ನವ ದೆಹಲಿ: ಜಪಾನ್ ವಿರುದ್ಧ ಸೆಮಿ ಫೈನಲ್ ಪಂದ್ಯದಲ್ಲಿ 5-0 ಗೋಲುಗಳ ಅಂತರದಿಂದ ಜಯಗಳಿದ ಭಾರತ ತಂಡ ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ (Asian Champions Trophy) ಫೈನಲ್ಗೆ ಪ್ರವೇಶಿಸಿತು. ಭಾರತದ ಆಕಾಶ್ ದೀಪ್, ಹರ್ಮನ್ ಪ್ರೀತ್ ಸಿಂಗ್, ಮನ್ ದೀಪ್, ಸುಮಿತ್ ಮತ್ತು ಕಾರ್ತಿ ಸೆಲ್ವಂ ಅವರ ಅಬ್ಬರದ ಪ್ರದರ್ಶನಕ್ಕೆ ಜಪಾನ್ ತಂಡ ತಲೆಬಾಗಿತು. ಆತಿಥೇಯ ಭಾರತ ತಂಡ ಆಗಸ್ಟ್ 12 ರಂದು ನಡೆಯಲಿರುವ ಫೈನಲ್ನಲ್ಲಿ ಮಲೇಷ್ಯಾವನ್ನು ಎದುರಿಸಲಿದೆ.
ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ ನಡೆದ ಆರು ತಂಡಗಳ ಪಂದ್ಯಾವಳಿಯಲ್ಲಿ ತಮ್ಮ ಸಂಪೂರ್ಣ ಪ್ರದರ್ಶನವನ್ನು ತೋರಿದ ಭಾರತವು ಪಾಸಿಂಗ್ ನಲ್ಲಿ ಚುರುಕು ಆಟ ಪ್ರದರ್ಶಿಸಿ ಮೇಲುಗೈ ಸಾಧಿಸಿತು. ಜಪಾನ್ ಗಿಂತ ಹೆಚ್ಚಿನ ವೃತ್ತ ಆಕ್ರಮಣ ಶೀಲತೆ ಹೊಂದಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಹರ್ಮನ್ಪ್ರೀತ್ ಸಿಂಗ್ ನೇತೃತ್ವದ ತಂಡವು ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಿತು ವಿಶ್ವದ 19 ನೇ ಶ್ರೇಯಾಂಕದ ತಂಡಕ್ಕೆ ಒಂದೇ ಒಂದು ಪೆನಾಲ್ಟಿ ಕಾರ್ನರ್ ಅವಕಾಶ ನೀಡದೆ ಗೆಲುವು ಸಾಧಿಸಿತು.
ಗೋಲ್ಗಳ ಸುರಿಮಳೆ
ಆಕಾಶ್ ದೀಪ್ ಸಿಂಗ್ (19ನೇ ನಿ.), ಹರ್ಮನ್ ಪ್ರೀತ್ ಸಿಂಗ್ (23ನೇ ನಿ.), ಮನ್ ದೀಪ್ ಸಿಂಗ್ (30ನೇ ನಿ.), ಸುಮಿತ್ (39ನೇ ನಿ.) ಮತ್ತು ಸೆಲ್ವಂ ಕಾರ್ತಿ (51ನೇ ನಿ.) ತಲಾ ಒಂದು ಗೋಲು ಗಳಿಸಿ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದರು.
ರೌಂಡ್ ರಾಬಿನ್ ಹಂತದಲ್ಲಿ ಜಪಾನ್ ವಿರುದ್ಧ ಡ್ರಾ ಸಾಧಿಸಿದ್ದ ಭಾರತ, ಜಪಾನ್ ಪ್ರತಿದಾಳಿ ನಡೆಸಿದ್ದರಿಂದ ಆರಂಭದಲ್ಲಿ ಎಚ್ಚರಿಕೆಯಿಂದ ಆಡಿತ್ತು. ಸೆಮಿಫೈನಲ್ ಪಂದ್ಯ ಆರಂಭಗೊಂಡು ಎರಡು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಭಾರತವು ಪಂದ್ಯದ ಮೊದಲ ಪೆನಾಲ್ಟಿ ಕಾರ್ನರ್ ಗಳಿಸಿತು, ಆದರೆ ಭಾರತ ಪ್ರಯತ್ನವನ್ನು ಎದುರಾಳಿ ತಂಡದ ಗೋಲ್ಕೀಪರ್ ತಕಾಶಿ ಯೋಶಿಕಾವಾ ಅವರು ತಡೆದರು. ನಂತರದದಲ್ಲಿ ಚೇತರಿಕೆಯ ಆಟವಾಡಿ ಗೆಲುವು ಸಾಧಿಸಿತು.
ಇದಕ್ಕೂ ಮುನ್ನ ನಡೆದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಮಲೇಷ್ಯಾ 6-2 ಗೋಲುಗಳಿಂದ ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಮಣಿಸಿತು. ಅಬು ಕಮಲ್ ಅಜ್ರಾಯ್ (3ನೇ ನಿ.), ನಜ್ಮಿ ಜಜ್ಲಾನ್ (9, 21ನೇ ನಿ.), ಫೈಜಲ್ ಸಾರಿ (19ನೇ ನಿಮಿಷ) ಮತ್ತು ಶೆಲ್ಲೊ ಸಿಲ್ವೆರಿಯಸ್ (47 ಮತ್ತು 48ನೇ ನಿಮಿಷ) ಗೋಲು ಗಳಿಸಿದರು. ದಕ್ಷಿಣ ಕೊರಿಯಾದ ಚೆಯಾನ್ ಜಿ ವೂ (2ನೇ ನಿ.) ಮತ್ತು ನಾಯಕ ಜೊಂಗ್ಹ್ಯುನ್ ಜಂಗ್ (14ನೇ ನಿ.) ಗೋಲು ಗಳಿಸಿದರು.
ಎಚ್ಚರಿಕೆಯಿಂದಿದ್ದ ಭಾರತ
ಟೂರ್ನಿಯಲ್ಲಿ ಕಳೆದ ಮೂರು ಪಂದ್ಯಗಳನ್ನು ಭಾರತ ತಂಡ ಗೆದ್ದಿದೆ. ಪಾಕಿಸ್ತಾನವನ್ನು 4-0 ಅಂತರದಿಂದ ಸೋಲಿಸಿದ ನಂತರ ಅವರು ಮುಂದಿನ ಸ್ಪರ್ಧೆಗೆ ಪ್ರವೇಶಿಸಿದ್ದಾರೆ. ಫೇವರಿಟ್ ಆಗಿದ್ದರೂ, ಭಾರತವು ಜಪಾನ್ ಬಗ್ಗೆ ಜಾಗರೂಕವಾಗಿತ್ತು. ಆದರೆ, ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ತೋರಿದ ಭಾರತ ತಂಡ ಅಧಿಕಾರಯುತ ಗೆಲುವು ತನ್ನದಾಗಿಸಿಕೊಂಡಿತು. ಎದುರಾಳಿ ತಂಡಕ್ಕೆ ಒಂದೇ ಒಂದು ಗೋಲ್ ಬಿಟ್ಟುಕೊಡದೇ ರಕ್ಷಣಾ ವ್ಯೂಹ ಕಟ್ಟಿದ ಭಾರತ ಪದೇಪದೇ ಜಪಾನ್ ತಂಡದ ಗೋಲ್ಪೋಸ್ಟ್ ಮೇಲೆ ದಾಳಿ ಮಾಡಿತು. ಈ ಮೂಲಕ ಫೈನಲ್ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸ ಮೂಡಿಸಿಕೊಂಡಿತು.
ಇದನ್ನೂ ಓದಿ : ind vs pak : ಭಾರತಕ್ಕಿಂತ ನಾವೇ ಸ್ಟ್ಟಾಂಗ್! ಪಾಕ್ ಬೌಲರ್ನ ಅತಿ ವಿಶ್ವಾಸ
ಪಂದ್ಯಾವಳಿಯ ಲೀಗ್ ಹಂತದಲ್ಲಿ ಭಾರತದ ತಂಡ ಜಪಾನ್ ವಿರುದ್ದ ಡ್ರಾ ಮಾಡಿಕೊಂಡಿತ್ತು. ಮಸಾಹಿ ಒಹಾಶಿ ನೇತೃತ್ವದ ಉತ್ಸಾಹಭರಿತ ತಂಡವು ಪಂದ್ಯಾವಳಿಯ ಆರಂಭದಲ್ಲಿ ಭಾರತ ವಿರುದ್ಧ 1-1 ಗೋಲುಗಳಿಂದ ಡ್ರಾ ಸಾಧಿಸಿತ್ತು. ಚಾಂಪಿಯನ್ಸ್ ಟ್ರೋಫಿಯ ಹಿಂದಿನ ಆವೃತ್ತಿಯಲ್ಲಿ ಜಪಾನ್ ಸೆಮಿಫೈನಲ್ನಲ್ಲಿ ಭಾರತವನ್ನು 5-3 ಅಂತರದಿಂದ ಸೋಲಿಸಿತ್ತು. ಆ ಸೋಲಿಗೆ ಈ ಪ್ರತಿಕಾರ ತೀರಿಸಿದೆ ಆತಿಥೇಯ ತಂಡ.
ಚೀನಾ ವಿರುದ್ಧ 2-1 ಗೆಲುವು ದಾಖಲಿಸಿದ ನಂತರ ಜಪಾನ್ ಸೆಮಿಫೈನಲ್ ಗೆ ಪ್ರವೇಶಿಸಿತ್ತು. ಅದಕ್ಕಿಂತ ಹಿಂದೆ ತಂಡವು ಎರಡು ಡ್ರಾ ಮತ್ತು ಎರಡು ಸೋಲುಗಳನ್ನು ದಾಖಲಿಸಿದ್ದರಿಂದ ಇದು ಪಂದ್ಯಾವಳಿಯಲ್ಲಿ ಅದು ಮೊದಲ ಗೆಲುವಾಗಿತ್ತು. ಪಾಕಿಸ್ತಾನಕ್ಕಿಂತ ವಿರುದ್ಧ ಗೋಲ್ ಮುನ್ನಡೆ ಅವಕಾಶ ಬಳಸಿಕೊಂಡು ಸೆಮಿಫೈನಲ್ ಗೆ ಪ್ರವೇಶ ಪಡೆದಿತ್ತು.