ IND vs WI: ಅಂತಿಮ ಟಿ20 ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
ಎಡಗೈ ವೇಗಿ ಅರ್ಶ್ದೀಪ್ ಸಿಂಗ್(Arshdeep Singh) ಮತ್ತು ಸ್ಪಿನ್ನರ್ ಕುಲ್ದೀಪ್ ಯಾದವ್(Kuldeep Yadav) ಉತ್ತಮ ಲಯದಲ್ಲಿರುವುದು ಭಾರತ ತಂಡಕ್ಕೆ ಪ್ಲಸ್ ಪಾಯಿಂಟ್. ಈ ಜೋಡಿ ಎಲ್ಲ ಪಂದ್ಯಗಳಲ್ಲಿಯೂ ಶ್ರೇಷ್ಠ ಮಟ್ಟದ ಬೌಲಿಂಗ್ ಪ್ರದರ್ಶಿಸಿ ತಂಡಕ್ಕೆ ನೆರವಾಗಿದ್ದಾರೆ. ಈ ಪಂದ್ಯದಲ್ಲಿಯೂ ಉಭಯ ಆಟಗಾರರ ಮೇಲೆ ತಂಡ ಹೆಚ್ಚಿನ ನಂಬಿಕೆ ಇರಿಸಿದೆ.
ವಿಂಡೀಸ್ಗೆ ಬೌಲಿಂಗ್ ಚಿಂತೆ
ವೆಸ್ಟ್ ಇಂಡೀಸ್ ಪರ ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮೇರ್, ಶಾಯ್ ಹೋಪ್ ಒಳಗೊಂಡ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಆದರೆ ಬೌಲಿಂಗ್ನದ್ದೇ ದೊಡ್ಡ ಚಿಂತೆಯಾಗಿದೆ. ಬೃಹತ್ ಮೊತ್ತ ಪೇರಿಸಿದರೂ ಇದನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಳೆದ ಪಂದ್ಯದ ಫಲತಾಂಸವೇ ಉತ್ತಮ ನಿದರ್ಶನ. ಚೇಸಿಂಗ್ಗೆ ಹೇಳಿ ಮಾಡಿಸದ ಪಿಚ್ನಲ್ಲಿಯೂ ದುಬಾರಿಯಾಗಿ ಪರಿಣಮಿಸಿ ಸೋಲು ಕಂಡಿದ್ದರು. 6 ಮಂದಿ ಬೌಲರ್ಗಳಲ್ಲಿ 5 ಮಂದಿ 30ಕ್ಕಿಂತ ಅಧಿಕ ರನ್ ಬಿಟ್ಟು ಕೊಟ್ಟು ಅತ್ಯಂತ ಕಳೆ ಮಟ್ಟದ ಬೌಲಿಂಗ್ ನಡೆಸಿದ್ದರು.