ಮುಂಬಯಿ : ಸೆಪ್ಟೆಂಬರ್ ೧ರಿಂದ ಸೆಪ್ಟೆಂಬರ್ ೨೨ರವರೆಗೆ ನಡೆಯಲಿರುವ ನ್ಯೂಜಿಲೆಂಡ್ ಎ ತಂಡದ (Team India) ವಿರುದ್ಧದ ಚತುರ್ದಿನ ಪಂದ್ಯಗಳ ಸರಣಿಗೆ ಭಾರತ ಎ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ. ಪ್ರಿಯಾಂಕ್ ಪಾಂಚಾಲ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದ್ದು, ಋತುರಾಜ್ ಗಾಯಕ್ವಾಡ್, ರಜತ್ ಪಾಟೀದಾರ್, ಸರ್ಫರಾಜ್‌ಖಾನ್ ಮತ್ತಿತರರು ಅವಕಾಶ ಪಡೆದುಕೊಂಡಿದ್ದಾರೆ.
ಭಾರತ ಹಿರಿಯರ ತಂಡ ಏಷ್ಯಾ ಕಪ್‌ಗಾಗಿ ಪ್ರವಾಸ ಮಾಡಿದ್ದು, ಸೆಪ್ಟೆಂಬರ್ ೧೩ರವರೆಗೆ ಟೂರ್ನಿ ನಡೆಯಲಿದೆ. ಏತನ್ಮಧ್ಯೆ, ನ್ಯೂಜಿಲೆಂಡ್ ಎ ತಂಡ ಭಾರತಕ್ಕೆ ಆಗಮಿಸಲಿದೆ. ಒಟ್ಟು ಮೂರು ಚತುರ್ದಿನಗಳ ಪಂದ್ಯ ನಡೆಯಲಿದ್ದು, ಎರಡು ಪಂದ್ಯಗಳಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ಒಂದು ಪಂದ್ಯಕ್ಕೆ ಹುಬ್ಬಳ್ಳಿಯ ರಾಜನಗರದ ಸ್ಟೇಡಿಯಮ್ ಆತಿಥ್ಯ ವಹಿಸಲಿದೆ. ಇದಾದ ಬಳಿಕ ಎ ತಂಡಗಳ ನಡುವೆ ಮೂರು ಏಕದಿನ ಪಂದ್ಯಗಳ ಸರಣಿಯೂ ಆಯೋಜನೆಗೊಂಡಿದೆ. ಇದು ಚೆನ್ನೈನಲ್ಲಿ ನಡೆಯಲಿದ್ದು, ಸೆಪ್ಟೆಂಬರ್ ೨೫, ೨೭ ಮತ್ತು ೨೯ರಂದು ಆಯೋಜನೆಗೊಂಡಿದೆ. ಈ ಸರಣಿಗೆ ಮುಂದಿನ ಕೆಲವು ದಿನಗಳಲ್ಲಿ ತಂಡವನ್ನು ಪ್ರಕಟಿಸಲಾಗುವುದು ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
ಈ ಹಿಂದೆ ಭಾರತ ಎ ತಂಡದ ನಾಯಕತ್ವ ಶುಬ್ಮನ್ ಗಿಲ್‌ಗೆ ಸಿಗಲಿದೆ ಎಂದು ಹೇಳಲಾಗಿತ್ತು. ಆದರೆ, ಅವರು ಕೌಂಟಿ ಕ್ರಿಕೆಟ್‌ಗೆ ಹೋಗಲಿರುವ ಕಾರಣ ಪಾಂಚಾಲ್‌ಗೆ ಹೊಣೆಗಾರಿಕೆ ಸಿಕ್ಕಿದೆ. ಜಿಂಬಾಬ್ವೆ ಪ್ರವಾಸದ ಏಕ ದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಗಿಲ್, ಗ್ಲಾಮೊರ್ಗಾನ್ ಕ್ಲಬ್ ಪರ ಆಡಲು ಮುಂದಾಗಿದ್ದಾರೆ.
ಚತುರ್ದಿನ ಪಂದ್ಯಗಳ ಸರಣಿಗೆ ಭಾರತ ತಂಡ ಇಂತಿದೆ
ಪ್ರಿಯಾಂಕ್ ಪಾಂಚಾಲ್, ಅಭಿಮನ್ಯು ಈಶ್ವರನ್, ಋತುರಾಜ್ ಗಾಯಕ್ವಾಡ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ತಿಲಕ್ ವರ್ಮಾ, ಕೆ. ಎಸ್ ಭರತ್, ಉಪೇಂದ್ರ ಯಾದವ್, ಕುಲ್ದೀಪ್ ಯಾದವ್, ಸೌರಭ್ ಕುಮಾರ್, ರಾಹುಲ್ ಚಾಹರ್, ಪ್ರಸಿದ್ಧ್ ಕೃಷ್ಣ, ಉಮ್ರಾನ್ ಮಲಿಕ್, ಮುಕೇಶ್ ಕುಮಾರ್, ಯಶ್ ದಯಾಳ್, ಅರ್ಜನ್ ನಾಗವಾಸ್ವಾಲಾ
ಪಂದ್ಯದ ವೇಳಾಪಟ್ಟಿ
ಮೊದಲ ಪಂದ್ಯ: ಸೆಪ್ಟೆಂಬರ್ ೧ರಿಂದ ಸೆಪ್ಟೆಂಬರ್ ೪ರವರೆಗೆ (ಚಿನ್ನಸ್ವಾಮಿ ಸ್ಟೇಡಿಯಮ್, ಬೆಂಗಳೂರು)
ಎರಡನೇ ಪಂದ್ಯ: ಸೆಪ್ಟೆಂಬರ್ ೮ರಿಂದ ಸೆಪ್ಟೆಂಬರ್ ೧೧ರವರೆಗೆ (ಕೆ.ಎಸ್.ಸಿ.ಎ ಸ್ಟೇಡಿಯಮ್ ಹುಬ್ಬಳ್ಳಿ)
ಮೂರನೇ ಪಂದ್ಯ: ಸೆಪ್ಟೆಂಬರ್ ೧೫ರಿಂದ ಸೆಪ್ಟೆಂಬರ್ ೧೮ರವರೆಗೆ (ಚಿನ್ನಸ್ವಾಮಿ ಸ್ಟೇಡಿಯಮ್, ಬೆಂಗಳೂರು)
ಇದನ್ನೂ ಓದಿ | Asia Cup- 2022 | ಏಷ್ಯಾ ಕಪ್‌ಗೆ ಹೋಗುವ ಭಾರತ ತಂಡದ ಹಂಗಾಮಿ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕ