ಮುಂಬಯಿ: ಟೀಮ್ ಇಂಡಿಯಾದ(India Head Coach) ಮುಂದಿನ ಕೋಚ್(team india coach) ಯಾರಾಗಲಿದ್ದಾರೆ ಎಂಬ ಕತೂಹಲದ ಮಧ್ಯೆ ಹಲವು ಮಾಜಿ ಆಟಗಾರ ಹೆಸರುಗಳು ಕೇಳಿ ಬರುತ್ತಿವೆ. ಇದೀಗ ಈ ಪಟ್ಟಿಗೆ ವಿಶ್ವ ಕಂಡ ಶ್ರೇಷ್ಠ ಆಟಗಾರ, ಸತತವಾಗಿ 2 ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್(Ricky Ponting) ಕೋಚ್ ಆಗಲಿದ್ದಾರೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ ರಿಕಿ ಪಾಂಟಿಂಗ್ ಭಾರತ ತಂಡದ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಪಾಂಟಿಂಗ್ ಅವರು ವಿರಾಟ್ ಕೊಹ್ಲಿಯನ್ನು ಗುಣಗಾನ ಮಾಡಿದ್ದಾರೆ. ಈ ಟ್ವೀಟ್ ಅನ್ನು ಐಸಿಸಿ ಕೂಡ ತನ್ನ ಅಧಿಕೃತ ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದೆ. ಇದನೆಲ್ಲ ನೋಡುವಾಗ ಪಾಂಟಿಂಗ್ ಭಾರತ ತಂಡದ ಕೋಚ್ ಆಗುವುದು ಬಹುತೇಕ ಖಚಿತ ಎನ್ನುವಂತಿದೆ.
ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಕೋಚ್, ಪ್ರಸ್ತುತ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೋಚ್ ಆಗಿರುವ ಜಸ್ಟಿನ್ ಲ್ಯಾಂಗರ್(Justin Langer) ಕೂಡ ಭಾರತ ತಂಡದ ಕೋಚಿಂಗ್ ಬಗ್ಗೆ ಆಸಕ್ತರಾಗಿದ್ದಾರೆ. ಐಪಿಎಲ್ ವೇಳೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅವರು, ಭಾರತ ತಂಡ ಕೋಚಿಂಗ್ ಮಾಡುವುದು ಅಸಾಮಾನ್ಯ ಪಾತ್ರವಾಗಿದೆ. ನನಗೂ ಕೋಚಿಂಗ್ ಮಾಡಲು ಕುತೂಹಲವಿದೆ. ಇಲ್ಲಿ ಅಪಾರ ಸಂಖ್ಯೆಯ ಕ್ರಿಕೆಟ್ ಪ್ರತಿಭೆಗಳಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ India Head Coach: ಭಾರತ ತಂಡದ ಕೋಚ್ ಆಗಲು ಫ್ಲೆಮಿಂಗ್ಗೆ ಮನವೊಲಿಸುವಂತೆ ಧೋನಿಗೆ ಮನವಿ ಮಾಡಿದ ಬಿಸಿಸಿಐ!
ಬಿಸಿಸಿಐ ಕೂಡ ವಿದೇಶಿ ಕೋಚ್ ಆಯ್ಕೆಯ ಬಗ್ಗೆ ಆಲೋಚನೆ ನಡೆಸುತ್ತಿದೆ ಎನ್ನುವ ಮಾತುಗಳು ಈ ಹಿಂದೆಯೇ ಕೇಳಿ ಬಂದಿತ್ತು. 2011ರಲ್ಲಿ ಗ್ಯಾರಿ ಕಸ್ಟನ್ ಮಾರ್ಗದರ್ಶನದಲ್ಲಿ ಭಾರತ 2ನೇ ಬಾರಿಗೆ ವಿಶ್ವಕಪ್ ಗೆದ್ದಿತ್ತು. ಬಳಿಕ 2013ರಲ್ಲಿ ಡಂಕನ್ ಪ್ಲೆಚರ್ ಮಾರ್ಗದರ್ಶನದಲ್ಲಿ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಭಾರತ ಇದುವರೆಗೂ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ರವಿಶಾಸ್ತ್ರಿ ಮತ್ತು ರಾಹುಲ್ ದ್ರಾವಿಡ್ ಮಾರ್ಗದರ್ಶನಲ್ಲಿ 2 ಏಕದಿನ ವಿಶ್ವಕಪ್ ಆಡಿದರೂ ಭಾರತ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ವಿದೇಶಿ ಕೋಚ್ ಆಯ್ಕೆಯೇ ಉತ್ತಮ ಎಂದು ಬಿಸಿಸಿಐ ಯೋಚಿಸಿದೆ ಎನ್ನಲಾಗಿದೆ.
ನೂತನ ಕೋಚ್ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯೂ ಈ ಕೋಚ್ಗೆ ಸಿಗಲಿದೆ. ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಇದೇ 27ರಂದು ಕೊನೆಯ ದಿನವಾಗಿದೆ. ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ. ಆಯ್ಕೆಯಾದ ಹೊಸ ಕೋಚ್ ಟಿ20 ವಿಶ್ವಕಪ್ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.