Site icon Vistara News

IND vs WI: ಬಲಿಷ್ಠ ಭಾರತ ತಂಡಕ್ಕೆ ಸಡ್ಡು ಹೊಡೆದಿತೇ ದುರ್ಬಲ ವಿಂಡೀಸ್​!

west indies test team

ರೊಸೇಯೂ (ಡೊಮಿನಿಕಾ): ಏಕದಿನ ವಿಶ್ವ ಕಪ್​ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿ ಹತಾಶರಾಗಿರುವ ವೆಸ್ಟ್​ ಇಂಡೀಸ್​(IND vs WI) ತಂಡ ಪ್ರವಾಸಿ ಭಾರತ ವಿರುದ್ಧ ಟೆಸ್ಟ್​ ಸರಣಿ ಆಡಲು ಸಜ್ಜಾಗಿದೆ. ಇತ್ತಂಡಗಳ ಮೊದಲ ಮುಖಾಮುಖಿ ಬುಧವಾರ ವಿಂಡ್ಸರ್ ಪಾರ್ಕ್‌ನಲ್ಲಿ ಆರಂಭಗೊಳ್ಳಲಿದೆ.

ಅದೊಂದು ಕಾಲವಿತ್ತು… ವೆಸ್ಟ್​ ಇಂಡೀಸ್(West Indies Cricket)​ ವಿರುದ್ಧ ಆಡುವುದೆಂದರೆ ಎಂತಹ ಆಟಗಾರರ ಎದೆಯೂ ಒಮ್ಮೆ ನಡುಗಲಾರಂಭಿಸುತಿತ್ತು. ಸೋಲಿನ ಭಯ ಮಾತ್ರವಲ್ಲ, ದೇಹದ ಯಾವ ಭಾಗಕ್ಕೆ ಎಷ್ಟು ಹಾನಿ ಆಗಲಿದೆ ಎಂಬ ಆತಂಕ ಕಾಡುತಿತ್ತು. ಈ ಬಾರಿ ಏನು ಕಾದಿದೆಯೊ ಎನ್ನುವಷ್ಟು ಹೆದರಿಕೆ. ವೆಸ್ಟ್‌ ಇಂಡೀಸ್‌ ತಂಡದ ಹೆಸರು ಕೇಳಿದರೆ ಆಟಗಾರರ ಕುಟುಂಬದವರೂ ಆತಂಕಕ್ಕೆ ಒಳಗಾಗುತ್ತಿದ್ದ ಕಾಲವದು. ಅಂತಹ ತಂಡದ ವಿರುದ್ಧ ಇಂದು ಯಾರು ಬೇಕಾದರೂ ಗೆಲ್ಲಬಹುದು ಎಂಬ ಸ್ಥಿತಿ ಬಂದೊದಗಿದೆ. ಇಂಥ ತಂಡ ಈ ಬಾರಿಯ ವಿಶ್ವಕಪ್​ಗೂ ಅರ್ಹತೆ ಪಡೆಯುವಲ್ಲಿ ವಿಫ‌ಲವಾಗಿದೆ. ಸ್ಕಾಟ್ಲೆಂಡ್‌ನಂಥ ಪುಟ್ಟ ತಂಡದೆದುರು ಅರ್ಹತಾ ಸುತ್ತಿನಲ್ಲಿ ಸೋತು ನಿರಾಶೆ ಅನುಭವಿಸಿತ್ತು. ಅಧಃಪತನ ಹಂತಕ್ಕೆ ಬಂದಿರುವ ವಿಂಡೀಸ್​ ತಂಡದ ಪುನರುತ್ಥಾನ ಇದೀಗ ಭಾರತ ವಿರುದ್ಧದ ಸರಣಿಯಿಂದಲೇ ಆರಂಭಗೊಳ್ಳಲಿದೆಯಾ ಎನ್ನುವುದು ಈ ಸರಣಿಯ ಕೌತುಕ.

ಐಪಿಎಲ್​ ಸೇರಿ ವಿಶ್ವದ ಅನೇಕ ಕ್ರಿಕೆಟ್​ ಲೀಗ್​ಗಳು​ ಯಾವತ್ತೂ ಉಗಮವಾಯಿತೋ ಅಂದಿನಿಂದ ವೆಸ್ಟ್​ ಇಂಡೀಸ್​ ತಂಡದ ಅಧಃಪತನವೂ ಆರಂಭವಾಯಿತು ಎಂದರೂ ತಪ್ಪಗಲಾರದು. ಆದರೆ ಇದೀಗ ಮತ್ತೆ ಹಳೆಯ ವಿಂಡೀಸ್​ ತಂಡವನ್ನು ಕಟ್ಟಲು ಮಾಜಿ ಆಟಗಾರ ಬ್ರಿಯೆನ್​ ಲಾರಾ ಸೇರಿದಂತೆ ಅನೇಕ ಮಾಜಿ ದಿಗ್ಗಜರು ಪಣತೊಟ್ಟಿದ್ದಾರೆ. ಇದರ ಪ್ರತಿಫಲ ಭಾರತ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳಲಿದೆಯಾ ಎಂದು ಕಾದು ನೋಡಬೇಕಿದೆ.

ಶಿವನಾರಾಯಣ್​ ಚಂದ್ರಪಾಲ್​ ಅವರ ಪುತ್ರ ತೇಜನಾರಾಯಣ ಚಂದ್ರಪಾಲ್​, ಕ್ರೆಗ್​ ಬ್ರಾತ್​ವೇಟ್​ ಸೇರಿ ಅನೇಕ ಯುವ ಆಟಗಾರರನ್ನು ಹೊಂದಿರುವ ವಿಂಡೀಸ್​ ತಂಡ ಭಾರತಕ್ಕೆ ಸಡ್ಡು ಹೊಡೆದು ನಿಂತರೆ ವಿಂಡೀಸ್​ ತಂಡ ತನ್ನ ಹಳೆಯ ಫಾರ್ಮ್​ಗೆ ಮರಳಲು ಇಟ್ಟ ಮೊದಲ ಹೆಜ್ಜೆ ಇದು ಎನ್ನಬಹುದು. ಐಸಿಸಿ ಟ್ರೋಫಿ ಗೆಲ್ಲದಿದ್ದರೂ ಭಾರತ ತಂಡ ವಿಶ್ವದ ಬಲಿಷ್ಠ ತಂಡವಾಗಿದೆ. ಹೀಗಾಗಿ ಭಾರತದ ಸವಾಲು ಮೆಟ್ಟಿ ನಿಲ್ಲುವುದು ಕೂಡ ಅಷ್ಟೂ ಸುಲಭದಲ್ಲ. ವಿಂಡೀಸ್​ ವಿರುದ್ಧ ಕಳೆದ 21 ವರ್ಷಗಳ ಅವಧಿಯಲ್ಲಿ ಆಡಿದ 8 ಟೆಸ್ಟ್​ ಸರಣಿಯಲ್ಲಿ ಭಾರತ ಅಜೇಯ ದಾಖಲೆ ಕಾಯ್ದುಕೊಂಡಿದೆ.

ಇದನ್ನೂ ಓದಿ IND vs WI: ನೂತನ ಟೆಸ್ಟ್​ ಜೆರ್ಸಿಯಲ್ಲಿ ಕಂಗೊಳಿಸಿದ ಭಾರತೀಯ ಆಟಗಾರರು; ಹಣಕ್ಕೋಸ್ಕರ ದೇಶದ ಹೆಸರೇ ಮಾಯಾ!

ಚೊಚ್ಚಲ ಅವಕಾಶ ನಿರೀಕ್ಷೆಯಲ್ಲಿ ಇಶಾನ್​,ಜೈಸ್ವಾಲ್​

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಸೋಲಿನ ಬಳಿಕ ಬಿಸಿಸಿಐ ತಂಡದಲ್ಲಿ ಕೆಲ ಬದಲಾವಣೆಗೆ ಒತ್ತು ನೀಡಿದೆ. ಇದೇ ಕಾರಣಕ್ಕೆ ಅನೇಕ ಹಿರಿ ಆಟಗಾರರನ್ನು ಈ ಸರಣಿಯಿಂದ ಕೈ ಬಿಟ್ಟು ಯುವ ಆಟಗಾರರಿಗೆ ಮಣೆ ಹಾಕಿದೆ. ಐಪಿಎಲ್​ನಲ್ಲಿ ಮಿಂಚಿದ್ದ ಯಶಸ್ವಿ ಜೈಸ್ವಾಲ್​, ಇಶಾನ್​ ಕಿಶನ್​ ಮತ್ತು ಮುಖೇಶ್​ ಕುಮಾರ್​ ಅವರು ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಅಧಿಕವಾಗಿದೆ. ಒಂದೊಮ್ಮೆ ಈ ಮೂವರು ಆಟಗಾರರು ಆಡುವ ಬಳಗದಲ್ಲಿ ಕಾಣಿಸಿಕೊಂಡರೆ ಇದು ಅವರಿಗೆ ಪದಾರ್ಪಣ ಟೆಸ್ಟ್​ ಪಂದ್ಯವಾಗಲಿದೆ. ಜೈಸ್ವಾಲ್​ ಅವರು ಈಗಾಗಲೇ ಅಭ್ಯಾಸದಲ್ಲಿ ರೋಹಿತ್​ ಜತೆ ಬ್ಯಾಟಿಂಗ್​ ನಡೆಸಿ ಗಮನಸೆಳೆದಿದ್ದಾರೆ. ಎಡಗೈ ಆಟಗಾರನಾಗಿರುವ ಕಾರಣದಿಂದ ಅವರು ರೋಹಿತ್​ ಜತೆ ಇನಿಂಗ್ಸ್​ ಆರಂಭಿಸುವುದು ಬಹುತೇಕ ಖಚಿತ. ಆದರೆ ಋತುರಾಜ್​ ಗಾಯಕ್ವಾಡ್​ ಅವರು ಅವಕಾಶಕ್ಕಾಗಿ ಇನ್ನು ಕೆಲ ಪಂದ್ಯಗಳಲ್ಲಿ ಕಾಯಬೇಕಾದಿತು.​

Exit mobile version