ಹರಾರೆ: ಇದುವರೆಗೂ ಟಿ20 ವಿಶ್ವಕಪ್ ಗೆಲುವಿನ ಗುಂಗಿನಲ್ಲಿದ್ದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇನ್ನು ನಾಳೆಯಿಂದ(ಶನಿವಾರ) ಆರಂಭಗೊಳ್ಳುವ ಜಿಂಬಾಬ್ವೆ ಮತ್ತು ಭಾರತ(IND vs ZIM) ನಡುವಣ ಟಿ20(
Zimbabwe vs India) ಸರಣಿಯತ್ತ ಗಮನ ಹರಿಸಲಿದ್ದಾರೆ. ಹರಾರೆಯಲ್ಲಿ ಇತ್ತಂಡಗಳ ಮೊದಲ ಪಂದ್ಯ ನಡೆಯಲಿದೆ. ಯುವ ಪಡೆಯನ್ನೇ ನೆಚ್ಚಿಕೊಂಡಿರುವ ಶುಭಮನ್ ಗಿಲ್(shubman gill) ಸಾರಥ್ಯದ ಟೀಮ್ ಇಂಡಿಯಾ ಹೇಗೆ ಪ್ರದರ್ಶನ ತೋರಲಿದೆ ಎನ್ನುವುದು ಈ ಸೆರಣಿಯ ಕೌತುಕ.
ಈಗಾಗಲೇ ಹಿರಿಯ ಆಟಗಾರರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಟಿ20 ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಮುಂದಿನ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕೂಡ ನಡೆಯಲಿದೆ. ಇದು ಟಿ20 ಸ್ವರೂಪದಲ್ಲಿಯೇ ನಡೆಯಲಿದೆ. ಜತೆಗೆ 2026ರಲ್ಲಿ ಟಿ20 ವಿಶ್ವಕಪ್ ಕೂಡ ನಡೆಯಲಿದೆ. ಈ ಟೂರ್ನಿಗೆ ತಂಡವನ್ನು ರಚಿಸಲು ಬಿಸಿಸಿಐ ಸಿದ್ಧತೆ ಆರಂಭಿಸಿದೆ. ಇದೀಗ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಯುವ ಆಟಗಾರರು ಸರಿಯಾಗಿ ಬಳಸಿಕೊಂಡರೆ ಭಾರತ ಸೀನಿಯರ್ ತಂಡದಲ್ಲಿ ಆಡುವ ಅವಕಾಶ ಪಡೆಯಬಹುದು. ಹೀಗಾಗಿ ಎಲ್ಲ ಆಟಗಾರರು ಶ್ರೇಷ್ಠ ಪ್ರದರ್ಶನ ತೋರಬೇಕು.
ರೋಹಿತ್ ನಿವೃತ್ತಿಯಿಂದ ತೆರವಾದ ಟಿ20 ತಂಡದ ನಾಯಕತ್ವಕ್ಕೆ ಈಗಾಗಲೇ ಹಾರ್ದಿಕ್ ಹೆಸರು ಕೇಳಿ ಬಂದಿದೆ. ಜಿಂಬಾಬ್ವೆ ಸರಣಿಯಲ್ಲಿ ತಂಡ ಮುನ್ನಡೆಸುತ್ತಿರುವ ಶುಭಮನ್ ಗಿಲ್ ಈ ಸರಣಿಯಲ್ಲಿ ಯಶಸ್ವಿಯಾದರೆ ಮುಂದಿನ ದಿನದಲ್ಲಿ ನಾಯಕನಾಗುವ ಸಾಧ್ಯತೆಯೂ ಇದೆ. ಈ ಬಾರಿಯ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ವಿಸ್ಫೋಟಕ ಬ್ಯಾಟಿಂಗ್ ಮೂಲಕ ಸಿಕ್ಸರ್ಗಳ ಮಳೆಯನ್ನೇ ಸುರಿಸಿದ್ದ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮ ಬ್ಯಾಟಿಂಗ್ ಪ್ರದರ್ಶನದ ಮೇಕೆಯೂ ಬಹಳ ನಿರೀಕ್ಷೆ ಇದೆ. ಒಟ್ಟಾರೆ ಈ ಸರಣಿಯಲ್ಲಿ ಆಟಗಾರರು ತೋರುವ ಪ್ರದರ್ಶನದಲ್ಲಿ ಅವರ ಮುಂದಿನ ಕ್ರಿಕೆಟ್ ಭವಿಷ್ಯ ಅಡಗಿದೆ ಎನ್ನಲಡ್ಡಿಯಿಲ್ಲ.
ಜಿಂಬಾಬ್ವೆ ಕೂಡ ಬಲಿಷ್ಠ
ಜಿಂಬಾಬ್ವೆ ವಿರುದ್ಧ ಭಾರತ ಅಜೇಯವಲ್ಲ. 2 ಸೋಲು ಕೂಡ ಕಂಡಿದೆ. ಅನುಭವಿ ಆಲ್ರೌಂಡರ್ ಹಾಗೂ ನಾಯಕನಾಗಿರುವ ಸಿಕಂದರ್ ರಾಜಾ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಜತೆಗೆ ತಂಡದ ನೂತನ ಕೋಚ್ ಆಗಿರುವ ಜಸ್ಟಿನ್ ಸ್ಯಾಮ್ಸನ್ ಅವರ ಮಾರ್ಗದರ್ಶನ ಕೂಡ ತಂಡಕ್ಕೆ ನೆರವಾಗಬಹುದು. ಹೀಗಾಗಿ ಭಾರತ ಎಚ್ಚರಿಕೆಯಿಂದ ಆಡಬೇಕು.
ಮುಖಾಮುಖಿ
ಭಾರತ ಮತ್ತು ಜಿಂಬಾಬ್ವೆ ಇದುವರೆಗೆ ಒಟ್ಟು 8 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 6 ಪಂದ್ಯ ಗೆದ್ದಿದ್ದರೆ, ಜಿಂಬಾಬ್ವೆ 2 ಪಂದ್ಯ ಗೆದ್ದಿದೆ. ಕೊನೆಯ ಬಾರಿ ಇತ್ತಂಡಗಳು ಆಡಿದ್ದು 2022ರಲ್ಲಿ. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ. ಈ ಪಂದ್ಯವನ್ನು ಭಾರತ 71 ರನ್ ಅಂತರದಿಂದ ಗೆದ್ದು ಬೀಗಿತ್ತು.
ಭಾರತ ತಂಡ
ಶುಭಮನ್ ಗಿಲ್ (ನಾಯಕ), ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಧ್ರುವ್ ಜುರೆಲ್ (ವೀಕಿ), ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ, ಸಾಯಿ ಸುದರ್ಶನ್, ಜಿತೇಶ್ ಶರ್ಮಾ (ವೀಕಿ) , ಹರ್ಷಿತ್ ರಾಣಾ.
ವೇಳಾಪಟ್ಟಿ
1ನೇ ಟಿ20: ಜುಲೈ 6, ಹರಾರೆ, ಸಂಜೆ 4.30
2ನೇ ಟಿ20: ಜುಲೈ 7, ಹರಾರೆ, ಸಂಜೆ 4.30
3ನೇ T20: ಜುಲೈ 10, ಹರಾರೆ, ಸಂಜೆ 4.30
4ನೇ T20: ಜುಲೈ 13, ಹರಾರೆ, ಸಂಜೆ 4.30
5 ನೇ T20: ಜುಲೈ 14, ಹರಾರೆ, ಸಂಜೆ 4.30