ನವದೆಹಲಿ: ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಬೀಗಿದ ಭಾರತ ತಂಡ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿ ನಿಂತಿದೆ. ಬುಧವಾರ ನಡೆಯುವ ವಿಶ್ವಕಪ್ನ 9ನೇ ಪಂದ್ಯದಲ್ಲಿ ಅಫಘಾನಿಸ್ತಾನದ(India vs Afghanistan) ಸವಾಲನ್ನು ಎದುರಿಸಲಿದೆ. ಇತ್ತಂಡಗಳ ಈ ಕಾದಾಟಕ್ಕೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ(Arun Jaitley Stadium) ಅಣಿಯಾಗಿದೆ.
ಹವಾಮಾನ ವರದಿ
ಈ ಪಂದ್ಯಕ್ಕೆ ಸದ್ಯ ಮಳೆಯ ಕಾಟ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ಮೋಡ ಕವಿದ ವಾತಾವರಣ ಪಂದ್ಯದುದ್ದಕ್ಕೂ ಕಾಣಿಸಲಿದೆ ಎಂದಿದೆ. ತಾಪಮಾನವು ಹಗಲಿನಲ್ಲಿ 25 ರಿಂದ 30 ಡಿಗ್ರಿ ಮತ್ತು ರಾತ್ರಿಯಲ್ಲಿ 25 ರಿಂದ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರಲಿದೆ ಎಂದು ತಿಳಿಸಿದೆ. ಪಂದ್ಯ ನಡೆಯುವ ದಿನದ ಮುಂಜಾನೆ ಸಣ್ಣ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಆದರೆ ಪಂದ್ಯದ ವೇಳೆ ಈ ಸಮಸ್ಯೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯ ಭಯವಿಲ್ಲದ ಕಾರಣ ಅಭಿಮಾನಿಗಳು ಈ ಪಂದ್ಯವನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು.
ವಿಶ್ವಕಪ್ ಮುಖಾಮುಖಿ
ಭಾರತ ಮತ್ತು ಅಫಘಾನಿಸ್ತಾನ ತಂಡಗಳು ಇದುವರೆಗೆ ವಿಶ್ವಕಪ್ನಲ್ಲಿ ಒಂದು ಬಾರಿ ಮಾತ್ರ ಮುಖಾಮುಖಿಯಾಗಿವೆ. ಇದು ಕಳೆದ 2019ರಲ್ಲಿ ಲಂಡನ್ನಲ್ಲಿ ನಡೆದ ವಿಶ್ವಕಪ್ನಲ್ಲಿ ಈ ಪಂದ್ಯದಲ್ಲಿ ಭಾರತ ಅತ್ಯಂತ ಕಷ್ಟಪಟ್ಟು ಗೆಲುವು ಸಾಧಿಸಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ 8 ವಿಕೆಟ್ಗೆ 224 ರನ್ ಬಾರಿಸಿತ್ತು, ಈ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಬಂದ ಆಫ್ಘನ್ 213 ರನ್ ಬಾರಿಸಲಷ್ಟೇ ಶಕ್ತವಾಗಿ ಕೇವಲ 11 ರನ್ಗಳ ಅಂತರದಿಂದ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರು ಹ್ಯಾಟ್ರಿಕ್ ವಿಕೆಟ್ ಕಿತ್ತು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಪಿಚ್ ರಿಪೋರ್ಟ್
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನ ಪಿಚ್ ಸಂಪೂರ್ಣ ಬ್ಯಾಟಿಂಗ್ ಟ್ರ್ಯಾಕ್ ಆಗಿದೆ. ಇದು ಬ್ಯಾಟರ್ಗಳ ಸರ್ಗದ ತಾಣ. ಬೌಲರ್ಗಳು ಸರಿಯಾಗಿ ದಂಡಿಸಿಕೊಳ್ಳುವುದರಲ್ಲಿ ಅನುಮಾನವೇ ಬೇಡ. ಕಳೆದ ದಕ್ಷಿಣ ಆಫ್ರಿಕಾ ಮತ್ತು ಲಂಕಾ ನಡುವಣ ಪಂದ್ಯದಲ್ಲಿ ಒಟ್ಟು 754 ರನ್ ದಾಖಲಾಗಿತ್ತು. ಹೀಗಾಗಿ ಈ ಪಂದ್ಯದಲ್ಲಿಯೂ ರನ್ ಮಳೆಯೇ ಸುರಿಯುವ ನಿರೀಕ್ಷೆ ಇದೆ. ಬೌಲರ್ಗಳು ಇಲ್ಲಿ ಶಕ್ತಿ ಮೀರಿ ಪ್ರದರ್ಶನ ತೋರಬೇಕಿದೆ. ಸ್ಪಿನ್ ಬೌಲರ್ಗಳ ಆಟ ಇಲ್ಲಿ ನಡೆಯದು. ಹೀಗಾಗಿ ಭಾರತ ಮೂರು ಸ್ಪಿನ್ನರ್ ಆಡಿಸುವುದು ಅನುಮಾನ.
ಇದನ್ನೂ ಓದಿ ICC World Cup 2023: ಒಂದೇ ಎಸೆತದಲ್ಲಿ 13 ರನ್ ಗಳಿಸಿದ ಮಿಚೆಲ್ ಸ್ಯಾಂಟ್ನರ್
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್.
ಅಫಘಾನಿಸ್ತಾನ: ಹಷ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ಮೊಹಮ್ಮದ್ ನಬಿ, ನಜಿಬುಲ್ಲಾ ಝದ್ರಾನ್,ಅಜ್ಮತುಲ್ಲಾ ಒಮರ್ಝೈ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ, ನವೀನ್ ಉಲ್ ಹಕ್.