Site icon Vistara News

INDvsNZ T20 : ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ 21 ರನ್​ ಸೋಲು, ಸರಣಿಯಲ್ಲಿ 0-1 ಹಿನ್ನಡೆ

suryakumar yadav

ರಾಂಚಿ : ಬ್ಯಾಟಿಂಗ್​ ವೈಫಲ್ಯ ಎದುರಿಸಿದ ಭಾರತ ತಂಡ ಪ್ರವಾಸಿ ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿಯ (INDvsNZ T20) ಮೊದಲ ಪಂದ್ಯದಲ್ಲಿ 21 ರನ್​ಗಳ ಸೋಲಿಗೆ ಒಳಗಾಗಿದೆ. ಇದರೊಂದಿಗೆ ಸರಣಿಯಲ್ಲಿ 0-1 ಹಿನ್ನಡೆ ಎದುರಿಸಿತು. ಕೊನೇ ಹಂತದಲ್ಲಿ ಹೆಚ್ಚುವರಿ ರನ್​ಗಳನ್ನು ಎದುರಾಳಿ ತಂಡಕ್ಕೆ ಬಿಟ್ಟು ಕೊಟ್ಟಿರುವುದು ಹಾಗೂ ಪ್ರಮುಖ ಬ್ಯಾಟರ್​ಗಳು ವೈಫಲ್ಯ ಎದುರಿಸಿದ್ದೇ ಭಾರತದ ಸೋಲಿಗೆ ಪ್ರಮುಖ ಕಾರಣವಾಯಿತು.

ಇಲ್ಲಿನ ಜೆಎಸ್​ಸಿಎ ಇಂಟರ್​ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಜನವರಿ 27ರಂದು ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ನ್ಯೂಜಿಲ್ಯಾಂಡ್​ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 176 ರನ್​ ಬಾರಿಸಿತು. ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಭಾರತ ತಂಡ ತನ್ನ ಪಾಲಿನ 20 ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್​ಗೆ 155 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ದೊಡ್ಡ ಗುರಿಗೆ ಪ್ರತಿಯಾಗಿ ಆಡಿದ ಭಾರತ ತಂಡ ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿತು. 10 ರನ್​ಗಳಿಗೆ ಮೊದಲ ವಿಕೆಟ್​ ಕಳೆದುಕೊಂಡಿತಲ್ಲದೆ 15 ರನ್​ಗಳಿಗೆ ಮೂರು ವಿಕೆಟ್​ ನಷ್ಟ ಮಾಡಿಕೊಂಡು ಸಂಕಷ್ಟಕ್ಕೆ ಬಿತ್ತು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್​ ಯಾದವ್​ (47) ಹಾಗೂ ನಾಯಕ ಹಾರ್ದಿಕ್ ಪಾಂಡ್ಯ (21) ಉತ್ತಮ ಜತೆಯಾಟ ನೀಡುವ ಮುನ್ಸೂಚನೆ ಕೊಟ್ಟರು. ಕೊನೆಯಲ್ಲಿ ವಾಷಿಂಗ್ಟನ್​ ಸುಂದರ್​ 28 ಎಸೆತಗಳಲ್ಲಿ 50 ರನ್​ ಬಾರಿಸಿ ಹೋರಾಟ ಸಂಘಟಿಸಿದರೂ ಗೆಲುವು ತಂದುಕೊಡಲು ಅವರಿಗೆ ಸಾಧ್ಯವಾಗಲಿಲ್ಲ.

ಅದಕ್ಕಿಂತ ಮೊದಲು ಬ್ಯಾಟ್​ ಮಾಡಿದ ನ್ಯೂಜಿಲ್ಯಾಂಡ್​ ತಂಡ ಉತ್ತಮ ಪಡೆಯಿತು. ಡ್ಯಾರಿಲ್​ ಮಿಚೆಲ್​ (59*) ಹಾಗೂ ಡೆವೋನ್​ ಕಾನ್ವೆಯ (52) ಅರ್ಧ ಶತಕಗಳ ನೆರವಿನಿಂದ ಉತ್ತಮ ಮೊತ್ತ ಪೇರಿಸಿತು. ಭಾರತ ತಂಡ ಆರಂಭದಲ್ಲಿ ಹಿಡಿತ ಪಂದ್ಯದ ಮೇಲೆ ಹಿಡಿತ ಸಾಧಿಸಿಕೊಂಡರೂ ಕೊನೇ ಹಂತದಲ್ಲಿ ಹೆಚ್ಚು ರನ್​ ಬಿಟ್ಟುಕೊಟ್ಟಿತು.

Exit mobile version