Site icon Vistara News

India A vs England Lions: ಸರ್ಫರಾಜ್, ಪಡಿಕ್ಕಲ್ ಶತಕ; ಉತ್ತಮ ಸ್ಥಿತಿಯಲ್ಲಿ ಭಾರತ ‘ಎ’ ತಂಡ

Sarfaraz Khan smash centurie

ಅಹಮದಾಬಾದ್​: ಇಂಗ್ಲೆಂಡ್​​ ಲಯನ್ಸ್​ ಎದುರಿನ ಪಂದ್ಯದಲ್ಲಿ ಸರ್ಫರಾಜ್ ಖಾನ್(Sarfaraz Khan) ಮತ್ತು ದೇವದತ್ ಪಡಿಕ್ಕಲ್(Devdutt Padikkal) ಅವರು ಶತಕ ಸಿಡಿಸಿ ಮಿಂಚಿದ್ದಾರೆ. ಉಭಯ ಆಟಗಾರರ ಈ ಶತಕದ ನೆರವಿನಿಂದ ಭಾರತ ‘ಎ’ ತಂಡ ಉತ್ತಮ ರನ್ ಗಳಿಸಿದೆ.

ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಇಂಗ್ಲೆಂಡ್ ಲಯನ್ಸ್ ತಂಡ 52.4 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ ಬ್ಯಾಟಿಂಗ್​ ಆರಂಭಿಸ ಭಾರತ ‘ಎ’ ತಂಡಕ್ಕೆ ಅಭಿಮನ್ಯು ಈಶ್ವರನ್ ಮತ್ತು ಪಡಿಕ್ಕಲ್ ಅದ್ಭುತ ಆರಂಭವನ್ನು ನೀಡಿದರು. ಇಂಗ್ಲೆಂಡ್ ಲಯನ್ಸ್ ಹಾಕಿದ ಸ್ಕೋರ್ ಅನ್ನು ಮೀರಿಸಲು 162 ರನ್‌ಗಳ ಅದ್ಭುತ ಜತೆಯಾಟ ನಡೆಸಿದರು.

ಈಶ್ವರನ್ ಮತ್ತು ಪಡಿಕ್ಕಲ್ ಸೇರಿಕೊಂಡು ಮೊದಲ ವಿಕೆಟ್​ಗೆ 162 ರನ್​ ಒಟ್ಟುಗೂಡಿಸಿದರು. 58 ರನ್​ ಗಳಿಸಿದ ವೇಳೆ ಅಭಿಮನ್ಯು ಈಶ್ವರನ್ ವಿಕೆಟ್​ ಕೈಚೆಲ್ಲಿದರು. ಆದರೆ ಇವರ ಜತೆಗಾರ ಪಡಿಕ್ಕಲ್​ ತಾಳ್ಮೆಯುತ ಬ್ಯಾಟಿಂಗ್​ ನಡೆಸಿ 17 ಬೌಂಡರಿ ನೆರವಿನಿಂದ 105 ರನ್ ಬಾರಿಸಿ ಶತಕ ಪೂರ್ತಿಗೊಳಿಸಿದರು.

ತಿಲಕ್​ ವರ್ಮ ಮತ್ತು ರಿಂಕು ಸಿಂಗ್​ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದರು. ತಿಲಕ್ 6 ರನ್​ ಗಳಿಸಿದರೆ, ರಿಂಕು ಶೂನ್ಯಕ್ಕೆ ಔಟಾದರು. ಕೀಪರ್​ ಉಪೇಂದ್ರ ಯಾದವ್​ ಕೂಡ ಶೂನ್ಯ ಸಂಪಾದನೆ. ಸ್ಪಿನ್​ ಆಲ್​ರೌಂಡರ್​ ವಾಷಿಂಗ್ಟನ್​ ಸುಂದರ್​ 57 ರನ್​ ಬಾರಿಸಿದರು.

ಸಿಡಿದ ಸರ್ಫರಾಜ್​ ಖಾನ್​


ದೇಶೀಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿದರೂ ಟೀಮ್​ ಇಂಡಿಯಾಕ್ಕೆ ಆಯ್ಕೆಯಾಗದ ಸರ್ಫರಾಜ್​ ಖಾನ್​ ಮತ್ತೆ ಶತಕ ಬಾರಿಸಿ ಸುದ್ದಿಯಾಗಿದ್ದಾರೆ. ಸಿಡಿಲಬ್ಬರ ಬ್ಯಾಟಿಂಗ್​ ಪ್ರದರ್ಶನ ತೋರಿದ ಅವರು ಸದ್ಯ 13 ಬೌಂಡರಿ ಮತ್ತು 5 ಸಿಕ್ಸರ್​ ಬಾರಿಸಿ 129* ರನ್​ ಬಾರಿಸಿದ್ದಾರೆ. ಬ್ಯಾಟಿಂಗ್​ ನಡೆಸುತ್ತಿರುವ ಅವರು 150ರನ್​ಗಳತ್ತ ದಾಪುಗಾಲಿಟ್ಟಿದ್ದಾರೆ.

ವಿರಾಟ್​ ಕೊಹ್ಲಿ ಅವರು ಇಂಗ್ಲೆಂಡ್​ ವಿರುದ್ಧದ ಮೊದಲ ಎರಡು ಪಂದ್ಯಗಳಿಂದ ಹಿಂದೆ ಸರಿದ ಕಾರಣ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಸರ್ಫರಾಜ್​ ಖಾನ್​ ಹೆಸರು ಕೂಡ ಕೇಳಿ ಬಂದಿತ್ತು. ಆದರೆ ಅಂತಿಮವಾಗಿ ಬಿಸಿಸಿಐ ರಜತ್​ ಪಾಟಿದಾರ್​ಗೆ ಮಣೆ ಹಾಕಿತ್ತು. ಈ ಆಯ್ಕೆಯ ಮರು ದಿನವೇ ಸರ್ಫರಾಜ್​ ಶತಕ ಬಾರಿಸಿ ಬಿಸಿಸಿಐಗೆ ತಕ್ಕ ತಿರುಗೇಟು ನೀಡಿದ್ದಾರೆ.

Exit mobile version