ಹರಾರೆ: ಶನಿವಾರ ನಡೆದಿದ್ದ ಜಿಂಬಾಬ್ವೆ(IND vs ZIM) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿದ್ದ ಶುಭಮನ್ ಸಾರಥ್ಯದ ಯಂಗ್ ಟೀಮ್ ಇಂಡಿಯಾ ಇದೀಗ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಇಂದು ನಡೆಯುವ ದ್ವಿತೀಯ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದೆ. 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿರುವ ಜಿಂಬಾಬ್ವೆ ಈ ಪಂದ್ಯವನ್ನು ಕೂಡ ಗೆಲ್ಲವ ವಿಶ್ವಾಸದಲ್ಲಿದೆ.
ಮೊದಲ ಪಂದ್ಯಕ್ಕೆ ತಂಡದ ಬ್ಯಾಟಿಂಗ್ ವೈಫಲ್ಯವೇ ಕಾರಣ ಎಂದು ಈಗಾಗಲೇ ನಾಯಕ ಶುಭಮನ್ ಗಿಲ್ ಹೇಳಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಭಾರತೀಯ ಬ್ಯಾಟರ್ಗಳು ಉತ್ತಮವಾಗಿ ಆಡುವ ಅಗತ್ಯವಿದೆ. ಐಪಿಎಲ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದ ಅಭಿಷೇಕ್ ಶರ್ಮ ಅವರು ಮೇಲೆ ಮೊದಲ ಪಂದ್ಯದಲ್ಲಿ ಭಾರೀ ನಿರೀಕ್ಷೆ ಇರಿಸಲಾಗಿತ್ತು. ಆದರೆ ಅವರು ಖಾತೆ ತೆರೆಯುವಲ್ಲಿಯೂ ಯಶಸ್ಸು ಕಾಣಲಿಲ್ಲ. ರಿಂಕು ಸಿಂಗ್, ಋತುರಾಜ್ ಗಾಯಕ್ವಾಡ್, ಜುರೇಲ್, ಪರಾಗ್ ಸಂಪೂರ್ಣ ವೈಫಲ್ಯ ಕಂಡಿದ್ದರು. ಈ ಪಂದ್ಯದಲ್ಲಿ ಹೇಗೆ ಪ್ರದರ್ಶನ ತೋರಲಿದ್ದಾರೆ ಎಂದು ಕಾದು ನೋಡಬೇಕಿದೆ.
ಜಿಂಬಾಬ್ಬೆ ತಂಡದ ಬೌಲಿಂಗ್ ವಿಭಾಗ ಅತ್ಯಂತ ಘಾತಕವಾಗಿದೆ. ಸ್ಪಿನ್ ಮತ್ತು ವೇಗಿಗಳು ಉತ್ತಮ ಲಯದಲ್ಲಿದ್ದಾರೆ. ನಾಯಕ ಸಿಕಂದರ್ ರಾಜಾ ಸ್ಪಿನ್ ಮೊಡಿಗೆ ಭಾರತೀಯ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದ್ದನ್ನು ಈಗಾಗಲೇ ಕಂಡಿದ್ದೇವೆ. ತೆಂಡೈ ಚತಾರಾ ಕೂಡ ಅಪಾಯಕಾರಿಯಾಗಿದ್ದಾರೆ.
ಭಾರತ ಮತ್ತು ಜಿಂಬಾಬ್ವೆ ಇದುವರೆಗೆ ಒಟ್ಟು 9 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 6 ಪಂದ್ಯ ಗೆದ್ದಿದ್ದರೆ, ಜಿಂಬಾಬ್ವೆ 3 ಪಂದ್ಯ ಗೆದ್ದಿದೆ. ಇದರಲ್ಲೊಂದು ಗೆಲುವು ಈ ಸರಣಿಯದ್ದಾಗಿದೆ.
ಇದನ್ನೂ ಓದಿ ZIM vs IND : ಜಿಂಬಾಬ್ವೆ ವಿರುದ್ಧ 13 ರನ್ಗಳಿಂದ ಸೋತ ವಿಶ್ವ ವಿಜೇತ ಭಾರತ ತಂಡ
ಬೌಲಿಂಗ್ಗೆ ಹೆಚ್ಚು ಸಹಕಾರಿಯಾಗಿರುವ ಹರಾರೆ ಸ್ಪೋರ್ಟ್ಸ್ ಕ್ಲಬ್ ಪಿಚ್ನಲ್ಲಿ ಒಂದು ಕೂಡ ಲೋ ಸ್ಕೋರ್ ಆಗುವ ನಿರೀಕ್ಷೆ ಇದೆ. ಹೆಚ್ಚಾಗಿ ಸ್ಪಿನ್ ಬೌಲರ್ಗಳು ಮೇಲುಗೈ ಸಾಧಿಸುವ ಸಾಧ್ಯತೆ ಅಧಿಕ. ಹೀಗಾಗಿ ಇತ್ತಂಡಗಳು ಸ್ಪಿನ್ ಬೌಲಿಂಗ್ಗೆ ಹೆಚ್ಚಿನ ಒತ್ತು ನೀಡಬಹುದು. ಸೋಲು ಕಂಡರೂ ಕೂಡ ಭಾರತ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಬದಲಾವಣೆ ಮಾಡುವುದು ಅನುಮಾನ.
ಮೊದಲ ಪಂದ್ಯದಲ್ಲಿ ಸೋಲು
ನಿನ್ನೆ(ಶನಿವಾರ) ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ ಭರ್ಜರಿ ಬೌಲಿಂಗ್ ಮಾಡಿ ಜಿಂಬಾಬ್ವೆ ಆಟಗಾರರನ್ನು 115 ರನ್ಗೆ ಕಟ್ಟಿ ಹಾಕಿತು. ಈ ಮೊತ್ತವನ್ನು ಭಾರತ ಕೇವಲ 10 ಓವರ್ನಲ್ಲಿ ಹೊಡೆದು ಮುಗಿಸಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಚೇಸಿಂಗ್ ಆರಂಭಿಸಿದಾಗ ನಡೆದಿದ್ದೇ ಬೇರೆ. ಭಾರತೀಯ ಬ್ಯಾಟರ್ಗಳ ವಿಕೆಟ್ಗಳು ತರಗೆಲೆಯಂತೆ ಉದುರಿಹೋಯಿತು. 19,5 ಓವರ್ಗಳಲ್ಲಿ 102 ರನ್ಗೆ ಸರ್ವ ಪತನ ಕಂಡು ಸೋಲೊಪ್ಪಿಕೊಂಡಿತು.