Site icon Vistara News

IND vs ENG ODI | ಬುಮ್ರಾ ಬೆಂಕಿ, ಭಾರತಕ್ಕೆ ಮೊದಲ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಜಯ

ಲಂಡನ್‌: ವೇಗದ ಬೌಲರ್‌ ಜಸ್‌ಪ್ರಿತ್‌ ಅವರ ಮಾರಕ ಬೌಲಿಂಗ್‌ (೭.೨ ಓವರ್‌ಗಳಲ್ಲಿ ೧೯ ರನ್‌ ನೀಡಿ ೬ ವಿಕೆಟ್‌) ಹಾಗೂ ರೋಹಿತ್‌ ಶರ್ಮ ೫೮ ಎಸೆತಗಳಲ್ಲಿ ಬಾರಿಸಿದ ಅಜೇಯ 76 ರನ್‌ಗಳ ನೆರವಿನಿಂದ ಮಿಂಚಿದ ಭಾರತ ತಂಡ INDvsENG ODI ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ೧೦ ವಿಕೆಟ್‌ಗಳ ಭರ್ಜರಿ ವಿಜಯ ದಾಖಲಿಸಿದೆ.

ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ೧-೦ ಮುನ್ನಡೆ ಪಡೆಯಿತು. ಇದು ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ ದಾಖಲಿಸಿದ ಮೊದಲ ೧೦ ವಿಕೆಟ್‌ ಜಯ.

ಕೆನಿಂಗ್ಟನ್‌ ಓವಲ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಭಾರತ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್‌ ಆರಂಭಿಸಿದ ಇಂಗ್ಲೆಂಡ್‌ ಭಾರತೀಯ ಬೌಲರ್‌ಗಳ ಸಂಘಟಿತ ದಾಳಿಗೆ ಬೆಚ್ಚಿ ೨೫.೨ ಓವರ್‌ಗಳಲ್ಲಿ ೧೧೦ ರನ್‌ಗಳಿಗೆ ಆಲ್‌ಔಟ್‌ ಆಯಿತು. ಸಣ್ಣ ಮೊತ್ತದ ಗುರಿ ಬೆನ್ನಟ್ಟಿದ ಭಾರತ ತಂಡ ೧೮.೪ ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ ೧೧೪ ರನ್‌ ಗಳಿಸಿ ಜಯ ದಾಖಲಿಸಿತು. ರೋಹಿತ್‌ ಶರ್ಮ (೭೫) ಅಜೇಯ ಅರ್ಧ ಶತಕ ದಾಖಲಿಸಿದರೆ, ಶಿಖರ್‌ ಧವನ್‌ ಔಟಾಗದೇ ೩೧ ರನ್‌ ಗಳಿಸಿದರು.

ಬುಮ್ರಾ ಬೆಂಕಿ

ಬ್ಯಾಟಿಂಗ್‌ ಆರಂಭಿಸಿದ ಇಂಗ್ಲೆಂಡ್‌ ತಂಡಕ್ಕೆ ಭಾರತದ ವೇಗಿಗಳು ಇನ್ನಿಲ್ಲದಂತೆ ಕಾಡಿದರು. ಅದರಲ್ಲೂ ಜಸ್‌ಪ್ರಿತ್‌ ಬುಮ್ರಾ ಅವರು ಆಂಗ್ಲ ಪಡೆಯ ಬ್ಯಾಟ್ಸ್‌ಮನ್‌ಗಳಾದ ಜೇಸನ್‌ ರಾಯ್‌ ಅವರನ್ನು ಶೂನ್ಯಕ್ಕೆ ಔಟ್‌ ಮಾಡಿದರೆ, ಜಾನಿ ಬೈರ್‌ಸ್ಟೋವ್‌ ಅವರು ೭ ರನ್‌ಗಳಿಗೆ ಇನಿಂಗ್ಸ್‌ ಮುಗಿಸುವಂತೆ ನೋಡಿಕೊಂಡರು. ಬಳಿಕ ಜೋ ರೂಟ್‌ ಹಾಗೂ ಲಿಯಾಮ್‌ ಲಿವಿಂಗ್‌ಸ್ಟನ್‌ ಅವರನ್ನೂ ಶೂನ್ಯಕ್ಕೆ ವಾಪಸ್‌ ಕಳುಹಿಸಿದರು. ಅದಲ್ಲದೆ, ೨೧ ರನ್‌ ಗಳಿಸಿದ್ದ ಡೇವಿಡ್‌ ವಿಲ್ಲಿ ಹಾಗೂ ೧೫ ರನ್‌ ಬಾರಿಸಿದ ಬ್ರೈಡನ್‌ ಕರ್ಸೆ ವಿಕೆಟ್‌ ಪಡೆಯುವ ಮೂಲಕ ಭಾರತ ತಂಡಕ್ಕೆ ಅರಂಭದಲ್ಲಿ ಮುನ್ನಡೆ ತಂದುಕೊಟ್ಟರು. ಮೊಹಮ್ಮದ್‌ ಶಮಿಯೂ ೩೧ ರನ್‌ ನೀಡಿ ೩ ವಿಕೆಟ್‌ ತಮ್ಮದಾಗಿಸಿಕೊಂಡರು. ಪ್ರಸಿದ್ಧ್‌ ಕೃಷ್ಣ ಒಂದು ವಿಕೆಟ್‌ ಕಬಳಿಸಿದರು.

ಸ್ಕೋರ್‌ ವಿವರ

ಇಂಗ್ಲೆಂಡ್‌: 25.2 ಓವರ್‌ಗಳಲ್ಲಿ ೧೧೦ (ಜೋಸ್‌ ಬಟ್ಲರ್‌ ೩೦, ಡೇವಿಡ್‌ ವಿಲ್ಲಿ ೨೧, ಮೊಯೀನ್‌ ಅಲಿ ೧೪, ಬ್ರೈಡನ್‌ ಕರ್ಸೆ ೧೫; ಜಸ್‌ಪ್ರಿತ್‌ ಬುಮ್ರಾ ೧೯ಕ್ಕೆ೬, ಮೊಹಮ್ಮದ್‌ ಶಮಿ ೩೧ಕ್ಕೆ೩).

ಭಾರತ: 18.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ ೧೧೪ (ರೋಹಿತ್‌ ಶರ್ಮ ೭೬, ಶಿಖರ್‌ ಧವನ್‌ ೩೧).

ಇತ್ತಂಡಗಳ ನಡುವೆ ಗುರುವಾರ ಲಾರ್ಡ್ಸ್‌ನಲ್ಲಿ ಎರಡನೇ ಪಂದ್ಯ ನಡೆಯಲಿದೆ.

Exit mobile version