ಬೆಂಗಳೂರು: ಜುಲೈ 12 ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ (ind vs wi ) ಪ್ರವಾಸಕ್ಕಾಗಿ ಟೀಂ ಇಂಡಿಯಾ ( (Team India) ಶುಕ್ರವಾರ ವೆಸ್ಟ್ ಇಂಡೀಸ್ ತಲುಪಿದೆ. ಕುತೂಹಲಕಾರಿ ಸಂಗತಿಯೆಂದರೆ ಒಂದೇ ವಿಮಾನದಲ್ಲಿ ಎಲ್ಲರಿಗೂ ಟಿಕೆಟ್ ಸಿಗದ ಕಾರಣ ನಾನಾ ವಿಮಾನಗಳ ಮೂಲಕ ಆಟಗಾರರಿಗೆ ಟಿಕೆಟ್ ವ್ಯವಸ್ಥೆ ಮಾಡಿಕೊಟ್ಟಿತು. ಹೀಗಾಗಿ ಮೊದಲ ಬ್ಯಾಚ್ನಲ್ಲಿ ಹೊರಟಿದ್ದ ಆಟಗಾರರು ಅಮೆರಿಕ, ಲಂಡನ್ ಮತ್ತು ನೆದರ್ಲ್ಯಾಂಡ್ಸ್ ಮೂಲಕ ಕೆರಿಬಿಯನ್ ತಲುಪಲಿದ್ದಾರೆ. ಆದರೆ, ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಹಾಲಿ ನಾಯಕ ರೋಹಿತ್ ಶರ್ಮಾ (Rohit Shrama ) ಪ್ಯಾರಿಸ್ ಮೂಲಕ ಕೆರಿಬಿಯನ್ ದ್ವೀಪಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಈ ಇಬ್ಬರು ಹಿರಿಯ ಆಟಗಾರರು ಯಾವಾಗ ವೆಸ್ಟ್ ಇಂಡೀಸ್ ತಲುಪಲಿದ್ದಾರೆ ಎಂಬುದು ಇನ್ನೂ ಖಾತರಿಯಾಗಿಲ್ಲ. ಹಿತ್ ಮತ್ತು ಕೊಹ್ಲಿ ಪ್ರಸ್ತುತ ತಮ್ಮ ರಜಾದಿನಗಳನ್ನು ತಮ್ಮ ಕುಟುಂಬಗಳೊಂದಿಗೆ ಕಳೆಯುತ್ತಿದ್ದಾರೆ. ಹೀಗಾಗಿ ಅವರಿಬ್ಬರೂ ಲಂಡನ್ನಿಂದ ಹೊರಟು ಪ್ಯಾರಿಸ್ ಮೂಲಕ ವೆಸ್ಟ್ ಇಂಡೀಸ್ಗೆ ಹೋಗಲಿದ್ದಾರೆ. ಇಂಡಿಯನ್ ಎಕ್ಸ್ಪ್ರಸ್ ವರದಿ ಪ್ರಕಾರ, ಇವರಿಬ್ಬರು ಮುಂದಿನ ವಾರ ಕೆರಿಬಿಯನ್ ದ್ವೀಪಕ್ಕೆ ಆಗಮಿಸಲಿದ್ದಾರೆ.
ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಮುಂಚಿತವಾಗಿ ಭಾರತ ತಂಡ ಒಂದು ಅಭ್ಯಾಸ ಪಂದ್ಯವನ್ನು ಸಹ ಆಡಲಿದೆ. 2023-25ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಟೂರ್ನಿಯನ್ನು ವಿಂಡೀಸ್ ವಿರುದ್ಧ ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ ಆರಂಭಿಸಲಿದೆ. ಭಾರತ ಕೊನೆಯ ಬಾರಿಗೆ ಆಸ್ಟ್ರೇಲಿಯಾ ವಿರುದ್ಧದ ಡಬ್ಲ್ಯುಟಿಸಿ ಫೈನಲ್ನಲ್ಲಿ ಟೆಸ್ಟ್ ಪಂದ್ಯ ಆಡಿತ್ತು. ವೆಸ್ಟ್ ಇಂಡೀಸ್ ಕೊನೆಯ ಬಾರಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಿತ್ತು . ಭಾರತ ಮತ್ತು ವೆಸ್ಟ್ ಇಂಡೀಸ್ 98 ಬಾರಿ ಮುಖಾಮುಖಿಯಾಗಿದ್ದು, ಭಾರತ 22 ಬಾರಿ ಗೆದ್ದಿದ್ದರೆ, ವಿಂಡೀಸ್ 30 ಬಾರಿ ಗೆದ್ದಿದೆ.
ಇದನ್ನೂ ಓದಿ : Sourav Ganguly: 18 ತಿಂಗಳು ತಂಡದಿಂದ ದೂರ ಉಳಿದ ಆಟಗಾರನಿಗೆ ಉಪನಾಯಕನ ಸ್ಥಾನ ನೀಡಿದ್ದು ಸರಿಯಲ್ಲ; ಗಂಗೂಲಿ
ಉಭಯ ತಂಡಗಳು ಕೊನೆಯ ಬಾರಿಗೆ 2019ರಲ್ಲಿ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಿದ್ದವು. ಆ ಸರಣಿಯಲ್ಲಿ ಭಾರತವು ವಿಂಡೀಸ್ ಅನ್ನು 2-0 ಅಂತರದಿಂದ ವೈಟ್ವಾಷ್ ಮಾಡಿತ್ತು. ಈ ಬಾರಿಯೂ ರೋಹಿತ್ ಶರ್ಮಾ ಮೇಲುಗೈ ಸಾಧಿಸುವ ಅವಕಾಶಗಳನ್ನು ಹೊಂದಿದೆ. ಆದಾಗ್ಯೂ, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಇಲ್ಲದೆ ಭಾರತದ ಬೌಲಿಂಗ್ ದಾಳಿ ಸ್ವಲ್ಪ ಕುಗ್ಗಿದೆ. ವೇಗದ ದಾಳಿಯನ್ನು ಮುನ್ನಡೆಸುವ ಜವಾಬ್ದಾರಿ ಸಿರಾಜ್ ಅವರ ಮೇಲಿದ್ದು, ಶಾರ್ದೂಲ್ ಠಾಕೂರ್, ಉನಾದ್ಕಟ್, ನವದೀಪ್ ಸೈನಿ ಮತ್ತು ಮುಖೇಶ್ ಕುಮಾರ್ ಬೆಂಬಲಕ್ಕೆ ನಿಲ್ಲಲಿದ್ದಾರೆ.
ಟೆಸ್ಟ್ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ. ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನಾದ್ಕಟ್, ನವದೀಪ್ ಸೈನಿ.
ಅಭ್ಯಾಸ ಪಂದ್ಯಕ್ಕೆ ವಿಂಡೀಸ್ ಅನುಭವಿಗಳ ಅನುಪಸ್ಥಿತಿ
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಇನ್ನು ಎರಡು ವಾರಗಳು ಮಾತ್ರ ಬಾಕಿಯಿದೆ ಹೀಗಾಗಿ.ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಸರಣಿಗೆ ತನ್ನ ತಯಾರಿ ಶಿಬಿರವನ್ನು ಪ್ರಕಟಿಸಿದೆ. ಕ್ರೇಗ್ ಬ್ರಾಥ್ವೇಟ್ ತಂಡವನ್ನು ಮುನ್ನಡೆಸಲಿದ್ದಾರೆ, ಆದರೆ, ಈ ತಂಡದಲ್ಲಿ ವಿಂಡೀಸ್ ತಂಡದ ಪ್ರಮುಖ ಆಟಗಾರರಾದ ಜೇಸನ್ ಹೋಲ್ಡರ್ ಹಾಗೂ ನಿಕೋಲಸ್ ಪೂರನ್ ಇಲ್ಲ. ಈ ಮೂಲಕ ಅವರು ಟೆಸ್ಟ್ ತಂಡದಲ್ಲಿ ಇರುವರೇ ಎಂಬ ಅನುಮಾನ ಮೂಡಿದೆ. ಆಧರೆ, ಮೂಲಗಳ ಪ್ರಕಾರ ವಿಶ್ವಕಪ್ ಅರ್ಹತಾ ಪಂದ್ಯಗಳಿಂದಾಗಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಡೊಮಿನಿಕಾದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಮೂರು ದಿನಗಳ ಮೊದಲು ಜುಲೈ 9 ರವರೆಗೆ ಇವರಿಬ್ಬರು ಜಿಂಬಾಬ್ವೆಯಲ್ಲಿ ಇರುತ್ತಾರೆ. ಹೀಗಾಗಿ ಅವರು ಅಭ್ಯಾಸ ಪಂದ್ಯಕ್ಕೆ ಲಭ್ಯರಿಲ್ಲ ಎಂದು ಹೇಳಲಾಗುತ್ತಿದೆ.