Site icon Vistara News

India Head Coach: ಭಾರತ ತಂಡದ ಕೋಚ್​ ಆಗಲು ಫ್ಲೆಮಿಂಗ್​ಗೆ ಮನವೊಲಿಸುವಂತೆ ಧೋನಿಗೆ ಮನವಿ ಮಾಡಿದ ಬಿಸಿಸಿಐ!

India Head Coach

India Head Coach:BCCI To Ask MS Dhoni To Convince CSK’s Stephen Fleming To Take India Head Coach Job

ನವದೆಹಲಿ: ಟೀಮ್​ ಇಂಡಿಯಾದ(India Head Coach) ಮುಂದಿನ ಕೋಚ್​ ಯಾರಾಗಲಿದ್ದಾರೆ ಎಂಬ ಕತೂಹಲದ ಮಧ್ಯೆ ಬಿಸಿಸಿಐ(BCCI) ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಕೋಚ್​ ಆಗಿರುವ ಸ್ಟೀಫನ್ ಫ್ಲೆಮಿಂಗ್(Stephen Fleming) ಅವರನ್ನು ಕೋಚ್​ ಹುದ್ದೆ ಅಲಂಕರಿಸುವಂತೆ ಮನವೊಲಿಸಲು ಧೋನಿ(MS Dhoni) ಬಳಿ ಮನವಿ ಮಾಡಿದೆ ಎಂದು ವರದಿಯಾಗಿದೆ.

ಹಿಂದೂಸ್ತಾನ್ ಟೈಮ್ಸ್‌ನ ವರದಿಯ ಪ್ರಕಾರ ಧೋನಿ ಬಳಿ ಬಿಸಿಸಿಐ ಸ್ಟೀಫನ್ ಫ್ಲೆಮಿಂಗ್ ಅವರನ್ನು ಟೀಮ್​ ಇಂಡಿಯಾದ ಕೋಚ್​ ಆಗುವಂತೆ ಮಾತುಕತೆ ನಡೆಸಲು ಕೇಳಿಕೊಂಡಿದೆ ಎಂದು ತಿಳಿದುಬಂದಿದೆ. ಸ್ಟೀಫನ್ ಫ್ಲೆಮಿಂಗ್ ಅವರನ್ನು ಕೋಚ್​ ಹುದ್ದೆಗೆ ನೇಮಿಸಲು ಬಿಸಿಸಿಐ ಎಲ್ಲ ಯೋಜನೆ ನಡೆಸಿತ್ತು. ಇದೇ ವೇಳೆ ಅವರು ತಾನು ಫ್ರಾಂಚೈಸಿ ಕ್ರಿಕೆಟ್​ನಲ್ಲಿ ಇನ್ನೂ ಕೆಲ ಕಾಲ ಕರ್ತವ್ಯನಿರ್ವಹಸುವ ಆಸಕ್ತಿ ಹೊಂದಿದ್ದೇನೆ ಎಂದು ಹೇಳುವ ಮೂಲಕ ಭಾರತ ತಂಡದ ಕೋಚ್​ ಹುದ್ದೆಗೆ ನಿರಾಸಕ್ತಿ ತೋರಿದ್ದರು. ಆದರೆ ಇದೀಗ ಬಿಸಿಸಿಐ ಧೋನಿಯ ಮಧ್ಯಸ್ಥಿಕೆಯಲ್ಲಿ ಅವರ ಮನವೊಲಿಸಲು ಮುಂದಾಗಿದೆ ಎನ್ನಲಾಗಿದೆ.

ರವಿಶಾಸ್ತ್ರಿ ಕೋಚಿಂಗ್​ ಅವಧಿ ಮಕ್ತಾಯದ ಬಳಿಕ ಕೋಚ್​ ಆದ ದ್ರಾವಿಡ್​ ಕೂಡ ಆರಂಭದಲ್ಲಿ ಈ ಹುದ್ದೆಗೆ ಉತ್ಸುಕರಾಗಿರಲಿಲ್ಲ. ಈ ವೇಳೆ ಬಿಸಿಸಿಐ ಅಧ್ಯಕ್ಷರಾಗಿದ್ದ ಗಂಗೂಲಿ ಅವರು ಮನವೊಲಿಸಿ ದ್ರಾವಿಡ್​ ಅವರನ್ನು ಕೋಚ್​ ಹುದ್ದೆಗೇರುವಂತೆ ಮಾಡಿದ್ದರು. ಇದೀಗ ಫ್ಲೆಮಿಂಗ್ ಅವರನ್ನು ಕೂಡ ಧೋನಿಯ ಮೂಲಕ ಕೋಚ್​ ಹುದ್ದೆಗೇರುವಂತೆ ಮಾಡುವ ಪ್ರಯತ್ನದಲ್ಲಿದೆ.

ಇನ್ನೊಂದು ಮೂಲಗಳ ಪ್ರಕಾರ ಧೋನಿ ಅವರು ಭಾರತ ತಂಡದ ಕೋಚ್​ ಆಗಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಧೋನಿ 2021ರಲ್ಲಿ ಭಾರತದ ಆತಿಥ್ಯದಲ್ಲಿ ಯುಎಇಯಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಧೋನಿ ಭಾರತ ತಂಡದ ಮೆಂಟರ್​ ಆಗಿ ಕರ್ತವ್ಯ ನಿರ್ವಹಿಸಿದ್ದರು. ಹೀಗಾಗಿ ಧೋನಿ ಅವರನ್ನು ಕೂಡ ಕೋಚ್​ ಮಾಡುವ ಯೋಚನೆಯೊಂದನ್ನು ಬಿಸಿಸಿಐ ನಡೆಸಿದೆ ಎನ್ನಲಾಗಿದೆ. ಧೋನಿ ನಾಯಕತ್ವದಲ್ಲಿ ಭಾರತ ಏಕದಿನ, ಟಿ20 ಮತ್ತು ಐಸಿಸಿ ಚಾಂಪಿಯನ್ಸ್​ ಟ್ರೋಫಿ ಗೆದ್ದಿತ್ತು. ಇದಾಗ ಬಳಿಕ ಭಾರತ ತಂಡ ಇದುವರೆಗೂ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ.

ಇದನ್ನೂ ಓದಿ Head Coach: ದ್ರಾವಿಡ್ ಬಳಿಕ ಕೋಚ್ ಹುದ್ದೆ ನಿರಾಕರಿಸಿದ ಟೀಮ್​ ಇಂಡಿಯಾದ ಸ್ಟಾರ್​ ಮಾಜಿ ಆಟಗಾರ

ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಲು ಇದೇ 27ರಂದು ಕೊನೆಯ ದಿನವಾಗಿದೆ. ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ. ಆಯ್ಕೆಯಾದ ಹೊಸ ಕೋಚ್‌ ಟಿ20 ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಕೋಚ್​, ಪ್ರಸ್ತುತ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಕೋಚ್​ ಆಗಿರುವ ಜಸ್ಟಿನ್ ಲ್ಯಾಂಗರ್(Justin Langer) ಕೂಡ ಭಾರತ ತಂಡದ ಕೋಚಿಂಗ್​ ಬಗ್ಗೆ ಆಸಕ್ತರಾಗಿದ್ದಾರೆ. ಐಪಿಎಲ್​ ವೇಳೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅವರು, ಭಾರತ ತಂಡ ಕೋಚಿಂಗ್​ ಮಾಡುವುದು ಅಸಾಮಾನ್ಯ ಪಾತ್ರವಾಗಿದೆ. ನನಗೂ ಕೋಚಿಂಗ್​ ಮಾಡಲು ಕುತೂಹಲವಿದೆ. ಇಲ್ಲಿ ಅಪಾರ ಸಂಖ್ಯೆಯ ಕ್ರಿಕೆಟ್ ಪ್ರತಿಭೆಗಳಿದ್ದಾರೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯನ್ನು ಗಮನಿಸುವಾಗ ಕೋಚಿಂಗ್​ ಹುದ್ದೆಗೆ ಅರ್ಜಿ ಸಲ್ಲಿಸುವ ಸೂಚನೆಯೊಂದು ಲಭಿಸಿದೆ. 

Exit mobile version