Site icon Vistara News

IND vs ZIM ODI | ಮತ್ತೊಂದು ಸುಲಭ ಗೆಲುವು ಭಾರತದ ಗುರಿ

IND vs ZIM ODI

ಹರಾರೆ : ಪ್ರವಾಸಿ ಭಾರತ ಹಾಗೂ ಆತಿಥೇಯ ಜಿಂಬಾಬ್ವೆ ನಡುವಿನ ಏಕ ದಿನ ಸರಣಿಯ (IND vs ZIM ODI) ಎರಡನೇ ಪಂದ್ಯ ಇಲ್ಲಿನ ಸ್ಪೋರ್ಟ್ಸ್‌ ಕ್ಲಬ್‌ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ ಶನಿವಾರ ನಡೆಯಲಿದೆ. ಮೊದಲ ಪಂದ್ಯದಂತೆ ಈ ಪಂದ್ಯವನ್ನೂ ಭಾರೀ ಅಂತರದಿಂದ ಗೆದ್ದು ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಳ್ಳುವುದು ಭಾರತದ ಗುರಿಯಾಗಿದೆ.

ಹರಾರೆ ಸ್ಟೇಡಿಯಮ್‌ ಬ್ಯಾಟಿಂಗ್‌ಗೆ ಪೂರಕವಾಗಿ ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆ ಮತ್ತೆ ಅಬ್ಬರಿಸುವ ಸೂಚನೆ ನೀಡಿದೆ. ಅದೇ ರೀತಿ ಮೊದಲ ಪಂದ್ಯದಂತೆಯೇ ಈ ಪಂದ್ಯದಲ್ಲೂ ಉತ್ತಮ ಬೌಲಿಂಗ್‌ ಪ್ರದರ್ಶನ ತೋರಿ ಸುಲಭ ಗೆಲುವು ತನ್ನದಾಗಿಸಿಕೊಳ್ಳಲು ಕೆ. ಎಲ್‌ ರಾಹುಲ್‌ ಪಡೆ ಯೋಜನೆ ರೂಪಿಸಿಕೊಂಡಿದೆ.

ಅರಂಭಿಕ ಪಂದ್ಯದಲ್ಲಿ ಕೈಗೆ ಚೆಂಡು ಬಡಿದ ಕಾರಣ ಸ್ವಲ್ಪ ನೋವಿಗೆ ಒಳಗಾಗಿರುವ ಶಿಖರ್‌ ಎರಡನೇ ಪಂದ್ಯದಲ್ಲಿ ಲಭ್ಯರಿದ್ದಾರೋ ಎಂಬ ಅನುಮಾನ ವ್ಯಕ್ತವಾಗಿದೆ. ಒಂದು ವೇಳೆ ಅವರು ಅಲಭ್ಯರಾದರೆ ಕೆ.ಎಲ್‌ ರಾಹುಲ್‌ ಆರಂಭಿಕರಾಗಿ ಬಡ್ತಿ ಪಡೆಯಲಿದ್ದು, ರಾಹುಲ್‌ ತ್ರಿಪಾಠಿ ಆಡುವ ೧೧ರ ಬಳಗ್ಗೆ ಸೇರಿಕೊಳ್ಳುವ ಸಾಧ್ಯತೆಗಳಿವೆ.

ಭಾರತದ ಬೌಲಿಂಗ್‌ ವಿಭಾಗದಲ್ಲಿ ಯಾವುದೇ ಬದಲಾವಣೆಗಳ ಸಾಧ್ಯತೆ ಕಡಿಮೆ. ಹಿಂದಿನ ಪಂದ್ಯದಲ್ಲಿ ಬೌಲರ್‌ಗಳೆಲ್ಲರೂ ಉತ್ತಮ ಪ್ರದರ್ಶನ ತೋರಿರುವ ಕಾರಣ ಬದಲಾವಣೆ ಅನಿವಾರ್ಯವಲ್ಲ. ಆದರೆ, ಸಿರಾರ್‌ ಬದಲಿಗೆ ಆವೇಶ್‌ ಖಾನ್‌ಗೆ ಅವಕಾಶ ಕೊಟ್ಟು ನೋಡಲು ಕೋಚ್‌ ಲಕ್ಷ್ಮಣ್‌ ಮುಂದಾಗಬಹುದು.

ಹರಾರೆ ಪಿಚ್‌ ಆರಂಭದಲ್ಲಿ ಬೌಲಿಂಗ್‌ಗೆ ನೆರವಾಗುತ್ತದೆ. ಬೌನ್ಸರ್‌ಗಳು ಹೆಚ್ಚು ಬೀಳುವ ಕಾರಣ ವಿಕೆಟ್‌ಗಳು ಉರುಳುವು ಸಾಧ್ಯತೆಗಳಿವೆ. ಹೀಗಾಗಿ ಹಿಂದಿನ ಪಂದ್ಯದಂತೆ ಟಾಸ್‌ ಗೆದ್ದ ತಂಡ ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳಬಹುದು.

ಭಾರತದ ಸರಣಿ ಆರಂಭಕ್ಕೆ ಮೊದಲು ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನು ೨-೧ ಅಂತರದಿಂದ ಗೆದ್ದಿದ್ದ ಜಿಂಬಾಬ್ವೆ ತಂಡಕ್ಕೆ ಮೊದಲ ಪಂದ್ಯದ ಸೋಲಿನಿಂದ ಸ್ವಲ್ಪ ಹಿನ್ನಡೆಯಾಗಿದೆ. ಆದರೆ, ಯುವ ಆಟಗಾರರು ತಿರುಗೇಟು ನೀಡಲು ಎಲ್ಲ ಪ್ರಯತ್ನಗಳನ್ನು ಮಾಡಬಹುದು.

ಸಂಭಾವ್ಯ ಭಾರತ ತಂಡ

ಶಿಖರ್‌ ಧವನ್‌, ಶುಬ್ಮನ್‌ ಗಿಲ್, ಕೆಎಲ್ ರಾಹುಲ್,  ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ಅಕ್ಷರ್ ಪಟೇಲ್, ದೀಪಕ್ ಚಾಹರ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.

ಪಂದ್ಯದ ವಿವರ

ಆರಂಭ : ಮಧ್ಯಾಹ್ನ ೧೨.೪೫ಕ್ಕೆ

ತಾಣ: ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಸ್ಟೇಡಿಯಮ್‌ ಹರಾರೆ

ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್‌ ನೆಟ್ವರ್ಕ್‌ ಹಾಗೂ ಸೋನಿ ಲೈವ್‌ ಆಪ್

Exit mobile version