ಸಿಡ್ನಿ: ಟೀಮ್ ಇಂಡಿಯಾದ ಮುಖ್ಯ ಕೋಚ್(India Head Coach) ಆಗಿ ಯಾರು ಆಯ್ಕೆ ಆಗುತ್ತಾರೆ ಎನ್ನುವ ಕುತೂಹಲ ಒಂದೆಡೆಯಾದರೆ, ಹಲವು ಮಾಜಿ ವಿದೇಶಿ ಆಟಗಾರರು ಭಾರತ ತಂಡದ ಕೋಚಿಂಗ್ ಬಗ್ಗೆ ಆಸಕ್ತಿ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯದ ಮಾಜಿ ಕೋಚ್ ಜಸ್ಟಿನ್ ಲ್ಯಾಂಗರ್(Justin Langer) ನೀಡಿದ ಹೇಳಿಕೆಯೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕೆಲವು ದಿನಗಳ ಹಿಂದೆ ಭಾರತ ತಂಡದ ಕೋಚ್ ಆಗುವ ಬಗ್ಗೆ ಬಹಳ ಆಸಕ್ತಿ ಹೊಂದಿದ್ದೇನೆ ಎಂದಿದ್ದ, ಲ್ಯಾಂಗರ್, ಇದೀಗ ಕೋಚಿಂಗ್ ಬಗ್ಗೆ ಕೆ.ಎಲ್ ರಾಹುಲ್ ಜತೆ ನಡೆಸಿದ ಚರ್ಚೆಯನ್ನು ಬಹಿರಂಗಪಡಿಸಿದ್ದಾರೆ. “ನಾನು ರಾಹುಲ್ ಜತೆ ಭಾರತ ತಂಡದ ಕೋಚಿಂಗ್ ಬಗ್ಗೆ ಚರ್ಚಿಸುವ ವೇಳೆ ಅವರು ನನಗೆ ಉಪಯುಕ್ತ ಮಾಹಿತಿ ನೀಡಿದರು. ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಎದುರಿಸುವ ‘ರಾಜಕೀಯ ಮತ್ತು ಒತ್ತಡ’ ಯಾವುದೇ ಐಪಿಎಲ್ ಕೋಚ್‌ಗಿಂತ ಸುಮಾರು ಸಾವಿರ ಪಟ್ಟು ಹೆಚ್ಚಾಗಿದೆ” ಎಂದು ಹೇಳಿರುವುದಾಗಿ ಲ್ಯಾಂಗರ್ ತಿಳಿಸಿದ್ದಾರೆ.
“ಆಸ್ಟ್ರೇಲಿಯಾ ತಂಡದೊಂದಿಗೆ ನಾಲ್ಕು ವರ್ಷಗಳ ಕಾಲ ನಾನು ಎಲ್ಲ ಒತ್ತಡಗಳನ್ನು ನಿಭಾಯಿಸಿದ್ದೇನೆ. ಇದರಿಂದ ನಾನು ದಣಿದಿದ್ದೇನೆ. ರಾಹುಲ್ ನೀಡಿದ್ದು ಉತ್ತಮ ಸಲಹೆಯಾಗಿದೆ ಎಂದು ನಾನು ಊಹಿಸುತ್ತೇನೆ” ಎಂದು ಹೇಳುವ ಮೂಲಕ ಕೋಚಿಂಗ್ ಹುದ್ದೆಗೆ ಅರ್ಜಿಸಲ್ಲಿಸುವ ಕಾರ್ಯದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಂತಿದೆ. ಗುರುವಾರವಷ್ಟೇ ರಿಕಿ ಪಾಂಟಿಂಗ್, ಇಂದು(ಶುಕ್ರವಾರ) ಆರ್ಸಿಬಿ ಕೋಚ್ ಜಸ್ಟೀನ್ ಲ್ಯಾಂಗರ್ ಕೂಡ ಟೀಮ್ ಇಂಡಿಯಾದ ಕೋಚ್ ಆಫರ್ ತಿರಸ್ಕರಿಸಿದ್ದಾರೆ.
ಇದನ್ನೂ ಓದಿ India Head Coach: ಭಾರತ ತಂಡದ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ ಎಂದ ಆರ್ಸಿಬಿ ಕೋಚ್
ತಿರುಗೇಟು ಕೊಟ್ಟ ಜಯ್ ಶಾ
ಆಸ್ಟ್ರೇಲಿಯಾದ ಮಾಜಿ ಆಟಗಾರರು ಭಾರತ ತಂಡದ ಕೋಚ್ ಹುದ್ದೆಯ ಬಗ್ಗೆ ನಿರಾಸಕ್ತಿಕ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಎಲ್ಲ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರ ಹುದ್ದೆಗೆ ನಾವು ಯಾವುದೇ ಆಸ್ಟ್ರೇಲಿಯಾದವರನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಕೋಚಿಂಗ್ ಹುದ್ದೆಯ ಬಗ್ಗೆ ನೀಡುತ್ತಿರುವ ವದಂತಿಗಳನ್ನು ನಂಬಬಾರದು ಎಂದು ತಿಳಿಸಿದ್ದಾರೆ.
“ನಾನು ಅಥವಾ ಬಿಸಿಸಿಐ ಯಾವುದೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರನ್ನು ಕೋಚಿಂಗ್ ಆಫರ್‌ನೊಂದಿಗೆ ಸಂಪರ್ಕಿಸಿಲ್ಲ. ಕೆಲವು ಮಾಧ್ಯಮ ವಿಭಾಗಗಳಲ್ಲಿ ಪ್ರಸಾರವಾಗುವ ವರದಿಗಳು ಸಂಪೂರ್ಣವಾಗಿ ತಪ್ಪಾಗಿದೆ. ನಮ್ಮ ರಾಷ್ಟ್ರೀಯ ತಂಡಕ್ಕೆ ಸರಿಯಾದ ತರಬೇತುದಾರನನ್ನು ಹುಡುಕುವುದು ಒಂದು ನಿಖರವಾದ ಮತ್ತು ಸಂಪೂರ್ಣ ಪ್ರಕ್ರಿಯೆಯಾಗಿದೆ” ಎಂದು ತಿಳಿಸಿದ್ದಾರೆ.
ನೂತನ ಕೋಚ್ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯೂ ಈ ಕೋಚ್ಗೆ ಸಿಗಲಿದೆ. ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಇದೇ 27ರಂದು ಕೊನೆಯ ದಿನವಾಗಿದೆ. ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ. ಆಯ್ಕೆಯಾದ ಹೊಸ ಕೋಚ್ ಟಿ20 ವಿಶ್ವಕಪ್ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.