Site icon Vistara News

Tiger Census : ವಿಶ್ವದ ಹುಲಿಗಳ ಸಂಖ್ಯೆಯಲ್ಲಿ ಭಾರತದ್ದೇ ಸಿಂಹಪಾಲು!

india-has-the-lions-share-of-tigers-in-the-world

#image_title

ಬೆಂಗಳೂರು: ಭಾರತ ಹುಲಿಗಳ ತವರೂರು. ನಮ್ಮ ದೇಶದಲ್ಲಿದ್ದಷ್ಟು ಹುಲಿಗಳ ವಿಶ್ವದ ಯಾವ ದೇಶದಲ್ಲೂ ಇಲ್ಲ. ಒಟ್ಟು ಸಂಖ್ಯೆಯಲ್ಲಿ ಕನಿಷ್ಠ ಪಕ್ಷ ಭಾರತದ ಸನಿಹ ಕೂಡ ಬಂದಿಲ್ಲ. ಹೀಗಾಗಿ ಹುಲಿಗಳ ಆವಾಸದ ವಿಚಾರಕ್ಕೆ ಬಂದಾಗ ಭಾರತದ್ದೇ ಸಿಂಹಪಾಲು. ಅದೇ ಕಾರಣಕ್ಕೆ ಹುಲಿ ಭಾರತದ ರಾಷ್ಟ್ರೀಯ ಪ್ರಾಣಿ ಎನಿಸಿಕೊಂಡಿರುವುದು. 2018ರ ವರದಿ ಪ್ರಕಾರ 2,967 ಹುಲಿಗಳು ಭಾರತದಲ್ಲಿವೆ. ಅಂದರೆ ವಿಶ್ವದ ಒಟ್ಟು ಹುಲಿಗಳ ಸಂಖ್ಯೆಯ ಶೇಕಡಾ 70. 2023ರ ವರ್ಷಾರಂಭದಲ್ಲಿ ಕೇಂದ್ರ ಸರಕಾರ ಸುಪ್ರೀಮ್​ ಕೋರ್ಟ್​ಗೆ ಸಲ್ಲಿಸಿರುವ ಈ ಪಟ್ಟಿಯಲ್ಲಿ (Tiger Census) ಈ ಮಾಹಿತಿ ಬಹಿರಂಗಗೊಂಡಿದೆ. ಅಲ್ಲದೆ, ಒಟ್ಟು 53 ಹುಲಿ ಸಂರಕ್ಷಣಾ ಪ್ರದೇಶಗಳಿವೆ ಎಂಬುದಾಗಿಯೂ ವಿವರಣೆ ನೀಡಲಾಗಿದೆ.

1973ರಲ್ಲಿ ಆಗಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಪ್ರಾಜೆಕ್ಟ್​ ಟೈಗರ್​ಗೆ ಚಾಲನೆ ಕೊಟ್ಟಿದ್ದರು. ಆ ಬಳಿಕ ವರ್ಷದಿಂದ ವರ್ಷಕ್ಕೆ ಹುಲಿಗಳ ಸಂಖ್ಯೆ ಹೆಚ್ಚಳವಾಗಲು ಆರಂಭಗೊಂಡಿತು. 2018ರ ಗಣತಿ ವೇಳೆಗೆ 3000ದ ಸನಿಹ ಬಂದಿದ್ದು, ಭಾರತದ ವಿಶ್ವದಲ್ಲಿಯೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಾಜೆಕ್ಟ್​ ಟೈಗರ್​ ಹಾಗೂ ಹುಲಿ ಗಣತಿ ಕುರಿತು ಸುಪ್ರೀಮ್​ ಕೋರ್ಟ್​ಗೆ ಮಾಹಿತಿ ನೀಡುವ ವೇಳೆ ಹೆಚ್ಚುವರಿ ಸಾಲಿಸಿಟರ್​ ಜನರಲ್​ ಐಶ್ವರ್ಯ ಭಾಟಿ ಅವರು ಅಂಕಿ- ಅಂಶಗಳ ಮೂಲಕ ಭಾರತದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ವರದಿಯಂತೆ, 2020ರ ವೇಳೆಗೆ ನಾಲ್ಕೇ ಹಂತದ ಹುಲಿ ಗಣತಿಯನ್ನು ಮಾಡಲಾಗಿದೆ. 2014ರ ಗಣತಿ ವೇಳೆಗೆ 2,226 ಹುಲಿಗಳಿದ್ದವು. 2010ರಲ್ಲಿ 1,706 ಹಾಗೂ 2006ರಲ್ಲಿ 1411 ಹುಲಿಗಳಿದ್ದವು. ಈ ಲೆಕ್ಕಾಚಾರದ ಪ್ರಕಾರ 12 ವರ್ಷಗಳ ಅವಧಿಯಲ್ಲಿ ಹುಲಿಗಳ ಸಂಖ್ಯೆ ದ್ವಿಗುಣಗೊಂಡಿವೆ. ಅದೇ ರೀತಿ ವಾರ್ಷಿಕವಾಗಿ ಹುಲಿಗಳ ಸಂಖ್ಯೆ ಶೇಕಡಾ 6ರಷ್ಟು ಏರಿಕೆಯಾಗಿದೆ.

ಚಿರತೆ ಸಂಖ್ಯೆಯಲ್ಲೂ ಗಣನೀಯ ಏರಿಕೆ?

ಕೋರ್ಟ್​​ಗೆ ಮಾಹಿತಿ ಸಲ್ಲಿಸುವಾಗ ಭಾರತದಲ್ಲಿರುವ ಚಿರತೆಯ ಸಂಖ್ಯೆಯ ವಿವರವನ್ನೂ ನೀಡಲಾಗಿದೆ. ಭಾರತದಲ್ಲಿ ಒಟ್ಟು 12, 528 ಚಿರತೆಗಳಿದ್ದು, 2014ರ ಗಣತಿಗೆ ಹೋಲಿಕೆ ಮಾಡಿದಾಗ ಶೇಕಡಾ 60ರಷ್ಟು ಏರಿಕೆಯಾಗಿದೆ.

ಏಪ್ರಿಲ್​ 9ರಂದು ಹುಲಿಗಣತಿ ಬಿಡುಗಡೆ

ಬಹನಿರೀಕ್ಷಿತ ಹುಲಿ ಗಣತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್​ 9ರಂದು ಮೈಸೂರಿನಲ್ಲಿ ಅನಾವರಣ ಮಾಡಲಿದ್ದಾರೆ. ಪ್ರಾಜೆಕ್ಟ್ ಟೈಗರ್​ನ ಸುವರ್ಣ ಮಹೋತ್ಸವದ (50 ವರ್ಷ) ಹಿನ್ನೆಲೆಯಲ್ಲಿ ಗಣತಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಬಾರಿಯ ಗಣತಿಯಲ್ಲಿ ಅತಿ ಹೆಚ್ಚು ಸಂಖ್ಯೆಯ ಹುಲಿಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೇ ನಂಬರ್​ ಸ್ಥಾನ ಪಡೆಯಲಿದೆ ಎನ್ನಲಾಗಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್​ಟಿಸಿಎ) ಪ್ರಕಾರ ಈ ಬಾರಿ ಹುಲಿ ಗಣತಿಯಲ್ಲಿ ಮೊದಲ ಸ್ಥಾನ ಪಡೆಯಲು ಕರ್ನಾಟಕ ಮತ್ತು ಮಧ್ಯ ಪ್ರದೇಶದ ನಡುವೆ ಪೈಪೋಟಿಯಿದೆ. ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಜಾಸ್ತಿಯಾಗಿದೆ. ಹೊಸ ಪ್ರದೇಶಗಳಲ್ಲಿ ಹುಲಿಗಳು ಕಾಣಿಸಿಕೊಂಡಿವೆ. ಅದರಲ್ಲೂ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು 550ರಿಂದ 600 ಹುಲಿಗಳು ಇರುವ ಸಾಧ್ಯತೆಗಳಿವೆ ಎಂದು ಎನ್​ಟಿಸಿಎ ಮೂಲಗಳು ತಿಳಿಸಿವೆ.

ಏನಿದು ಪ್ರಾಜೆಕ್ಟ್​ ಟೈಗರ್​?

ಪ್ರಾಜೆಕ್ಟ್​ ಟೈಗರ್​ 1973ರಲ್ಲಿ ಆರಂಭಗೊಂಡಿತ್ತು. ಆಗಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ 1973ರಲ್ಲಿ ಈ ಯೋಜನೆಗೆ ಚಾಲನೆ ಕೊಟ್ಟಿದ್ದರು. ಹುಲಿ ಬೇಟೆಯ ಪ್ರಕರಣಗಳು ಹೆಚ್ಚಾದ ಕಾರಣ ಹುಲಿಗಳ ಸಂಖ್ಯೆ ಭಾರತದಲ್ಲಿ ಗಣನೀಯವಾಗಿ ಕಡಿಮೆಯಾಗಿತ್ತು. ಹೀಗಾಗಿ ಪ್ರಾಜೆಕ್ಟ್​ ಟೈಗರ್​ ಮೂಲಕ ಹುಲಿ ಸಂರಕ್ಷಣೆ ಆರಂಭಿಸಲಾಯಿತು. ವನ್ಯ ಜೀವಿ ಸಂರಕ್ಷಣಾ ಕಾಯ್ಕೆ 1972ರ ಅಡಿ ಗರಿಷ್ಠ ರಕ್ಷಣೆ ನೀಡಲಾಯಿತು.

ಕರ್ನಾಟಕ ಹೇಗೆ ನಂಬರ್​ ಒನ್​?

ಈ ಬಾರಿ ಗಣತಿಯಲ್ಲಿ ಕರ್ನಾಟಕ ನಂಬರ್ ಒನ್​ ಸ್ಥಾನ ಪಡೆಯುವುದಕ್ಕೆ ಹಲವು ಕಾರಣಗಳಿವೆ. 2018ರ ಜನಗಣತಿಯಲ್ಲಿ ಕರ್ನಾಟಕ ಎರಡನೇ ಸ್ಥಾನ ಪಡೆದುಕೊಂಡಿತ್ತು. ಕರ್ನಾಟಕದಲ್ಲಿ 524 ಹುಲಿಗಳಿದ್ದರೆ, 526 ಹುಲಿಗಳೊಂದಿಗೆ ಮಧ್ಯಪ್ರದೇಶ ಮೊದಲ ಸ್ಥಾನ ಪಡೆದುಕೊಂಡಿತ್ತು. ಆದರೆ, ಇತ್ತೀಚಿನ ವರದಿ ಪ್ರಕಾರ ಮಧ್ಯಪ್ರದೇಶದಲ್ಲಿ ಹೆಚ್ಚು ಹುಲಿಗಳು ಸತ್ತಿವೆ. 2023ರಲ್ಲಿಯೇ ಮಧ್ಯಪ್ರದೇಶದಲ್ಲಿ 9 ಹುಲಿಗಳು ಸತ್ತಿದ್ದರೆ ಕರ್ನಾಟಕದಲ್ಲಿ ಕೇವಲ 2 ಹುಲಿಗಳು ಮೃತಪಟ್ಟಿದ್ದವು. ಮಹಾರಾಷ್ಟ್ರದಲ್ಲಿ 7, ರಾಜಸ್ಥಾನದಲ್ಲಿ 3 ಹಾಗೂ ಉತ್ತರಾಖಂಡದಲ್ಲಿ 3 ಹಾಗೂ ಕೇರಳ ಹಾಗೂ ಅಸ್ಸಾಮ್​ನಲ್ಲಿ ತಲಾ ಒಂದು ಹುಲಿ ಸತ್ತಿದ್ದವು.

Exit mobile version