Site icon Vistara News

Team India : ಭಾರತೀಯ ಮಹಿಳೆಯ ತಂಡಕ್ಕೆ ರೋಚಕ ಜಯ; ಹರ್ಮನ್​ಪ್ರೀತ್​ ಬಳಗಕ್ಕೆ ಟಿ20 ಸರಣಿ

indian womens Cricket team

ಢಾಕಾ: ಕೊನೇ ಹಂತದಲ್ಲಿ ಅದ್ಧೂರಿ ಬೌಲಿಂಗ್ ಪ್ರದರ್ಶನ ನೀಡಿದ ಭಾರತ ಮಹಿಳೆಯರ ತಂಡ (Team India) ಆತಿಥೇಯ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ರೋಚಕ ಜಯ ದಾಖಲಿಸಿದೆ. ಕೊನೇ ಓವರ್​ನಲ್ಲಿ ಭಾರತ ತಂಡದ ಬೌಲರ್​​ ಹಂಗಾಮಿ ಬೌಲರ್​ ಶಫಾಲಿ ವರ್ಮಾ ಕೇವಲ ಒಂದು ರನ್​ ನೀಡಿ ನಾಲ್ಕು ವಿಕೆಟ್​ಗಳನ್ನು ಉರುಳಿಸುವ ಮೂಲಕ ಭಾರತ ತಂಡಕ್ಕೆ 8 ರನ್​ಗಳನ ಜಯ ತಂದುಕೊಟ್ಟರು. ಅತ್ತ ಗೆಲುವಿನ ಅಂಚಿನಲ್ಲಿದ್ದ ಬಾಂಗ್ಲಾದೇಶ ತಂಡ ಕೊನೇ 8 ಎಸೆತಗಳಲ್ಲಿ 10 ರನ್​ ಬೇಕಾಗಿದ್ದ ಅವಧಿಯಲ್ಲಿ 5 ವಿಕೆಟ್​ಗಳನ್ನು ಕಳೆದುಕೊಳ್ಳುವ ಮೂಲಕ ಸೋಲಿನ ಸುಳಿಗೆ ಸಿಲುಕಿತು.

ಇಲ್ಲಿನ ಶೇರ್​ ಬಾಂಗ್ಲಾ ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್​ ಮಾಡಿದ ಭಾರತ ತಂಡವೂ ಬ್ಯಾಟಿಂಗ್ ವೈಫಲ್ಯ ಎದುರಿಸಿತು. 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಮಾಡಿಕೊಂಡು 95 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ನಿಗದಿತ 20 ಓವರ್​ಗಳು ಮುಕ್ತಾಯಗೊಂಡಾಗ 87 ರನ್​ ಗಳಿಸಿ ಆಲ್​ಔಟ್​ ಆಯಿತು.

ಮೊದಲ ಪಂದ್ಯದಲ್ಲಿ ಗೆದ್ದಿದ್ದ ಭಾರತ ತಂಡ ಈ ಪಂದ್ಯದಲ್ಲೂ ದೊಡ್ಡ ಮೊತ್ತ ಪೇರಿಸಿ ಗೆಲವು ದಾಖಲಿಸುವ ಉಮೇದಿನೊಂದಿಗೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸ್ಮೃತಿ ಮಂಧಾನಾ (13) ಹಾಗೂ ಶಫಾಲಿ ವರ್ಮಾ (19) ಉತ್ತಮ ಆರಂಭ ಮಾಡಿದರು. ಆದರೆ, 33 ರನ್​ಗಳಿಗೆ 1 ವಿಕೆಟ್​ ಕಳೆದುಕೊಂಡಿತು. ಆದರೆ ನಂತರದಲ್ಲಿ ಜೆಮಿಮಾ ರೋಡ್ರಿಗಸ್​ (8), ಹರ್ಮನ್​​ಪ್ರೀತ್​ ಕೌರ್​ (0) ಬೇಗನೆ ಔಟಾಗುವ ಮೂಲಕ ಹಿನ್ನಡೆ ಉಂಟಾಯಿತು. ಯಸ್ತಿಕಾ ಭಾಟಿಯಾ (11) ನಂತರದಲ್ಲಿ ಸ್ವಲ್ಪ ಹೊತ್ತು ಆಡಿದರೆ ಹರ್ಲಿನ್ ಡಿಯೋಲ್​ 6 ರನ್​ಗೆ ಸೀಮಿತಗೊಂಡರು. ಸತತವಾಗಿ ವಿಕೆಟ್​ಗಳು ಉರುಳಿದ ಕಾರಣ ಭಾರತ ತಂಡದ ರನ್ ಗಳಿಕೆ ವೇಗ ಕಡಿಮೆಯಾಯಿತು.

ಆಲ್​ರೌಂಡರ್ ದೀಪ್ತಿ ಶರ್ಮಾ (10) ಹಾಗೂ ಅಮನ್​ಜೋತ್ ಕೌರ್ (14) ಕೊನೇ ಹಂತದಲ್ಲಿ ತಮ್ಮ ಪಾಲಿನ ಕೊಡುಗೆ ಕೊಡುಗೆ ಕೊಟ್ಟರು. ಪೂಜಾ ವಸ್ತ್ರಾಕರ್​ (7) ಕ್ಷಿಪ್ರವಾಗಿ ರನ್​ ಮಾಡಿದರು.

ಕುಸಿದ ಬಾಂಗ್ಲಾ

ಸಣ್ಣ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಬಾಂಗ್ಲಾದೇಶ ತಂಡ ಆರಂಭದಲ್ಲೇ ವಿಕೆಟ್​ಗಳನ್ನು ಕಳೆದಕೊಂಡಿತು. 12 ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡರೆ 64 ರನ್​​ ಗಳಿಸುವಷ್ಟರಲ್ಲಿ ಆತಿಥೇಯ ತಂಡದ 5ನೇ ವಿಕೆಟ್​ ಉರುಳಿತು. ಇದರಲ್ಲಿ ಆರಂಭಿಕ ಬ್ಯಾಟರ್​ಗಳಾದ ಶಮಿಮಾ ಸುಲ್ತಾನಾ (5) ಹಾಗೂ ಶಾಂತಿ ರಾಣಿ (5) ಬೇಗನೆ ಔಟಾದರೆ ಮುರ್ಷಿದಾ ಕಟುನಾ (4) ಕೂಡ ಹೆಚ್ಚು ಹೊತ್ತು ಆಡಲಿಲ್ಲ. ಏತನ್ಮಧ್ಯೆ ನಾಯಕಿ ನಿಗರ್ ಸುಲ್ತಾನಾ (38) ಸ್ವಲ್ಪ ಹೊತ್ತು ಭಾರತದ ಬೌಲರ್​ಗಳನ್ನು ಕಾಡಿದರು. ಈ ವೇಳೆ ಬಾಂಗ್ಲಾದೇಶ ತಂಡಕ್ಕೆ ಗೆಲುವು ಪಡೆಯುವ ಸಾಧ್ಯತೆಗಳಿತ್ತು.

ನಂತರ ನಡೆದ ನಾಟಕೀಯ ತಿರುವಿನಲ್ಲಿ ಭಾರತ ತಂಡಕ್ಕೆ ಜಯ ಸಿಕ್ಕಿತು. ಅಂತಿಮ ಹಂತದಲ್ಲಿ ಬಾಂಗ್ಲಾ ಬ್ಯಾಟರ್​ಗಳ ಮೇಲೆ ತೀವ್ರ ಒತ್ತಡ ಹೇರಿದ ಭಾರತೀಯ ಬೌಲರ್​ಗಳು ಗೆಲುವು ತಮ್ಮದಾಗಿಸಿಕೊಂಡರು. ಮೀರ್​ಪುರದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ಗೆದಿದ್ದ ಕಾರಣ ಮೂರು ಪಂದ್ಯಗಳ ಸರಣಿಯು ಭಾರತದ ಕೈವಶವಾಯಿತು.

Exit mobile version