ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ತಂಡಗಳಿಗೆ ಕೋಚಿಂಗ್ ಮಾಡಿದ ಅನುಭವ ಹೊಂದಿರುವ, ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೋಚ್ ಆಗಿದ್ದ, ಪ್ರಸ್ತುತ ಆರ್ಸಿಬಿ ತಂಡದ ಮುಖ್ಯ ಕೋಚ್, ಜಿಂಬಾಬ್ವೆಯ ಮಾಜಿ ನಾಯಕ ಆ್ಯಂಡಿ ಫ್ಲವರ್(Andy Flower) ಅವರು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ(India Head Coach) ಅರ್ಜಿ ಸಲ್ಲಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ಸೋಲು ಕಂಡಿತ್ತು. ಸೋಲಿನ ಬಳಿಕ ಮಾತನಾಡಿದ ಫ್ಲವರ್, ನಾನು ಭಾರತ ತಂಡದ ಕೋಚ್ ಹುದ್ದಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಕೆಲವರು ನನ್ನಲ್ಲಿ ಪ್ರಶ್ನೆ ಮಾಡಿದ್ದಾರೆ. ಆದರೆ ನಾನು ಯಾವುದೇ ಅರ್ಜಿ ಸಲ್ಲಿಸಿಲ್ಲ. ಸದ್ಯ ನಾನು ಫ್ರಾಂಚೈಸಿ ಕ್ರಿಕೆಟ್ನಲ್ಲಿಯೇ ಮುಂದುವರಿಯಲು ಬಯಸಿದ್ದೇನೆ ಎಂದು ಹೇಳಿದರು. ಈ ಮೂಲಕ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ಅನುಮಾನಕ್ಕೆ ತೆರೆ ಎಳೆದರು.
“ನಾನು ಫ್ರಾಂಚೈಸ್ ಲೀಗ್‌ನಲ್ಲಿ ಪಾಲ್ಗೊಳ್ಳುವಿಕೆಯಿಂದ ಸಂತೋಷವಾಗಿದ್ದೇನೆ. ನಾನು ಅದನ್ನು ನಿಜವಾಗಿಯೂ ಆನಂದಿಸುತ್ತಿದ್ದೇನೆ. ಇದು ಆಕರ್ಷಕ ವಿಷಯವಾಗಿದೆ ಮತ್ತು ನಾನು ಕೆಲವು ಅದ್ಭುತ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದೇನೆ ಮತ್ತು ಈ ಸಮಯದಲ್ಲಿ ನಾನು ಸಂತೋಷವಾಗಿದ್ದೇನೆ” ಎಂದು ಹೇಳಿದರು.
ಗುರುವಾರವಷ್ಟೇ ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್ ಕೂಡ ತಾನು ಭಾರತ ತಂಡದ ಕೋಚ್ ಆಗಲು ಆಸಕ್ತಿ ಹೊಂದಿಲ್ಲ. ಕೋಚ್ ಹುದ್ದಗೆ ಅರ್ಜಿಯೂ ಸಲ್ಲಿಸಲ್ಲ ಎಂದು ಹೇಳಿದ್ದರು. ಇದೀಗ ಫ್ಲವರ್ ಕೂಡ ಪಾಂಟಿಂಗ್ ನಿಲುವನ್ನೇ ಹೊಂದಿದ್ದಾರೆ. ವಿವಿಎಸ್ ಲಕ್ಷ್ಮಣ್ ಕೂಡ ಆಸಕ್ತಿ ಹೊಂದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ
ನೂತನ ಕೋಚ್ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯೂ ಈ ಕೋಚ್ಗೆ ಸಿಗಲಿದೆ. ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಇದೇ 27ರಂದು ಕೊನೆಯ ದಿನವಾಗಿದೆ. ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ. ಆಯ್ಕೆಯಾದ ಹೊಸ ಕೋಚ್ ಟಿ20 ವಿಶ್ವಕಪ್ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಕೋಚ್, ಪ್ರಸ್ತುತ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೋಚ್ ಆಗಿರುವ ಜಸ್ಟಿನ್ ಲ್ಯಾಂಗರ್(Justin Langer) ಕೂಡ ಭಾರತ ತಂಡದ ಕೋಚಿಂಗ್ ಬಗ್ಗೆ ಆಸಕ್ತರಾಗಿದ್ದಾರೆ. ಐಪಿಎಲ್ ವೇಳೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅವರು, ಭಾರತ ತಂಡ ಕೋಚಿಂಗ್ ಮಾಡುವುದು ಅಸಾಮಾನ್ಯ ಪಾತ್ರವಾಗಿದೆ. ನನಗೂ ಕೋಚಿಂಗ್ ಮಾಡಲು ಕುತೂಹಲವಿದೆ. ಇಲ್ಲಿ ಅಪಾರ ಸಂಖ್ಯೆಯ ಕ್ರಿಕೆಟ್ ಪ್ರತಿಭೆಗಳಿದ್ದಾರೆ ಎಂದು ಹೇಳಿದ್ದರು.