ಮೆಲ್ಬೋರ್ನ್: ಬಾಂಗ್ಲಾದೇಶ ವಿರುದ್ಧದ ಕಳೆದ ಪಂದ್ಯದಲ್ಲಿ ಅಂತಿಮ ಎಸೆತದಲ್ಲಿ 5 ರನ್ ರೋಚಕ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ ಭಾನುವಾರ ಜಿಂಬಾಬ್ವೆ (IND VS ZIM) ವಿರುದ್ಧ ಸೆಣಸಲು ಸಜ್ಜಾಗಿದೆ. ಈ ಪಂದ್ಯದಲ್ಲಿ ಗೆದ್ದು ಟಿ20 ವಿಶ್ವ ಕಪ್ ಟೂರ್ನಿಯ ಸೆಮಿಫೈನಲ್‌ಗೆ ಅಧಿಕೃತವಾಗಿ ಅರ್ಹತೆ ಪಡೆಯಲು ರೋಹಿತ್ ಶರ್ಮಾ ಪಡೆ ಎದುರು ನೋಡುತ್ತಿದೆ. ಆದರೆ ಜಿಂಬಾಬ್ವೆ ಸವಾಲನ್ನು ಕಡೆಗಣಿಸುವಂತಿಲ್ಲ.
ಭಾರತ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದ್ದು, ಮೂರು ಪಂದ್ಯದಲ್ಲಿ ಗೆಲುವು ದಾಖಲಿಸಿ ಆರು ಅಂಕದೊಂದಿಗೆ ಸದ್ಯ ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಆದರೂ ಭಾರತದ ಸೆಮಿಫೈನಲ್ ಟಿಕೆಟ್ ಇನ್ನೂ ಖಾತ್ರಿಯಾಗಿಲ್ಲ. ಆದ್ದರಿಂದ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಸೋಲಿಸಲೇಬೇಕು. ಕೂಟದಲ್ಲಿ ಭಾರತ ತಂಡದ ಪ್ರದರ್ಶನವನ್ನು ಗಮನಿಸಿದರೆ ಈ ಪಂದ್ಯವನ್ನು ಸುಲಭವಾಗಿ ಗೆಲ್ಲುವುದು ಖಚಿತ. ಆದರೆ ಯಾವ ಸಮಯದಲ್ಲಾದರೂ ತಿರುಗಿಬೀಳುವ ಸಾಮರ್ಥ್ಯ ಹೊಂದಿರುವ ಜಿಂಬಾಬ್ವೆ ತಂಡದ ಸವಾಲನ್ನು ಭಾರತ ತಂಡ ಕಡೆಗಣಿಸುವಂತಿಲ್ಲ. ಬಲಿಷ್ಠ ತಂಡವಾದ ಪಾಕಿಸ್ತಾನಕ್ಕೆ ಸೋಲುಣಿಸಿದ್ದು ಇದಕ್ಕೆ ಉತ್ತಮ ನಿದರ್ಶನ.
ಮಿಂಚಬೇಕಿದೆ ರೋಹಿತ್
ಈ ಟೂರ್ನಿಯಲ್ಲಿ ನಾಯಕ ರೋಹಿತ್ ಶರ್ಮಾ ಅವರಿಂದ ಇನ್ನೂ ಯಾವುದೇ ಬಿಗ್ ಇನಿಂಗ್ಸ್ ಕಂಡುಬಂದಿಲ್ಲ. ಟೂರ್ನಿಯಲ್ಲಿ ಇದುವರೆಗೆ ನಾಲ್ಕು ಪಂದ್ಯಗಳಲ್ಲಿ ರೋಹಿತ್ ಕೇವಲ 74 ರನ್ ಗಳಿಸಿದ್ದಾರೆ. ಹೀಗಾಗಿ ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಬ್ಯಾಟಿಂಗ್ ಲಯ ಕಂಡುಕೊಳ್ಳಲೇಬೇಕಿದೆ. ಉಳಿದಂತೆ ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಂದಲೂ ನಿರೀಕ್ಷಿತ ಪ್ರದರ್ಶನ ಕಂಡುಬಂದಿಲ್ಲ ಈ ನಿಟಿನಲ್ಲಿ ಅವರೂ ಕೂಡ ಮಿಂಚಬೇಕಿದೆ. ಆದರೆ ರಾಹುಲ್, ವಿರಾಟ್ ಮತ್ತು ಸೂರ್ಯಕುಮಾರ್ ಯಾದವ್ ಉತ್ತಮ ಪ್ರದರ್ಶನ ತೋರುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಬೌಲಿಂಗ್‌ನಲ್ಲಿ ಭಾರತ ತಂಡ ಬಲಿಷ್ಠವಾಗಿ ಗೋಚರಿಸಿದೆ. ಮೊಹಮ್ಮದ್ ಶಮಿ, ಅರ್ಶ್‌ದೀಪ್ ಸಿಂಗ್, ಭುವನೇಶ್ವರ್ ಕುಮಾರ್ ಪ್ರತೀ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಆದರೆ ಸ್ಪಿನ್ ವಿಭಾಗ ಕೊಂಚ ಮಟ್ಟಿನ ಸುಧಾರಣೆ ಕಾಣಬೇಕಿದೆ.
ಡೇಂಜರಸ್ ಸಿಕಂದರ್ ರಜಾ
ಜಿಂಬಾಬ್ವೆ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಅತ್ಯುತ್ತಮ ಫಾರ್ಮ್‌ನಲ್ಲಿರುವ ಸಿಕಂದರ್ ರಜಾ, ಕ್ರೇಗ್ ಎರ್ವಿನ್, ರಿಯಾನ್ ಬರ್ಲೆ ಮತ್ತು ಸೀನ್ ವಿಲಿಯಮ್ಸ್ ಅವರಂತಹ ಬ್ಯಾಟರ್ಸ್ಗಳು ಯಾವ ಹಂತದಲ್ಲಿಯೂ ಸಿಡಿದು ನಿಂತು ಪಂದ್ಯದ ಗತಿಯನ್ನೇ ಬದಲಿಸಬಲ್ಲರು. ಆದ್ದರಿಂದ ಭಾರತ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕಿದೆ.
ಸಂಭಾವ್ಯ ತಂಡ
ಭಾರತ: ರೋಹಿತ್ ಶರ್ಮಾ(ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮದ್ ಶಮಿ, ಅರ್ಶ್‌ದೀಪ್ ಸಿಂಗ್
ಜಿಂಬಾಬ್ವೆ: ವೆಸ್ಲಿ ಮಾಧೆವೆರೆ, ಕ್ರೇಗ್ ಎರ್ವಿನ್ (ನಾಯಕ), ರೆಗಿಸ್ ಚಕಬ್ವಾ, ಸೇನ್ ವಿಲಿಯಮ್ಸ್, ಸಿಕಂದರ್ ರಾಜಾ, ಮಿಲ್ಟನ್ ಶುಂಬಾ, ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ತೆಂಡೈ ಚಟಾರಾ, ರಿಚರ್ಡ್ ನಗರವಾ, ಬ್ಲೆಸಿಂಗ್ ಮುಜರಬಾನಿ
ಸ್ಥಳ: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಮೆಲ್ಬೋರ್ನ್
ಪಂದ್ಯ ಆರಂಭ : ಮಧ್ಯಾಹ್ನ 01:30ಕ್ಕೆ (ಭಾರತೀಯ ಕಾಲಮಾನ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಇದನ್ನೂ ಓದಿ | T20 World Cup | ಸೆಮಿಫೈನಲ್ ಪ್ರವೇಶಕ್ಕೆ ಇಂದು ಬಿಗ್ ಫೈಟ್; ಯಾರಿಗೆ ಒಲಿಯಲಿದೆ ಅದೃಷ್ಟ?