Site icon Vistara News

WTC Final 2023 : ಸೋಲಿನ ಬೆನ್ನಲ್ಲೇ ಆಟಗಾರರಿಗೆ ಆಘಾತ, ಪಂದ್ಯದ ಸಂಭಾವನೆ ಒಂದೂ ಪೈಸೆಯೂ ಸಿಗಲ್ಲ!

Team India At WTC Final

#image_title

ಲಂಡನ್​: ದಿ ಓವಲ್​ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​​ ಫೈನಲ್ ಪಂದ್ಯದ ವೇಳೆ ನಿಧಾನಗತಿಯ ಓವರ್ ರೇಟಿಂಗ್ ಕಾಯ್ದುಕೊಂಡಿದ್ದಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಭಾರತ ತಂಡಕ್ಕೆ ಪಂದ್ಯದ ಶುಲ್ಕ ಶೇಕಡಾ 100ರಷ್ಟು ದಂಡ ವಿಧಿಸಿದೆ. ಹೀಗಾಗಿ ಸೋಲಿನ ಸುಳಿಗೆ ಬೇಸರದಲ್ಲಿದ್ದ ಭಾರತ ತಂಡದ ಆಟಗಾರರಿಗೆ ಮತ್ತೊಂದು ಆಘಾತ ಎದುರಾಗಿದೆ. ಇದೇ ವೇಳೆ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿರುವ ಪ್ರಶಸ್ತಿ ವಿಜೇತ ಆಸ್ಟ್ರೇಲಿಯಾ ತಂಡಕ್ಕೂ ಶೇಕಡಾ 80ರಷ್ಟು ದಂಡ ವಿಧಿಸಲಾಗಿದೆ.

ಟೀಮ್ ಇಂಡಿಯಾವು ನಿಗದಿತ ಓವರ್​​ಗಳು ಮುಕ್ತಾಯಗೊಳ್ಳಬೇಕಾದ ಅವಧಿಯ ವೇಳೆ ಐದು ಓವರ್​​ಗಳ ಕೊರತೆ ಎದುರಿಸಿದ್ದರು. ಹೀಗಾಗಿ ಐಸಿಸಿ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ದಂಡ ವಿಧಿಸಿದ್ದಾರೆ. ಕನಿಷ್ಠ ಓವರ್ ರೇಟ್ ತಪ್ಪುಗಳಿಗೆ ಸಂಬಂಧಿಸಿದ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲವಾದ ತಂಡದ ಪ್ರತಿ ಓವರ್​​ಗೆ ಪಂದ್ಯದ ಶುಲ್ಕದ ಶೇಕಡಾ 20ರಷ್ಟು ದಂಡ ವಿಧಿಸಲಾಗುತ್ತದೆ. ಭಾರತ ತಂಡ ಐದು ಓವರ್​​ಗಳ ಕೊರತೆ ಎದುರಿಸಿದ್ದ ಕಾರಣ ಅಷ್ಟೂ ಶುಲ್ಕವನ್ನು ಕಟ್ಟಬೇಕಾಗಿದೆ.

ಇತ್ತಂಡಗಳ ನಾಯಕರಾದ ರೋಹಿತ್ ಶರ್ಮಾ ಮತ್ತು ಪ್ಯಾಟ್ ಕಮಿನ್ಸ್ ತಮ್ಮ ತಪ್ಪನ್ನು ಮ್ಯಾಚ್​ ರೆಫರಿ ಮುಂದೆ ಒಪ್ಪಿಕೊಂಡಿದ್ದಾರೆ. ನಿರ್ದೇನಗಳಿಗೂ ಅವರು ಸಮ್ಮತಿ ಸೂಚಿಸಿದ್ದಾರೆ. ಹೀಗಾಗಿ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : WTC Final 2023 : ದ್ರಾವಿಡ್​ ಸಾಮರ್ಥ್ಯದ ಬಗ್ಗೆ ಕಳಪೆ ಕಾಮೆಂಟ್​ ಮಾಡಿದ ಪಾಕಿಸ್ತಾನದ ಮಾಜಿ ಆಟಗಾರ!

ಓವಲ್​ನಲ್ಲಿ ನಡೆದ ಪಂದ್ಯದ ಕೊನೇಯ ಇನಿಂಗ್ಸ್​ನಲ್ಲಿ ಭಾರತ ತಂಡಕ್ಕೆ 444 ರನ್​​ಗಳ ಗೆಲುವಿನ ಗುರಿ ಎದುರಾಗಿತ್ತು. ಆದರೆ ಭಾರತ 234 ರನ್​​ಗಳಿಗೆ ಆಲೌಟ್ ಆದ ಕಾರಣ ಆಸ್ಟ್ರೇಲಿಯಾ 209 ರನ್​​ಗಳಿಂದ ಗೆದ್ದು ಮೊದಲ ಡಬ್ಲ್ಯುಟಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು. ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ಅವರ ಆಕರ್ಷಕ ಶತಕಗಳ ನೆರವಿನಿಂದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್​​ನಲ್ಲಿ ಆಸ್ಟ್ರೇಲಿಯಾ ತಂಡ 469 ರನ್​ ಬಾರಿಸಿತ್ತು. ಹೆಡ್ 174 ಎಸೆತಗಳಲ್ಲಿ 163 ರನ್ ಗಳಿಸಿದರೆ, ಸ್ಮಿತ್ 268 ಎಸೆತಗಳಲ್ಲಿ 121 ರನ್ ಗಳಿಸಿದ್ದರು. ಅಜಿಂಕ್ಯ ರಹಾನೆ (89) ಮತ್ತು ಶಾರ್ದೂಲ್ ಠಾಕೂರ್ (51) ಅವರ ಅರ್ಧಶತಕದ ನೆರವಿನಿಂದ ಭಾರತ ಮೊದಲ ಇನಿಂಗ್ಸ್​ನಲ್ಲಿ 296 ರನ್ ಬಾರಿಸಿತ್ತು.

ಒಂದು ಹಂತದಲ್ಲಿ ಬೃಹತ್ ಗುರಿ ಬೆನ್ನಟ್ಟುವ ವಿಶ್ವಾಸ ಮೂಡಿಸಿದ್ದ ಭಾರತ, ಅಂತಿಮ ದಿನ ಕೇವಲ 55 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಈ ಪ್ರಶಸ್ತಿ ಮೂಲಕ ಮೂಲಕ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ವಿಶ್ವ ಕಪ್​ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಆಸ್ಟ್ರೇಲಿಯಾ ಪಾತ್ರವಾಯಿತು.

Exit mobile version