Site icon Vistara News

Ind vs WI ODI | ಮೂರು ದಶಕಗಳ ಬಳಿಕ ವಿಂಡೀಸ್‌ ನೆಲದಲ್ಲಿ ಚರಿತ್ರೆ ಬರೆದ ಟೀಮ್‌ ಇಂಡಿಯಾ

IND vs WI ODI

ಪೋರ್ಟ್‌ ಆಫ್‌ ಸ್ಪೇನ್‌ : ಶಿಖರ್‌ ಧವನ್‌ ನೇತೃತ್ವದ ಭಾರತ ತಂಡದ ಮೂರು ದಶಕದ ಬಳಿಕ ವಿಂಡೀಸ್ ನೆಲದಲ್ಲಿ ದಾಖಲೆ ಬರೆದಿದೆ. Ind vs WI ODI ಸರಣಿಯ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಜಯ ಸಾಧಿಸಿರುವ ಭಾರತ ತಂಡ ಆತಿಥೇಯ ತಂಡವನ್ನು ವೈಟ್‌ವಾಷ್‌ ಮಾಡಿತು. ಈ ಮೂಲಕ ೩೯ ವರ್ಷಗಳ ಬಳಿಕ ವೆಸ್ಟ್‌ ಇಂಡೀಸ್‌ ನೆಲದಲ್ಲಿ ಕ್ಲೀನ್‌ ಸ್ವೀಪ್ ಸಾಧನೆ ಮಾಡಿತು.

ಈ ಹಿಂದೆ ಭಾರತ ಈ ಸಾಧನೆ ಮಾಡಿರುವುದು ೧೯೮೩ರಲ್ಲಿ. ಆ ಬಳಿಕ ವೆಸ್ಟ್‌ ಇಂಡೀಸ್‌ ಹಲವು ಬಾರಿ ಪ್ರವಾಸ ಹೋಗಿರುವ ಹೊರತಾಗಿಯೂ ಆ ತಂಡದ ವಿರುದ್ಧದ ಏಕದಿನ ಸರಣಿಯ ಎಲ್ಲ ಹಣಾಹಣಿಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಶಿಖರ್‌ ಧವನ್‌ ಬಳಗ ಹೊಸ ದಾಖಲೆಯೊಂದನ್ನು ಸೃಷ್ಟಿದೆ.

ಈ ಸರಣಿಯ ಎಲ್ ಪಂದ್ಯಗಳೂ ಪೋರ್ಟ್‌ ಆಫ್‌ ಸ್ಪೇನ್‌ ಕ್ವೀನ್ಸ್‌ ಪಾರ್ಕ್‌ ಓವಲ್‌ನಲ್ಲಿ ನಡೆದಿತ್ತು. ಆರಂಭಿಕ ಪಂದ್ಯದಲ್ಲಿ ಭಾರತ ೩ ರನ್‌ ರೋಚಕ ವಿಜಯ ದಾಖಲಿಸಿದ್ದರೆ, ಎರಡನೇ ಪಂದ್ಯದಲ್ಲೂ ೨ ವಿಕೆಟ್‌ ಥ್ರಿಲ್ಲಿಂಗ್‌ ಜಯ ಕಂಡಿತ್ತು. ಮೂರನೇ ಪಂದ್ಯವನ್ನು ೧೧೯ ರನ್‌ಗಳ ಬೃಹತ್‌ ಅಂತರದಿಂದ ವಶಪಡಿಸಿಕೊಂಡಿತ್ತು.

ಭಾರತದ ಭರ್ಜರಿ ಪ್ರದರ್ಶನ

ಟಾಸ್‌ ಗೆದ್ದು ಮೊದಲ ಬ್ಯಾಟ್‌ ಮಾಡಿದ್ದ ಭಾರತ ತಂಡ ಉತ್ತಮ ರೀತಿಯಲ್ಲಿ ಬ್ಯಾಟಿಂಗ್ ಮಾಡಿತು. ನಾಯಕ ಶಿಖರ್ (೫೮) ಹಾಗೂ ಶುಬ್ಮನ್‌ ಗಿಲ್‌ ಅಜೇಯ ೯೮ ರನ್‌ ಬಾರಿಸಿದರು. ಏತನ್ಮಧ್ಯೆ ಮಳೆ ಸುರಿದ ಕಾರಣ ಡಕ್ವರ್ತ್‌ ಲೂಯಿಸ್‌ ನಿಯಮದ ಪ್ರಕಾರ ಪಂದ್ಯವನ್ನು ೩೬ ಓವರ್‌ಗಳಿಗೆ ಮೊಟಕುಗೊಳಿಸಲಾಯಿತು.

ಮಳೆ ನಿಂತ ಬಳಿಕ ಆರಂಭಗೊಂಡ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಸಿಡಿದೆದ್ದರು. ಅವರು ೩೪ ಎಸೆತಗಳಲ್ಲಿ ೪೪ ರನ್ ಕಲೆಹಾಕಿದರು. ಸೂರ್ಯಕುಮಾರ್‌ ಮತ್ತೊಮ್ಮೆ ವೈಫಲ್ಯ ಅನುಭವಿಸಿ ೮ ರನ್‌ಗಳಿಗೆ ವಿಕೆಟ್‌ ಒಪ್ಪಿಸಿದರು. ಆದಾಗ್ಯೂ ಭಾರತ ತಂಡ ೩೬ ಓವರ್‌ಗಳಲ್ಲಿ ೩ ವಿಕೆಟ್‌ ಕಳೆದುಕೊಂಡು ೨೨೫ ರನ್‌ ಕಲೆಹಾಕಿತು.

ಸ್ಪಿನ್‌ ಮಾಂತ್ರಿಕ ಚಹಲ್‌

೩೬ ಓವರ್‌ಗಳಲ್ಲಿ ೨೨೬ ರನ್‌ ಗಳಿಸುವ ಗುರಿಯೊಂದಿಗೆ ಬ್ಯಾಟ್‌ ಮಾಡಲು ಇಳಿದ ವಿಂಡೀಸ್‌ ದಾಂಡಿಗರಿಗೆ ಭಾರತದ ಬೌಲರ್‌ಗಳು ನಿಖರ ಹಾಗೂ ನೇರ ಬೌಲಿಂಗ್‌ ದಾಳಿ ಮಾಡುವ ಮೂಲಕ ಕಾಡಿದರು. ಕೈಲ್‌ ಮೇಯರ್ಸ್‌ ಹಾಗೂ ಶ್ರಮಾ ಬ್ರೂಕ್ಸ್‌ ಅವರನ್ನು ಶೂನ್ಯಕ್ಕೆ ವಾಪಸ್‌ ಕಳುಹಿಸಿದ ಮೊಹಮ್ಮದ್‌ ಸಿರಾಜ್‌ ಭಾರತಕ್ಕೆ ಅರಂಭದಲ್ಲೇ ಸಂತಸ ತಂದುಕೊಟ್ಟರು. ಹಿಂದಿನ ಪಂದ್ಯದ ಶತಕ ವೀರ ಶಾಯ್‌ ಹೋಪ್‌ ೨೨ ರನ್‌ಗಳಿಗೆ ಚಹಲ್‌ಗೆ ವಿಕೆಟ್‌ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬ್ರೆಂಡನ್‌ ಕಿಂಗ್ ಹಾಗೂ ನಿಕೋಲಸ್‌ ಪೂರನ್‌ ತಲಾ ೪೨ ರನ್‌ಗಳನ್ನು ಬಾರಿಸುವ ಮೂಲಕ ಭಾರತಕ್ಕೆ ಆತಂಕ ತಂದೊಡ್ಡಿದರು. ಬ್ರೆಂಡನ್‌ ಅಕ್ಷರ್‌ಗೆ ವಿಕೆಟ್‌ ಒಪ್ಪಿಸಿದರೆ, ನಿಕೋಲಸ್ ಅವರನ್ನು ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಪೆವಿಲಿಯನ್‌ಗೆ ವಾಪಸ್‌ ಕಳುಹಿಸಿದರು. ಕೆಸಿ ಕಾರ್ಟಿ (೫) ಹಾಗೂ ಜೇಸನ್ ಹೋಲ್ಡರ್‌ (೯) ವಿಕೆಟ್‌ ಶಾರ್ದುಲ್‌ ಠಾಕೂರ್‌ ಪಾಲಾಯಿತು. ಉಳಿದ ಮೂರು ವಿಕೆಟ್‌ಗಳನ್ನು ಯಜ್ವೇಂದ್ರ ಚಹಲ್‌ ನಿರಂತರವಾಗಿ ಉರುಳಿಸಿದ ಕಾರಣ ಆತಿಥೇಯ ತಂಡ ೨೬ ಓವರ್‌ಗಳಲ್ಲಿ ೧೩೭ ರನ್‌ಗಳಿಗೆ ಸರ್ವಪತನ ಕಂಡಿತು.

ವಿಂಡೀಸ್‌ ಪಾಲಿಗೆ ಇದು ಸತತ ಎರಡನೇ ಸರಣಿಯಲ್ಲಿ ವೈಟ್‌ವಾಷ್‌ ಸೋಲು. ಈ ಹಿಂದಿನ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲೂ ೩-೦ ಸೋಲು ಕಂಡಿತ್ತು.

ಶುಬ್ಮನ್‌ ಗಿಲ್‌ ಸರಣಿ ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸ್ಕೋರ್‌ ವಿವರ

ಭಾರತ : ೩೬ ಓವರ್‌ಗಳಲ್ಲಿ ೩ ವಿಕೆಟ್‌ಗೆ ೨೨೫ (ಶಿಖರ್‌ ಧವನ್‌ ೫೮, ಶುಬ್ಮನ್‌ ಗಿಲ್‌ ೯೮*, ಶ್ರೇಯಸ್‌ ಅಯ್ಯರ್‌ ೪೪; ಹೇಡನ್‌ ವಾಲ್ಶ್‌ ೫೭ಕ್ಕೆ೨, ಅಕೇಲ್‌ ಹೊಸೈನ್ ೪೩ಕ್ಕೆ೧ ).

ವೆಸ್ಟ್‌ ಇಂಡೀಸ್‌ : ೨೬ ಓವರ್‌ಗಳಲ್ಲಿ ೧೩೭ (ಬ್ರೆಂಡನ್‌ ಕಿಂಗ್‌ ೪೨, ನಿಕೋಲಸ್‌ ಪೂರನ್‌ ೪೨, ಯಜ್ವೇಂದ್ರ ಚಹಲ್‌ ೧೭ಕ್ಕೆ೪, ಮೊಹಮ್ಮದ್‌ ಸಿರಾಜ್‌ ೧೪ಕ್ಕೆ೨, ಶಾರ್ದುಲ್‌ ಠಾಕೂರ್‌ ೧೭ಕ್ಕೆ೨).

ಇದನ್ನೂ ಓದಿ | Ind vs WI ODI | ಸರಣಿ ಕ್ಲೀನ್‌ ಸ್ವೀಪ್ ಮಾಡಿದ ಭಾರತ, ವೆಸ್ಟ್‌ ಇಂಡೀಸ್‌ಗೆ 119 ರನ್‌ಗಳ ಸೋಲು

Exit mobile version