ರೊಸೇಯೂ (ಡೊಮಿನಿಕಾ): ಭಾರತದ ಬಿಗು ಬೌಲಿಂಗ್ ದಾಳಿಗೆ ರನ್ ಗಳಿಸಲು ಪರದಾಡಿದ ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದೆ. ಸದ್ಯ 48 ಓವರ್ಗೆ 5 ವಿಕೆಟ್ ಕಳೆದುಕೊಂಡು 117 ರನ್ ಗಳಿಸಿ ಆಟ ಮುಂದುವರಿಸಿದೆ. (ಇದು 49 ಓವರ್ ತನಕದ ಆಟದ ವರದಿಯಾಗಿದೆ).
ವಿಂಡ್ಸರ್ ಪಾರ್ಕ್‌ನಲ್ಲಿ(Windsor Park Dominica) ಬುಧವಾರ ಆರಂಭಗೊಂಡ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿಂಡೀಸ್ ಆರಂಭದಲ್ಲಿ ತಾಳ್ಮೆಯುವ ಬ್ಯಾಟಿಂಗ್ ನಡೆಸಿ ಉತ್ತಮ ಮೊತ್ತ ಕಲೆ ಹಾಕುವ ಸೂಚನೆ ನೀಡಿದರು. ಆದರೆ ತಂಡದ ಮೊತ್ತ 30 ದಾಡಿದ್ದೇ ತಡ ವಿಂಡೀಸ್ ಪತನವು ಆರಂಭಗೊಂಡಿತು. ಆರ್. ಅಶ್ವಿನ್ ಅವರು ಶಿವನಾರಾಯಣ್ ಚಂದ್ರಪಾಲ್ ಅವರ ಪುತ್ರ ತೇಜನಾರಾಯಣ ಚಂದ್ರಪಾಲ್ ವಿಕೆಟ್ ಕಿತ್ತು ಭಾರತಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಇದೇ ವೇಳೆ ಅವರು ಕ್ರಿಕೆಟ್ ಇತಿಹಾಸದಲ್ಲಿ ತಂದೆ ಹಾಗೂ ಮಗನನ್ನು ಔಟ್ ಮಾಡಿದ ಭಾರತದ ಮೊದಲ ಬೌಲರ್ ಎಂಬ ವಿಶೇಷ ದಾಖಲೆಯೊಂದನ್ನು ಬರೆದರು. 2011 ರಲ್ಲಿ ಶಿವನಾರಾಯಣ್ ಚಂದ್ರಪಾಲ್ ಅವರನ್ನು ಅಶ್ವಿನ್ ಎಲ್ಬಿಡಬ್ಲ್ಯೂ ಮಾಡಿ ಔಟ್ ಮಾಡಿದ್ದರು.
ಭಾರತ ಪರ ಇಶಾನ್ ಕಿಶನ್(Ishan Kishan) ಮತ್ತು ಯಶಸ್ವಿ ಜೈಸ್ವಾಲ್(Yashasvi Jaiswal) ಅವರು ಚೊಚ್ಚಲ ಕ್ಯಾಪ್ ಧರಿಸಿದರು. ಇಶಾನ್ ಕಿಶನ್ ಅವರು ಈಗಾಗಲೇ ಏಕದಿನ ಮತ್ತು ಟಿ 20 ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಜತೆಗೆ ಅನೇಕ ಟೆಸ್ಟ್ ಸರಣಿಗೆ ಆಯ್ಕೆಯೂ ಆಗಿದ್ದರೂ, ಆದರೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಶ್ರೀಕರ್ ಭರತ್ ಅವರಿಗೆ ಹೆಚ್ಚಿನ ಅವಕಾಶ ನೀಡಲಾಗಿತ್ತು. ಆದರೆ ಭರತ್ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಇದೇ ಕಾರಣದಿಂದ ಇಶಾನ್ ಕಿಶನ್ಗೆ ಈ ಸರಣಿಯಲ್ಲಿ ಆಡುವ ಅವಕಾಶ ನೀಡಲಾಗಿದೆ. ಇಶಾನ್ ಕಿಶನ್ಗೆ ವಿರಾಟ್ ಕೊಹ್ಲಿ ಕ್ಯಾಪ್ ನೀಡಿ ತಂಡಕ್ಕೆ ಬರಮಾಡಿಕೊಂಡರು. ಜೈಸ್ವಾಲ್ಗೆ ನಾಯಕ ರೋಹಿತ್ ಶರ್ಮ ಕ್ಯಾಪ್ ನೀಡಿದರು.
ಇದನ್ನೂ ಓದಿ IND vs WI 1st Test: ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ ಜೈಸ್ವಾಲ್,ಇಶಾನ್ ಕಿಶನ್
ಸದ್ಯ ವಿಂಡೀಸ್ ಪರ ಅಲಿಕ್ ಅಥಾನಾಜೆ(41*) ಮತ್ತು ಜಾಸನ್ ಹೋಲ್ಡರ್(18*) ರನ್ ಗಳಿಸಿ ಆಡುತ್ತಿದ್ದಾರೆ. ಇದು 49 ಓವರ್ ತನಕದ ಆಟದ ವರದಿಯಾಗಿದೆ.