ನವದೆಹಲಿ: 2023ರ ಉದಯೋನ್ಮುಖ ಏಷ್ಯಾಕಪ್ನ ಗ್ರೂಪ್ ಹಂತದ ಮುಖಾಮುಖಿಯಲ್ಲಿ ಭಾರತ ಎ ತಂಡ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಸಾಯಿ ಸುದರ್ಶನ್ ಅಜೇಯ 104 ರನ್ ಗಳಿಸಿ ಚೇಸಿಂಗ್ ಅನ್ನು ಸಾಕಷ್ಟು ಆರಾಮದಾಯಕವಾಗಿಸಿದರು. ಮೆನ್ ಇನ್ ಬ್ಲೂ ಪರ ನಿಕಿನ್ ಜೋಸ್ ಅರ್ಧಶತಕ ಬಾರಿಸಿದರು. ಏತನ್ಮಧ್ಯೆ, ಈ ಗೆಲುವಿನೊಂದಿಗೆ, ಭಾರತವು ಲೀಗ್ನ ಮೊದಲ ತಂಡವಾಗಿ ಸೆಮಿಫೈನಲ್ಗೆ ಅರ್ಹತೆ ಪಡೆಯಿತು. ಜುಲೈ 21ರಂದು ಕೊಲಂಬೋದ ಆರ್ ಪ್ರೇಮದಾಸದಲ್ಲಿ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ. ಫೈನಲ್ಗೆ ಅರ್ಹತೆ ಪಡೆದರೆ ಜುಲೈ 23ರಂದು ಆಡಬೇಕಾಗಿದೆ.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ‘ಎ’ ಐದನೇ ಓವರ್ನಲ್ಲಿ ಸೈಮ್ ಅಯೂಬ್ ಮತ್ತು ಒಮೈರ್ ಯೂಸುಫ್ ಅವರನ್ನು ಕಳೆದುಕೊಂಡಿತು. ತಮ್ಮ ನಾಲ್ಕನೇ ಓವರ್ನಲ್ಲಿ ಸೈಮ್ ಅಯೂಬ್ (0) ಹಾಗೂ ಒಮೈರ್ ಯೂಸುಫ್ (0) ವಿಕೆಟ್ ಉರುಳಿಸಿದ ವೇಗದ ಬೌಳರ್ ರಾಜವರ್ಧನ್ ಟೀಮ್ ಇಂಡಿಯಾಗೆ ಆರಂಭಿಕ ಯಶಸ್ಸು ತಂದುಕೊಟ್ಟರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಖಾಸಿಂ ಅಕ್ರಮ್ 48 ರನ್ ಕಲೆಹಾಕಿ ತಂಡಕ್ಕೆ ಆಸರೆಯಾದರು. ಈ ವೇಳೆ ಮತ್ತೆ ಉರಿ ಚೆಂಡಿನ ದಾಳಿ ಮಾಡಿದ ರಾಜವರ್ಧನ್ ಖಾಸಿಂ ವಿಕೆಟ್ ಉರುಳಿಸಿದರು. ಇನ್ನೊಂದೆಡೆ ಮಾನವ್ ಸುತಾರ್ ಕೂಡ 3 ವಿಕೆಟ್ ಕಬಳಿಸಿ ಉತ್ತಮ ಸಾಥ್ ನೀಡಿದರು. ಇನ್ನು ಅಂತಿಮ ಹಂತದಲ್ಲಿ ಬಿಗಿ ದಾಳಿ ಸಂಘಟಿಸಿದ ರಾಜವರ್ಧನ್ ಹಂಗರ್ಗೇಕರ್ ಮೊಹಮ್ಮದ್ ವಾಸಿಂ ಜೂನಿಯರ್ (8) ಹಾಗೂ ಶಹನವಾಝ್ ದಹನಿ (4) ಗೆ ಪೆವಿಲಿಯನ್ ಹಾದಿ ತೋರಿಸಿದರು. ಪರಿಣಾಮ 48 ಓವರ್ಗಳಲ್ಲಿ 205 ರನ್ಗಳಿಗೆ ಪಾಕಿಸ್ತಾನ್ ತಂಡವು ಆಲೌಟ್ ಆಯಿತು.
ಇದನ್ನೂ ಓದಿ : Asia Cup 2023 : ಏಷ್ಯಾ ಕಪ್ನಲ್ಲಿ ಭಾರತ ತಂಡದ ಪಂದ್ಯಗಳ ದಿನಾಂಕ, ಸಮಯ ಇನ್ನಿತರ ಮಾಹಿತಿ ಇಲ್ಲಿದೆ
ಸಾಧಾರಣ 206 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾಗೆ ಎಡಗೈ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ಹಾಗೂ ಅಭಿಷೇಕ್ ಶರ್ಮಾ ಉತ್ತಮ ಆರಂಭ ಒದಗಿಸಿದ್ದರು. ಅವರಿಬ್ಬರು ಮೊದಲ ವಿಕೆಟ್ ವಿಕೆಟ್ಗೆ 58 ರನ್ಗಳ ಜತೆಯಾಟವಾಡಿದರು. ಆದರೆ, ಅಭಿಷೇಕ್ ಶರ್ಮಾ (20) ಹೆಚ್ಚು ಹೊತ್ತು ಕ್ರೀಸ್ನಲ್ಲಿ ಇರಲಿಲ್ಲ. ಆ ಬಳಿಕ ಬಂದ ಕನ್ನಡಿಗ ನಿಕಿನ್ ಜೋಸ್ 64 ಎಸೆತಗಳಲ್ಲಿ 7 ಫೋರ್ಗಳೊಂದಿಗೆ 53 ರನ್ ಚಚ್ಚಿ ಗೆಲುವು ಸುಲಭಗೊಳಿಸಿದರು. ಮತ್ತೊಂದೆಡೆ ಎಚ್ಚರಿಕೆಯ ಆಡವಾಡಿದರು. ಅಂತಿಮವಾಗಿ ಯಶ್ ಧುಲ್ (21) ಜೊತೆಗೂಡಿ 110 ಎಸೆತಗಳಲ್ಲಿ ಅಜೇಯ 104 ರನ್ ಬಾರಿಸುವ ಮೂಲಕ ಸಾಯಿ ಸುದರ್ಶನ್ 36.4 ಓವರ್ಗಳಲ್ಲಿ ಟೀಮ್ ಇಂಡಿಯಾವನ್ನು ಗುರಿ ಮುಟ್ಟಿಸಿದರು.