ನವ ದೆಹಲಿ: ಮುಂಬರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಶ್ರೀಲಂಕಾದಲ್ಲೇ ನಡೆಯುವುದು ಬಹುತೇಕ ಖಚಿತವಾಗಿದ್ದು, ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಆಗಸ್ಟ್ ೨೮ರಂದು ಗುಂಪು ಹಂತದ ಪಂದ್ಯ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರ ಬಂದಿಲ್ಲ. ಆದರೆ, ಮೂಲಗಳ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ತಂಡ ಒಂದೇ ಗುಂಪಿನಲ್ಲಿದ್ದು, ಟೂರ್ನಿ ಆರಂಭಗೊಂಡ ಮರುದಿನವೇ ಕಾದಾಟ ನಡೆಸಲಿವೆ ಎಂದು ಹೇಳಲಾಗಿದೆ.
ಆರ್ಥಿಕ ಹಿಂಜರಿತದಿಂದಾಗಿ ತುರ್ತು ಪರಿಸ್ಥಿತಿ ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಟೂರ್ನಿ ನಡೆಯುವುದು ಅನುಮಾನವಿತ್ತು. ಆದರೆ, ಏಷ್ಯಾ ಕ್ರಿಕೆಟ್ ಕೌನ್ಸಿಲ್ ಟೂರ್ನಿ ನಡೆಸುವುದಕ್ಕೆ ಒಪ್ಪಿಗೆ ನೀಡಿದೆ. ಹೀಗಾಗಿ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ ಎನ್ನಲಾಗುತ್ತಿದೆ. ಅದರಲ್ಲಿ ಭಾರತ ಹಾಗೂ ಪಾಕಿಸ್ತಾನ ಒಂದೇ ಗುಂಪಿನಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಯಾವಾಗ ಆರಂಭ?
ಏಷ್ಯಾ ಕಪ್ ಕ್ರಿಕೆಟ್ ಆಗಸ್ಟ್ ೨೭ರಂದು ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಸೆಪ್ಟೆಂಬರ್ ೧೧ರಂದು ಫೈನಲ್ ಪಂದ್ಯ ನಡೆಯಲಿದೆ. ಭಾರತ ಹಾಗೂ ಪಾಕಿಸ್ತಾನ ೨೨ರಂದು ತಮ್ಮ ಮೊದಲ ಪಂದ್ಯದಲ್ಲಿ ಸೆಣಸಾಡಲಿವೆ. ಈ ಟೂರ್ನಿಯ ಅರ್ಹತಾ ಪಂದ್ಯಗಳು ಆಗಸ್ಟ್ ೨೧ರಂದು ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.
ರಾಜಕೀಯ ವಿರೋಧಭಾಸದ ಕಾರಣಕ್ಕೆ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ದ್ವಿ ಪಕ್ಷೀಯ ಸರಣಿಗಳು ನಡೆಯುತ್ತಿವೆ. ಹೀಗಾಗಿ ಐಸಿಸಿ ಮತ್ತು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಡಿಯಲ್ಲಿ ನಡೆಯುವ ಪಂದ್ಯಗಳಲ್ಲಿ ಮಾತ್ರ ಪರಸ್ಪರ ಎದುರಾಗುತ್ತವೆ. ಅಂತೆಯೇ ಭಾರತ ಹಾಗೂ ಪಾಕಿಸ್ತಾನ ೨೦೨೧ರ ಆಗಸ್ಟ್‌ನಲ್ಲಿ ನಡೆದ ಟಿ೨೦ ವಿಶ್ವ ಕಪ್‌ನಲ್ಲಿ ಪರಸ್ಪರ ಎದುರಾಗಿದ್ದವು. ಆ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತು.
ಭಾರತಕ್ಕೆ ಮುನ್ನಡೆ
ಏಷ್ಯಾ ಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಇದುವರೆಗೆ ಒಟ್ಟಾರೆ ೧೫ ಪಂದ್ಯಗಳಲ್ಲಿ ಎದುರಾಗಿವೆ. ಅದರಲ್ಲಿ ಭಾರತ ಎಂಟು ಪಂದ್ಯಗಳಲ್ಲಿ ಜಯ ಗಳಿಸಿದ್ದು, ೫ರಲ್ಲಿ ಪಾಕಿಸ್ತಾನಕ್ಕೆ ಜಯ ದೊರಕಿದೆ. ೨ ಪಂದ್ಯಗಳ ಫಲಿತಾಂಶ ಮೂಡಿ ಬಂದಿಲ್ಲ.
ಮುಂಬರುವ ಏಷ್ಯಾ ಕಪ್ ೨೦೨೦ರಲ್ಲಿ ನಡೆಯಬೇಕಾಗಿತ್ತು. ಆದರೆ ಕೊರೊನಾ ಕಾರಣಕ್ಕೆ ಮುಂದೂಡಿಕೆಯಾಗಿದೆ. ಹಿಂದಿನ ಆವೃತ್ತಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು. ಫೈನಲ್‌ನಲ್ಲಿ ಭಾರತ ಬಾಂಗ್ಲಾದೇಶ ವಿರುದ್ಧ ರೋಚಕ ಜಯ ದಾಖಲಿಸಿತ್ತು.
ಇದನ್ನೂ ಓದಿ: Mithali raj | ಆಟಗಾರ್ತಿಯಾಗಿ ಇನಿಂಗ್ಸ್ ಅಂತ್ಯಗೊಳಿಸಿದ ಮಿಥಾಲಿ ರಾಜ್, ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ