Site icon Vistara News

Ind vs Eng T20: ಸರಣಿ ರೋಹಿತ್‌ ಪಡೆಯ ಕೈವಶ

Ind vs Eng T20

ಬರ್ಮಿಂಗ್‌ಹ್ಯಾಮ್‌: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಪ್ರಭಾವಿ ಪ್ರದರ್ಶನ ನೀಡಿದ ಭಾರತ ತಂಡ ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯ (Ind vs Eng T20)ಎರಡನೇ ಪಂದ್ಯದಲ್ಲೂ ೪೯ ರನ್‌ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ಟಿ20 ಸರಣಿಯನ್ನೂ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದೆ.

ಇಲ್ಲಿನ ಎಜ್‌ಬಾಸ್ಟನ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 171 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ತಂಡ ಇನ್ನೂ ಮೂರು ಓವರ್‌ಗಳು ಬಾಕಿ ಇರುವಂತೆಯೇ ೧೨೧ ರನ್‌ಗಳಿಗೆ ಆಲ್‌ಔಟ್‌ ಆಯಿತು.

ಇದು ರೋಹಿತ್‌ ಶರ್ಮ ನೇತೃತ್ವದ ಭಾರತ ತಂಡಕ್ಕೆ ಸತತ ೧೪ ಟಿ೨೦ ಪಂದ್ಯಗಳ ಗೆಲವು. ಜತೆಗೆ ಇಂಗ್ಲೆಂಡ್‌ ವಿರುದ್ಧ ಸತತ ನಾಲು ಟಿ೨೦ ಸರಣಿ ವಿಜಯ. ಅದರಲ್ಲಿ ಎರಡು ಭಾರತದಲ್ಲಿ ಆಗಿದ್ದರೆ, ಇನ್ನೆರಡು ವಿಜಯ ಇಂಗ್ಲೆಂಡ್‌ ನೆಲದಲ್ಲಿಯೇ ಲಭಿಸಿತ್ತು.

ಬೌಲರ್‌ಗಳ ಪರಾಕ್ರಮ

ಬೃಹತ್‌ ಮೊತ್ತದ ಗುರಿ ಹಿಂಬಾಲಿಸಿದ ಇಂಗ್ಲೆಂಡ್‌ ತಂಡಕ್ಕೆ ಆರಂಭದಲ್ಲಿಯೇ ಭುವನೇಶ್ವರ್‌ ಕುಮಾರ್‌ (15 ರನ್‌ಗಳಿಗೆ 3 ವಿಕೆಟ್‌) ಆಘಾತ ನೀಡಿದ್ದರು. ದ್ವಿತೀಯ ಇನಿಂಗ್ಸ್‌ನ ಮೊಟ್ಟ ಮೊದಲ ಎಸೆತದಲ್ಲಿಯೇ ಜೇಸನ್ ರಾಯ್‌ ಅವರನ್ನು ಭುವನೇಶ್ವರ್‌ ಕುಮಾರ್‌ ಔಟ್‌ ಮಾಡಿದರು. ಇದರ ಬೆನ್ನಲ್ಲೆ ನಾಯಕ ಜೋಸ್‌ ಬಟ್ಲರ್(4) ಕೂಡ ಭುವಿಗೆ ವಿಕೆಟ್‌ ಒಪ್ಪಿಸಿದರು.ಮಧ್ಯಮ ಕ್ರಮಾಂಕದಲ್ಲಿ ಮೊಯೀನ್ ಅಲಿ (35) ಹಾಗೂ ಡೇವಿಡ್‌ ವಿಲ್ಲಿ(33*) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಡಾವಿಡ್‌ ಮಲಾನ್ (19), ಲಿಯಾಮ್‌ ಲಿವಿಂಗ್‌ಸ್ಟೋನ್(15), ಹ್ಯಾರಿ ಬ್ರೂಕ್(8) ಹಾಗೂ ಸ್ಯಾಮ್ ಕರನ್‌(2) ಭಾರತ ತಂಡದ ಬೌಲಿಂಗ್‌ ಪ್ರಭಾವಕ್ಕೆ ಮಂಕಾದರು. ಜಸ್‌ಪ್ರೀತ್‌ ಬುಮ್ರಾ ಹಾಗೂ ಯುಜ್ವೇಂದ್ರ ಚಹಲ್‌ ತಲಾ ಎರಡೆರಡು ವಿಕೆಟ್‌ ಪಡೆದುಕೊಂಡರು.

ಜಡೇಜಾ ಆಸರೆ

ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಹೊರತಾಗಿಯೂ ರವೀಂದ್ರ ಜಡೇಜಾ(46*) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 170 ರನ್‌ ಕಲೆ ಹಾಕಿತು. ಆ ಮೂಲಕ ಆತಿಥೇಯ ಇಂಗ್ಲೆಂಡ್‌ ತಂಡಕ್ಕೆ 171 ರನ್‌ ಸ್ಪರ್ಧಾತ್ಮಕ ಗುರಿ ನೀಡಿತ್ತು. ರೋಹಿತ್‌ ಶರ್ಮ ಜೊತೆ ರಿಷಭ್‌ ಪಂತ್‌ ಅವರನ್ನು ಇನಿಂಗ್ಸ್‌ ಆರಂಭಿಸಲು ಕಳುಹಿಸಿ ಟೀಮ್ ಮ್ಯಾನೇಜ್‌ಮೆಂಟ್‌ ನೂತನ ಪ್ರಯೋಗಕ್ಕೆ ಕೈ ಹಾಕಿತ್ತು. ಅದರಂತೆ ಈ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 49 ರನ್ ಗಳಿಸಿತು. ಆದರೆ, ಬಿರುಸಿನ ಆಟ ಪ್ರದರ್ಶಿಸುತ್ತಿದ್ದ ನಾಯಕ ರೋಹಿತ್ (36) ಹಾಗೂ ರಿಷಭ್‌ ಪಂತ್‌(26) ಅವರು ರಿಚರ್ಡ್‌ ಗ್ಲೀಸನ್‌ಗೆ ವಿಕೆಟ್‌ ಒಪ್ಪಿಸಿದರು.

ಇದನ್ನೂ ಓದಿ: ಹಾರ್ದಿಕ್‌ ಪಾಂಡ್ಯ ಯಾಕೆ Team India ನಾಯಕರಾಗಬೇಕು? ಅವರ ಸಾಮರ್ಥ್ಯಗಳೇನು?

ಇಂಗ್ಲೆಂಡ್‌ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ರಿಚರ್ಡ್‌ ಗ್ಲೀಸನ್‌ ಮೂರು ವಿಕೆಟ್‌ ಕಬಳಿಸಿದರೆ, ಕ್ರಿಸ್‌ ಜೋಡರ್ನ್‌ 4 ವಿಕೆಟ್‌ ಕಬಳಿಸುವ ಮೂಲಕ ತಮ್ಮ ಅತ್ಯುತ್ತಮ ಲಯವನ್ನು ಮುಂದುವರಿಸಿದ್ದರು.

ಸಂಕ್ಷಿಪ್ತ ಸ್ಕೋರ್‌
ಭಾರತ: 20 ಓವರ್‌ಗಳಿಗೆ 170-8 (ರವೀಂದ್ರ ಜಡೇಜಾ 46*, ರೋಹಿತ್ ಶರ್ಮಾ 31, ರಿಷಭ್‌ ಪಂತ್ 26; ರಿಚರ್ಡ್‌ 15 ಕ್ಕೆ 3, ಕ್ರಿಸ್‌ ಜೋರ್ಡಾನ್ 27ಕ್ಕೆ 4)

ಇಂಗ್ಲೆಂಡ್‌: 17 ಓವರ್‌ಗಳಿಗೆ 121/10 (ಡೇವಿಡ್‌ ವಿಲ್ಲೀ 32*, ಮೊಯೀನ್‌ ಅಲಿ 35; ಭುವನೇಶ್ವರ್‌ ಕುಮಾರ್‌ 15ಕ್ಕೆ 3, ಜಸ್‌ಪ್ರೀತ್‌ ಬುಮ್ರಾ 10ಕ್ಕೆ 2, ಯುಜ್ವೇಂದ್ರ ಚಹಲ್‌ 10 ಕ್ಕೆ 2)

ಇದನ್ನೂ ಓದಿ: 1st T20| ಹಾರ್ದಿಕ್‌ ಆಲ್‌ರೌಂಡ್‌ ಆಟ, ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಗೆದ್ದ ಭಾರತ

Exit mobile version