ದುಬೈ: ಕಳೆದ ವರ್ಷ ಫಿಫಾ ಶ್ರೇಯಾಂಕದಲ್ಲಿ(Fifa Ranking 2024) ಅಗ್ರ ನೂರರಲ್ಲಿ ಸ್ಥಾನ ಸಂಪಾದಿಸಿದ್ದ ಭಾರತ(fifa ranking 2024 india) ಈ ಬಾರಿಯ ಶ್ರೇಯಾಂಕದಲ್ಲಿ ಭಾರಿ ಕುಸಿತ ಕಂಡಿದೆ. ಇದಕ್ಕೆ ಕಾರಣ ಎಎಫ್ಸಿ ಏಶ್ಯನ್ ಕಪ್ನಲ್ಲಿ ತೋರಿದ ಕಳಪೆ ಪ್ರದರ್ಶನ.
ನೂತನ ಶ್ರೇಯಾಂಕದಲ್ಲಿ ಭಾರತೀಯ ಪುರುಷರ ಫುಟ್ಬಾಲ್ ತಂಡ(indian football team) 15 ಸ್ಥಾನಗಳ ಕುಸಿತ ಕಂಡು 117ನೇ ಸ್ಥಾನ ಪಡೆದಿದೆ. ಕಳೆದ ತಿಂಗಳು ದೋಹಾದಲ್ಲಿ ನಡೆದಿದ್ದ ಎಎಫ್ಸಿ ಏಶ್ಯನ್ ಕಪ್ನಲ್ಲಿ ಭಾರತ ಮೊದಲ ಸುತ್ತಿನಲ್ಲೇ ಸೋತು ಕೂಟದಿಂದ ನಿರ್ಗಮಿಸಿತ್ತು. ಭಾರತವು ಆಸ್ಟ್ರೇಲಿಯಾ, ಉಝ್ಬೇಕಿಸ್ತಾನ ಹಾಗೂ ಸಿರಿಯಾ ವಿರುದ್ಧ ಪಂದ್ಯಗಳನ್ನು ಆಡಿತ್ತು. ಆದರೆ ಈ ಪಂದ್ಯಗಳಲ್ಲಿ ಕನಿಷ್ಠ ಒಂದು ಗೋಲು ಕೂಡ ಗಳಿಸಲು ಸಾಧ್ಯವಾಗಿರಲಿಲ್ಲ. ಈ ಕಳಪೆ ಪ್ರದರ್ಶನದ ಕಾರಣ ಶ್ರೇಯಾಂಕದಲ್ಲಿ ಕುಸಿತ ಕಂಡಿದೆ. ಭಾರತವನ್ನು ಹೊರತುಪಡಿಸಿ ಈ ಗುಂಪಿನಲ್ಲಿದ್ದ ಎಲ್ಲ ತಂಡಗಳು ಅಂತಿಮ-16ರ ಸುತ್ತು ತಲುಪಿದ್ದವು.
2021ರ ಬಳಿಕ ಭಾರತ ಶ್ರೇಯಾಂದಲ್ಲಿ ಕಂಡ ದೊಡ್ಡ ಕುಸಿತ ಇದಾಗಿದೆ. ಭಾರತವು ಈ ಹಿಂದೆ ಮುಖ್ಯ ಕೋಚ್ ಇಗೊಗ್ ಸ್ಟಿಮ್ಯಾಕ್ ಕೋಚಿಂಗ್ನಲ್ಲಿ 107ನೇ ರ‍್ಯಾಂಕಿಗೆ ಕುಸಿದಿತ್ತು. ಖತರ್ ತಂಡ 31 ಸ್ಥಾನ ಮೇಲಕ್ಕೇರಿ 37ನೇ ಸ್ಥಾನಕ್ಕೆ ಬಂದು ನಿಂತಿದೆ. ಜೋರ್ಡನ್ 17 ಸ್ಥಾನ ಭಡ್ತಿ ಪಡೆದು 70ನೇ ಸ್ಥಾನ ಅಲಂಕರಿಸಿದೆ. ಕಳೆದ ವರ್ಷ ಸುನೀಲ್ ಚೇಟ್ರಿ ಸಾರಥ್ಯದ ಭಾರತ ಫುಟ್ಬಾಲ್ ತಂಡ ಉತ್ತಮ ಪ್ರದರ್ಶನ ತೋರುವ ಮೂಲಕ ಹಲವು ಟೂರ್ನಿಗಳನ್ನು ಗೆದ್ದಿತ್ತು. ಇದೀಗ ಮತ್ತೆ ಸೋಲಿನ ಸುಳಿಗೆ ಸಿಲುಕಿದೆ.
ಇದನ್ನೂ ಓದಿ ಮುಂದಿನ ವರ್ಷ ಕೇರಳದಲ್ಲಿ ನಡೆಯಲಿದೆ ಭಾರತ-ಅರ್ಜೆಂಟೀನಾ ಫುಟ್ಬಾಲ್ ಪಂದ್ಯ
ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಅರ್ಜೆಂಟೀನಾ
ಫಿಫಾ ವಿಶ್ವಕಪ್ ಫುಟ್ಬಾಲ್(fifa world cup) ಚಾಂಪಿಯನ್ ಅರ್ಜೆಂಟೀನಾ(Argentina football) ತಂಡ ಇದೇ ವರ್ಷ ಪ್ಯಾರಿಸ್ನಲ್ಲಿ(Paris Olympics 2024) ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ. ಬಲಿಷ್ಠ ಬ್ರೆಝಿಲ್ ತಂಡವನ್ನು 1-0 ಅಂತರದಿಂದ ಮಣಿಸಿ ಈ ಸಾಧನೆ ತೋರಿದೆ. ಸೋಲು ಕಂಡ ಬ್ರೆಝಿಲ್ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ರಿಯೊ ಡಿ ಜನೈರೊ ಹಾಗೂ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಬ್ರೆಝಿಲ್ ಚಿನ್ನದ ಪದಕ ಗೆದ್ದುಕೊಂಡಿತ್ತು.
ದಕ್ಷಿಣ ಅಮೆರಿಕದ ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ಜೇವಿಯರ್ ಮಸ್ಕರಾನೊರಿಂದ ತರಬೇತಿ ಪಡೆದಿರುವ ಅಂಡರ್-23 ಅರ್ಜೆಂಟೀನಾ ತಂಡದ ಪರ ಲುಸಿಯಾನೊ ಗೊಂಡೌ 78ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ಅರ್ಜೆಂಟೀನಾ ತನ್ನ ಅಂತಿಮ ಗ್ರೂಪ್ ಅಭಿಯಾನವನ್ನು 3 ಪಂದ್ಯಗಳಲ್ಲಿ ಐದು ಅಂಕವನ್ನು ಗಳಿಸುವ ಮೂಲಕ ಅಂತ್ಯಗೊಳಿಸಿದೆ.
ಅರ್ಜೆಂಟೀನಾ ಫುಟ್ಬಾಲ್ ತಂಡ 2004ರ ಅಥೆನ್ಸ್ ಒಲಿಂಪಿಕ್ಸ್ ಹಾಗೂ 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಜಯಿಸಿತ್ತು. 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಲಿಯೋನೆಲ್ ಮೆಸ್ಸಿ ನಾಯಕತ್ವದಲ್ಲಿ ಅರ್ಜೆಂಟೀನಾ ಚಿನ್ನ ಜಯಿಸಿತ್ತು. ಹಾಲಿ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿರುವ ಅರ್ಜೆಂಟೀನಾ ತಂಡದ ಸಾಮರ್ಥ್ಯವನ್ನು ನೋಡುವಾಗ ಒಲಿಂಪಿಕ್ಸ್ನಲ್ಲಿಯೂ ಚಿನ್ನ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿಕೊಂಡಿದೆ.