Site icon Vistara News

SAFF Championship : ಲೆಬನಾನ್​ ತಂಡವನ್ನು ಮಣಿಸಿ ಫೈನಲ್​ಗೇರಿದ ಭಾರತ

indian football team

ಬೆಂಗಳೂರು: ಸ್ಯಾಫ್ ಚಾಂಪಿಯನ್​ಷಿಪ್ (SAFF Championship)​ ಫುಟ್ಬಾಲ್​ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಲೆಬನಾನ್ ತಂಡವನ್ನು ಪೆನಾಲ್ಟಿ ಶೂಟೌಟ್​ನಲ್ಲಿ 4-2 ಗೋಲುಗಳಿಂದ ಮಣಿಸಿದ ಹಾಲಿ ಚಾಂಪಿಯನ್​ ಭಾರತ ತಂಡ ಫೈನಲ್​ಗೆ ಪ್ರವೇಶಿಸಿತು. ಜುಲೈ 4ರಂದು ಫೈನಲ್ ಪಂದ್ಯ ನಡೆಯಲಿದ್ದು, ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 1-0 ಗೋಲಿನಿಂದ ಗೆದ್ದಿರುವ ಕುವೈತ್ ತಂಡವನ್ನು ಆತಿಥೇಯ ಭಾರತ ತಂಡ ಎದುರಿಸಲಿದೆ.

ಈ ಗೆಲುವಿನೊಂದಿಗೆ ಪ್ರಾದೇಶಿಕ ಟೂರ್ನಮೆಂಟ್​​ನಲ್ಲಿ ಭಾರತ ತಂಡ 13ನೇ ಬಾರಿಗೆ ಫೈನಲ್​ಗೇರಿದ ಸಾಧನೆ ಮಾಡಿತು. ಅಲ್ಲದೆ, ಸತತ 9 ನೇ ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದುಕೊಂಡಿತು. ಭಾರತ ತಂಡ ಒಟ್ಟು 8 ಬಾರಿ ಸ್ಯಾಪ್​ ಚಾಂಪಿಯನ್​ಷಿಪ್​ ಟ್ರೋಫಿಯನ್ನು ಗೆದ್ದುಕೊಂಡಿದೆ. ಸೆಮಿಫೈನಲ್​ ಪಂದ್ಯದ ಪೂರ್ಣ ಅವಧಿ ಗೋಲ್​ ರಹಿತವಾಗಿ ಮುಕ್ತಾಯಗೊಂಡ ಕಾರಣ ಪೆನಾಲ್ಟಿ ಶೂಟೌಟ್​ ಮೊರೆ ಹೋಗಲಾಯಿತು. ನಾಯಕ ಸುನಿಲ್ ಛೆಟ್ರಿ, ಅನ್ವರ್ ಅಲಿ, ಮಹೇಶ್ ಸಿಂಗ್ ಮತ್ತು ಉದಾಂತ್ ಸಿಂಗ್ ಗೋಲು ಗಳಿಸುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು. ವಲೀದ್ ಶೌರ್ ಮತ್ತು ಮೊಹಮ್ಮದ್ ಸಾಡೆಕ್ ಅವರ ಗೋಲ್​ಗಳೊಂದಿಗೆ ಲೆಬನಾನ್ ಕೇವಲ ಎರಡು ಗೋಲು ಗಳಿಸಲು ಶಕ್ತಗೊಂಡಿತು.

ಭಾರತದ ಗೋಲ್ ಕೀಪರ್ ಗುರ್​ಪ್ರೀತ್​ ಸಂಧು ಅವರು ಎದುರಾಳಿ ತಂಡದ ಹಸನ್ ಮಾತೌಕ್ ಅವರ ಕಿಕ್ ಗೋಲ್​ ಪೋಸ್ಟ್​​ ಒಳಗೆ ಹೋಗದಂತೆ ನಡೆದರೆ ಇನ್ನೊಬ್ಬ ಆಟಗಾರ ಖಲೀಲ್ ಬೇಡರ್ ಹೊಡೆದ ಚೆಂಡು ಕ್ರಾಸ್ ಬಾರ್​ನಿಂದ ಮೇಲಕ್ಕೆ ಹಾರಿ ಹೋಯಿತು ಒಡಿಶಾದಲ್ಲಿ ಇತ್ತೀಚೆಗೆ ನಡೆದ ಇಂಟರ್ ಕಾಂಟಿನೆಂಟಲ್ ಕಪ್​​ನಲ್ಲಿ ಲೆಬನಾನ್ ತಂಡವನ್ನು 2-0 ಅಂತರದಿಂದ ಸೋಲಿಸಿದ ನಂತರ ಭಾರತದ ತಂಡಕ್ಕೆ ಒಂದೇ ತಂಡದ ವಿರುದ್ಧ ಲಭಿಸಿದ ಸತತ ಎರಡನೇ ಗೆಲುವಾಗಿದೆ.

ಭಾರತ ತಂಡ ಗೆಲುವ ಸಾಧಿಸಿದ ಹೊರತಾಗಿಯೂ ಪಂದ್ಯದ ಮೊದಲಾರ್ಧದಲ್ಲಿ ಲೆಬನಾನ್ ತಂಡ ಸಂಪೂರ್ಣ ಮೇಲುಗೈ ಸಾಧಿಸಿತ್ತು. ಅದರಲ್ಲೂ ಮೊದಲ 10 ನಿಮಿಷಗಳ ಕಾಲ ಭಾರತ ತಂಡದ ಆಟಗಾರರು ಮಂಕಾದಂತೆ ತೋರಿದರು. ಎರಡನೇ ನಿಮಿಷದಲ್ಲಿ ಲೆಬನಾನ್ ತಂಡಕ್ಕೆ ಮುನ್ನಡೆ ಸಾಧಿಸಲು ಅದ್ಭುತ ಸಿಕ್ಕಿತ್ತು. ಆದರೆ ನಾದೆರ್ ಮಾತರ್ ಗೋಲ್​ ಹೊಡೆಯಲು ಸಫಲರಾಗದ ಕಾರಣ ಭಾರತ ತಂಡದ ಆಟಗಾರರು ಖುಷಿ ಪಡುವಂತಾಯಿತು.

16ನೇ ನಿಮಿಷದಲ್ಲಿ ಭಾರತ ತಂಡಕ್ಕೂ ಉತ್ತಮ ಅವಕಾಶವೊಂದು ದೊರೆಯಿತು. ಆದರೆ, ನಾಯಕ ಛೆಟ್ರಿ, ಜಿಕ್ಸನ್​ ಸಿಂಗ್​ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ವಿಫಲರಾದರು.

ಇದನ್ನೂ ಓದಿ : Asian Kabaddi Championships : ಕಬಡ್ಡಿಯಲ್ಲಿ ನಮ್ದೇ ಹವಾ! ಮತ್ತೊಂದು ಟ್ರೋಫಿ ಗೆದ್ದ ಭಾರತ ತಂಡ

ಲೆಬನಾನ್ 42ನೇ ನಿಮಿಷದಲ್ಲಿ ಮತ್ತೊಂದು ಬಾರಿ ಗೋಲ್​ ಬಾರಿಸಲು ಯತ್ನಿಸಿತು. ನಾಯಕ ಹಸನ್ ಮಾಟೌಕ್ ಅವರು ಹೊಡೆದ ಚೆಂಡನ್ನು ಭಾರತದ ಗೋಲ್ ಕೀಪರ್ ಗುರ್ಪ್ರೀತ್ ಸಂಧು ತಡೆದರು. ದ್ವಿತೀಯಾರ್ಧದಲ್ಲಿಯೂ ಇತ್ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಆದರೆ ಇತ್ತಂಡಗಳಿಗೆ ಗೋಲ್​ ಬಾರಿಸಲು ಸಾಧ್ಯವಾಗಲಿಲ್ಲ. ಪಂದ್ಯವನ್ನು ಹೆಚ್ಚುವರಿ ಸಮಯದತ್ತ ಕೊಂಡೊಯ್ದರೂ ಉಪಯೋಗ ಆಗಲಿಲ್ಲ. ಭಾರತ ನಾಯಕ ಸುನೀಲ್​ ಛೆಟ್ರಿಗೆ 93 ಮತ್ತು 95ನೇ ನಿಮಿಷಗಳಲ್ಲಿ ಎರಡು ಗೋಲು ಗಳಿಸಬಹುದಾಗಿತ್ತು. ಆದರೆ ಎರಡೂ ಸಂದರ್ಭಗಳಲ್ಲೂ ಅವರು ವಿಫಲರಾದರು.

Exit mobile version