ಟ್ರಿನಿಡಾಡ್: ಭಾರತ ಮತ್ತು ವೆಸ್ಟ್ ಇಂಡೀಸ್(West Indies vs India, 1st T20I) ನಡುವಣ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಗುರುವಾರ (ಆಗಸ್ಟ್ 3) ಆರಂಭವಾಗಲಿದೆ. ಐಪಿಎಲ್ನಲ್ಲಿ ಮಿಂಚಿದ ಯುವ ಆಟಗಾರರನ್ನು ನೆಚ್ಚಿಕೊಂಡಿರುವ ಭಾರತ ತಂಡ ಟಿ20 ಸ್ಪೆಶಲಿಸ್ಟ್‌ಗಳ ಸವಾಲು ಮೆಟ್ಟಿ ನಿಂತಿತೇ ಎಂಬುದು ಈ ಸರಣಿಯ ಕೌತುಕ. ಮೊದಲ ಪಂದ್ಯ ತರೌಬಾ, ಟ್ರಿನಿಡಾಡ್‌ನಲ್ಲಿರುವ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯಲಿದೆ.
ಸೀನಿಯರ್ ಆಟಗಾರರಾದ ರೋಹಿತ್ ಶರ್ಮ, ರವೀಂದ್ರ ಜಡೇಜಾ, ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ಶಮಿ ಹೀಗೆ ಹಲವು ಸ್ಟಾರ್ ಆಟಗಾರರು ಈ ಸರಣಿಯಿಂದ ಹೊರಗುಳಿದಿದ್ದಾರೆ. ಇವರೆಲ್ಲರ ಅನುಪಸ್ಥಿತಿಯಲ್ಲಿ ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ಮುಖೇಶ್ ಕುಮಾರ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ ಅವರು ಈ ತಂಡವನ್ನು ಮುನ್ನಡೆಸಲಿದ್ದಾರೆ. ಈಗಾಗಲೇ ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ಗೆ ಯುವ ಆಟಗಾರರ ತಂಡವನ್ನು ರಚಿಸಲು ಬಿಸಿಸಿಐ ಪಣ ತೊಟ್ಟಿದೆ. ಇದೇ ಕಾರಣಕ್ಕೆ ಹಲವು ಸರಣಿಗಳಿಗೆ ಹೊಸ ತಂಡವನ್ನು ರಚಿಸಿ ಪ್ರಯೋಗ ನಡೆಸುತ್ತಿದೆ. ಹೀಗಾಗಿ ಸಿಕ್ಕ ಅವಕಾಶವನ್ನು ಆಟಗಾರರು ಎರಡೂ ಕೈಗಳಿಂದ ಬಾಚಿಕೊಳ್ಳಬೇಕಿದೆ.
ಶುಭಮನ್ ಗಿಲ್, ಅರ್ಶ್ದೀಪ್ ಸಿಂಗ್, ಯಜುವೇಂದ್ರ ಚಹಲ್ ಮತ್ತು ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಹೊರತುಪಡಿಸಿ ಉಳಿದ ಆಟಗಾರರು ಹೆಚ್ಚಾಗಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿಲ್ಲ. ಸೂರ್ಯಕುಮಾರ್ ಏಕದಿನ ಸರಣಿಯಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ಎಡವಿದ್ದಾರೆ. ಇದೀಗ ಅವರ ನೆಚ್ಚಿನ ಟಿ20ಯಲ್ಲಾದರೂ ಸಿಡಿದಾರೇ ಎಂದು ಕಾದು ನೋಡಬೇಕಿದೆ. ಅಂತಿಮ ಏಕದಿನ ಪಂದ್ಯದಲ್ಲಿ ಘಾತಕ ಬೌಲಿಂಗ್ ನಡೆಸಿದ ಮುಖೇಶ್ ಕುಮಾರ್ ಟಿ20ಯಲ್ಲಿ ಆಡುವ ಮೂಲಕ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ IND vs WI 1st T20: ಭಾರತ-ವಿಂಡೀಸ್ ಟಿ20 ಮುಖಾಮುಖಿ, ಸಂಭಾವ್ಯ ತಂಡ, ಹವಾಮಾನ ವರದಿ ಹೀಗಿದೆ!
ವಿಂಡೀಸ್ ತಂಡದಲ್ಲಿ ಟಿ20 ಸ್ಪೆಶಲಿಸ್ಟ್‌ಗಳೇ ತುಂಬಿದ್ದಾರೆ. ಒಬ್ಬರಿಗಿಂತ ಒಬ್ಬರು ಇಲ್ಲಿ ಬಿಗಿಯಾಗಿದ್ದಾರೆ. ಆದರೆ ಇವರ ಪ್ರದರ್ಶನ ತಂಡಕ್ಕಾಗಿ ಕಾಣಿಸಿಕೊಳ್ಳದಿರುವುದು ಬೇಸರದ ಸಂಗತಿ. ಟಿ20 ಲೀಗ್ಗಳಲ್ಲಿ ಅಬ್ಬರಿಸುವ ಈ ಆಟಗಾರರು ಇಲ್ಲಿ ಲೆಕ್ಕಭರ್ತಿಗೆ ಆಡಿದಂತೆ ಪ್ರದರ್ಶನ ತೋರುತ್ತಿದ್ದಾರೆ. ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮೇರ್, ಕೈಲ್ ಮೇಯರ್ಸ್ ಹೀಗೆ ಬಲಿಷ್ಠ ಆಟಗಾರರ ಪಟ್ಟಿ ಬೇಳೆಯುತ್ತಲೇ ಸಾಗುತ್ತದೆ. ಒಂದೊಮ್ಮೆ ವಿಂಡೀಸ್ ಆಟಗಾರರು ತಂಡದ ಗೆಲುವಿಗಾಗಿ ಒಗ್ಗಟ್ಟಿನಿಂದ ಆಡಿದರೆ ವಿಶ್ವದ ಯಾವ ತಂಡಕ್ಕೂ ಇವರನ್ನು ಮಣಿಸಲು ಅಷ್ಟು ಸುಲಭವಲ್ಲ.